ಆಕ್ರಮಣ ಮಿಶ್ರಿತ ತಾಳ್ಮೆಯಿಂದ ಯಶ ಎಂದ ಅಮೋಲ್ ಮುಜುಮ್ದಾರ್
ಲಂಡನ್: ಸರಿಯಾದ ಪ್ರಮಾಣದ ಆಕ್ರಮಣದಿಂದ ಕೂಡಿದ ತಾಳ್ಮೆಯಿಂದಲೇ ಭಾರತ ಮಹಿಳಾ ತಂಡಕ್ಕೆ ಲಾರ್ಡ್ಸ್ ಅಂಗಣದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಐತಿಹಾಸಿಕ ಟೆಸ್ಟ್ ಗೆಲುವು ಒಲಿಯಿತು ಎಂದು ಮುಖ್ಯ ಕೋಚ್ ಅಮೋಲ್ ಮುಜುಮ್ದಾರ್ (Amol Muzumdar) ಹೇಳಿದ್ದಾರೆ. ಜತೆಗೆ ಶತಕಸಾಧಕಿ ಯಸ್ತಿಕಾ ಭಾಟಿಯಾ ಅವರ ವಿಶೇಷ ಇನಿಂಗ್ಸ್ ಮತ್ತು ವೇಗಿ ಕ್ರಾಂತಿ ಗೌಡ್ ಅವರ ನಿಯಂತ್ರಿತ ಲೈನ್ ಮತ್ತು ಲೆಂತ್ಅನ್ನು ಶ್ಲಾಘಿಸಿದ್ದಾರೆ.
"ಇದು ನಮ್ಮ ಪಾಲಿಗೆ ಪರಿಪೂರ್ಣ ಪಂದ್ಯದಂತಿತ್ತು. ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಿದೆವು. ಅದಕ್ಕಿಂತ ಉತ್ತಮವಾಗಿ ಬೌಲಿಂಗ್ ಮಾಡಿದೆವು. ಫೀಲ್ಡಿಂಗ್ ಕೂಡ ಉತ್ತಮವಾಗಿತ್ತು. ಬ್ಯಾಟಿಂಗ್ನಲ್ಲಿ ಹೆಚ್ಚು ಶಿಸ್ತುಬದ್ಧವಾಗಿದ್ದೆವು. ಬೌಲಿಂಗ್ನಲ್ಲೂ ಅದನ್ನು ಪಾಲಿಸಿದೆವು' ಎಂದು ಮುಜುಮ್ದಾರ್ ಹೇಳಿದ್ದಾರೆ.
"ಯಸ್ತಿಕಾ ಇನಿಂಗ್ಸ್ ವಿಶೇಷವಾಗಿತ್ತು. ಲಾರ್ಡ್ಸ್ನಲ್ಲಿ ಇದು ಬಂದಿದ್ದು ಇನ್ನಷ್ಟು ವಿಶೇಷ. ಇದನ್ನು ಅವರು ಮಾತ್ರವಲ್ಲದೆ, ಇಡೀ ತಂಡ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಕ್ರಾಂತಿ ಕೂಡ ಪಂದ್ಯದುದ್ದಕ್ಕೂ ಉತ್ತಮ ಲೈನ್ ಮತ್ತು ಲೆಂತ್ ಕಾಯ್ದುಕೊಂಡರು. ಇದಕ್ಕೆ ತಕ್ಕ ಲವನ್ನೂ ಪಡೆದರು' ಎಂದು ಮುಜುಮ್ದಾರ್ ಅಭಿಪ್ರಾಯಪಟ್ಟರು.