ನಾವು ಮೊದಲೇ ಹೇಳಿಲ್ವಾ... ರಹಾನೆ ಹೇಳಿಕೆಗೆ ಕೆರಳಿ ಕೆಂಡವಾಗಿ ತಿರುಗೇಟು ಕೊಟ್ಟ ಕ್ರಿಕೆಟ್ ಆಸ್ಟ್ರೇಲಿಯಾ! Ajinkya Rahane
- ನಿನ್ನೆ ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 19ನೇ ಐಪಿಎಲ್ ಆವೃತ್ತಿಯ ಎರಡನೇ ಪಂದ್ಯ
- ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಮುಂಬೈ ಇಂಡಿಯನ್ಸ್
- ತಮ್ಮ ತಂಡ ಸೋಲಿಗೆ ಕಳಪೆ ಬೌಲಿಂಗ್ ಕಾರಣ ಎಂದ ಕೆಕೆಆರ್ ನಾಯಕ ಅಂಜಿಕ್ಯ ರಹಾನೆ
- ಕ್ಯಾಮರನ್ ಗ್ರೀನ್ ಬಗ್ಗೆ ರಹಾನೆ ನೀಡಿದ್ದ ಹೇಳಿಕೆಗೆ ತಿರುಗೇಟು ಕೊಟ್ಟ ಕ್ರಿಕೆಟ್ ಆಸ್ಟ್ರೇಲಿಯಾ
Ajinkya Rahane : ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಕ್ಯಾಮರನ್ ಗ್ರೀನ್ ಅವರು ಬೌಲಿಂಗ್ ಮಾಡಲು ಕ್ರಿಕೆಟ್ ಆಸ್ಟ್ರೇಲಿಯಾ ಇನ್ನೂ ಅನುಮತಿ ನೀಡಿಲ್ಲ ಎಂಬ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಹೇಳಿಕೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಖಾರವಾಗಿಯೇ ಪ್ರತಿಕ್ರಿಯೆ ನೀಡಿದೆ.
ನಿನ್ನೆ (ಮಾರ್ಚ್ 29) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 220 ರನ್ ಗಳಿಸಿತು. ತಂಡದ ಪರ ನಾಯಕ ರಹಾನೆ (40 ಎಸೆತಗಳಲ್ಲಿ 67 ರನ್) ಮತ್ತು ಅಂಗ್‌ಕ್ರಿಶ್ ರಘುವಂಶಿ (29 ಎಸೆತಗಳಲ್ಲಿ 51 ರನ್) ಅರ್ಧಶತಕ ಗಳಿಸಿ ಮಿಂಚಿದರು. ಮುಂಬೈ ಬೌಲರ್‌ಗಳಲ್ಲಿ ಶಾರ್ದೂಲ್ ಠಾಕೂರ್ ಮೂರು ವಿಕೆಟ್ ಮತ್ತು ಹಾರ್ದಿಕ್ ಪಾಂಡ್ಯ ಒಂದು ವಿಕೆಟ್ ಪಡೆದರು.
ಇದಾದ ಬಳಿಕ ಕೆಕೆಆರ್ ನೀಡಿದ ಬೃಹತ್ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ 19.1 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಮುಂಬೈ ಪರ ರಿಯಾನ್ ರಿಕಲ್ಟನ್ (43 ಎಸೆತಗಳಲ್ಲಿ 81 ರನ್) ಮತ್ತು ರೋಹಿತ್ ಶರ್ಮಾ (38 ಎಸೆತಗಳಲ್ಲಿ 78 ರನ್) ಅರ್ಧಶತಕ ಗಳಿಸಿದರು. ಕೆಕೆಆರ್ ಪರ ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ ಮತ್ತು ಸುನಿಲ್ ನರೈನ್ ತಲಾ ಒಂದು ವಿಕೆಟ್ ಪಡೆದರು.
ಕಳಪೆ ಬೌಲಿಂಗ್
ಪಂದ್ಯದ ನಂತರ ಮಾತನಾಡಿದ ನಾಯಕ ಅಜಿಂಕ್ಯ ರಹಾನೆ, ಈ ಪಿಚ್‌ನಲ್ಲಿ 220 ರಿಂದ 225 ರನ್‌ಗಳು ಉತ್ತಮ ಸ್ಕೋರ್ ಆಗಿದೆ. ನಮ್ಮ ತಂಡದ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಆಡಿದರು. ಆದಾಗ್ಯೂ, ನಮ್ಮ ಬೌಲಿಂಗ್ ವಿಭಾಗದಲ್ಲಿ ಅನುಭವದ ಕೊರತೆಯಿದೆ. ನಮ್ಮ ಹುಡುಗರು ಇನ್ನೂ ಕಲಿಯುತ್ತಿದ್ದಾರೆ ಎಂದು ರಹಾನೆ ಹೇಳಿದರು. ಮುಂಬೈ ಇಂಡಿಯನ್ಸ್ ತಂಡ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿದ್ದು, ಅವರ ವಿರುದ್ಧ ಇಂತಹ ಬೌಲಿಂಗ್ ಲೈನ್ ಅಪ್ ಜೊತೆ ಆಡುವುದು ಒಂದು ದೊಡ್ಡ ಪಾಠವಾಗಿದೆ. ವೈಭವ್ ಅರೋರಾ ಅವರನ್ನು ಹೊರತುಪಡಿಸಿ, ಕಾರ್ತಿಕ್ ಮತ್ತು ಮುಜರಬಾನಿಗೆ ಐಪಿಎಲ್ನಲ್ಲಿ ಆಡಿದ ಅನುಭವವಿಲ್ಲ. ಇಬ್ಬರು ಅನುಭವಿ ಸ್ಪಿನ್ನರ್‌ಗಳಿದ್ದರೂ, ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ಗಳು ತುಂಬಾ ಚೆನ್ನಾಗಿ ಆಡಿದರು. ಈ ಪಂದ್ಯದಿಂದ ನಮ್ಮ ಬೌಲರ್‌ಗಳು ಕಲಿಯುವುದು ಬಹಳಷ್ಟಿದೆ ಎಂದು ಅವರು ಹೇಳಿದರು.
ಕ್ರಿಕೆಟ್ ಆಸ್ಟ್ರೇಲಿಯಾವನ್ನೇ ಕೇಳಿ
25 ಕೋಟಿ ರೂ. ಕೊಟ್ಟು ಖರೀದಿ ಮಾಡಿದ ಕ್ಯಾಮರನ್ ಗ್ರೀನ್ ಅವರಿಂದ ಏಕೆ ಬೌಲಿಂಗ್ ಮಾಡಿಸುತ್ತಿಲ್ಲ ಎಂದು ಕೇಳಿದಾಗ, ನೀವದನ್ನು ಕ್ರಿಕೆಟ್ ಆಸ್ಟ್ರೇಲಿಯಾವನ್ನೇ ಕೇಳಬೇಕು ರಹಾನೆ ಅವರು ಹೇಳಿದರು. ಬೆನ್ನುನೋವಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕ್ಯಾಮರನ್ ಗ್ರೀನ್ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಇನ್ನೂ ಸಂಪೂರ್ಣವಾಗಿ ಬೌಲಿಂಗ್ ಮಾಡಲು ಅನುಮತಿ ನೀಡಿಲ್ಲ ಎಂದು ರಹಾನೆ ಖಾರವಾಗಿ ಮಾತನಾಡಿದರು. ಈ ಮೂಲಕ ಪರೋಕ್ಷವಾಗಿ ಗ್ರೀನ್ ಬೌಲಿಂಗ್ ಮಾಡುವುದನ್ನು ಆಸ್ಟ್ರೇಲಿಯಾ ತಡೆಯುತ್ತಿದೆ ಎಂದರು.
ಉತ್ತರ ಕೊಟ್ಟ ಕ್ರಿಕೆಟ್ ಆಸ್ಟ್ರೇಲಿಯಾ
ರಹಾನೆ ಅವರ ಈ ಹೇಳಿಕೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಪ್ರತಿಕ್ರಿಯಿಸಿದ್ದು, ಟಿ20 ವಿಶ್ವಕಪ್ ಸಮಯದಲ್ಲಿ ಗ್ರೀನ್ ಅವರು ಬೆನ್ನಿನ ಗಾಯದಿಂದ ಬಳಲುತ್ತಿದ್ದರು ಎಂದು ಹೇಳಿದೆ. ಈ ಸಮಯದಲ್ಲಿ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರಿನ್ನೂ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ, ಸ್ವಲ್ಪ ಸಮಯದವರೆಗೆ ಬೌಲಿಂಗ್‌ನಿಂದ ಹೊರಗುಳಿಯುತ್ತಾರೆ ಎಂದೂ ಹೇಳಿದೆ. ಅಲ್ಲದೆ, ಐಪಿಎಲ್‌ನ ಮೊದಲ 10 ರಿಂದ 12 ದಿನಗಳವರೆಗೆ ಗ್ರೀನ್ ಬೌಲಿಂಗ್ ಮಾಡುವುದಿಲ್ಲ ಎಂದು ಕೋಲ್ಕತ್ತ ನೈಟ್ ರೈಡರ್ಸ್‌ಗೆ ಈಗಾಗಲೇ ತಿಳಿಸಿದ್ದೇವೆ. ಅವರಿಗೆ ಎಲ್ಲವೂ ತಿಳಿದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಾರವಾಗಿ ಪ್ರತಿಕ್ರಿಯೆ ನೀಡಿದೆ.
ಅಂದಹಾಗೆ, ಹರ್ಷಿತ್ ರಾಣಾ ಮತ್ತು ಮತೀಶ ಪತಿರಾಣ ಈಗಾಗಲೇ ಗಾಯಗಳಿಂದಾಗಿ ಕೆಕೆಆರ್ ತಂಡದಿಂದ ಹೊರಗುಳಿದಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ಗ್ರೀನ್ ಬೌಲಿಂಗ್ ಮಾಡದಿರುವುದು ಕೆಕೆಆರ್‌ನ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಆಸೀಸ್ ಮಂಡಳಿ ಹೇಳಿರುವಂತೆ, ಮುಂದಿನ ಮೂರು ಪಂದ್ಯಗಳಲ್ಲಿ ಅವರು ಗ್ರೀನ್ ಬೌಲಿಂಗ್ ಮಾಡುವ ಸಾಧ್ಯತೆಯಿಲ್ಲ. ಅದರ ನಂತರವೂ, ಕ್ರಿಕೆಟ್ ಆಸ್ಟ್ರೇಲಿಯಾ ಅವರಿಗೆ ಅನುಮತಿ ನೀಡಿದರೆ ಮಾತ್ರ ಬೌಲಿಂಗ್ ಮಾಡುತ್ತಾರೆ. ಇಲ್ಲದಿದ್ದರೆ, ಅವರು ಬ್ಯಾಟ್ಸ್‌ಮನ್ ಆಗಿ ಮುಂದುವರಿಯುವ ಸಾಧ್ಯತೆಯಿದೆ, (ಏಜೆನ್ಸೀಸ್).