ಏಷ್ಯಾಕಪ್​ ಗೆದ್ದ ಬೆನ್ನಲ್ಲೇ ನಖ್ವಿ ಮುಖಕ್ಕೆ ಹೊಡೆದಂತೆ ಉತ್ತರಿಸಿದ ಟೀಮ್ ಇಂಡಿಯಾ  
ಕ್ರಿಕೆಟ್

ನಮಗೆ ಟ್ರೋಫಿ ಕೊಟ್ಟರೆ... ಏಷ್ಯಾಕಪ್​ ಗೆದ್ದ ಬೆನ್ನಲ್ಲೇ ನಖ್ವಿ ಮುಖಕ್ಕೆ ಹೊಡೆದಂತೆ ಉತ್ತರಿಸಿದ ಟೀಮ್ ಇಂಡಿಯಾ ​ | Asia Cup Trophy

ಪ್ರಮುಖ ಮುಖ್ಯಾಂಶಗಳು

  • ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಏಷ್ಯಾಕಪ್ ಟೂರ್ನಿಯ ಫೈನಲ್
  • ಫೈನಲ್​ ಪಂದ್ಯದಲ್ಲಿ ಲಂಕಾ ಸಿಂಹಿಣಿಯರ ಘರ್ಜನೆ ಅಡಗಿಸಿದ ಟೀಮ್ ಇಂಡಿಯಾ ವನಿತೆಯರು
  • 72 ರನ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದರೂ ಟ್ರೋಫಿ ಪಡೆಯಲು ನಿರಾಕರಿಸಿದ ಭಾರತ
Asia Cup Trophy: ನಿನ್ನೆ (ಸೆ.13) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಏಷ್ಯಾಕಪ್ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಲಂಕಾ ಸಿಂಹಿಣಿಯರ ಘರ್ಜನೆ ಅಡಗಿಸಿದ ಟೀಮ್ ಇಂಡಿಯಾ ವನಿತೆಯರು,  72 ರನ್​ಗಳಿಂದ ಭರ್ಜರಿ ಗೆಲುವು ದಾಖಲಿಸಿ ಏಷ್ಯಾ ಕಪ್ 2026ರ​ ಪಟ್ಟವನ್ನು ಮುಡಿಗೇರಿಸಿಕೊಂಡರು. ಆದರೆ, ಟ್ರೋಫಿಗೆ ಮುತ್ತಿಡುವ ಅವಕಾಶವನ್ನು ಕಿತ್ತುಕೊಂಡ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಯ ಗುಳ್ಳೆನರಿ ಬುದ್ಧಿಗೆ ಇದೀಗ ಟೀಮ್ ಇಂಡಿಯಾ ಖಡಕ್ ಪ್ರತಿಕ್ರಿಯೆಯನ್ನೇ ಕೊಟ್ಟಿದೆ. 

ಪಣತೊಟ್ಟ ಟೀಮ್ ಇಂಡಿಯಾ

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಹಾಗೂ ಪಿಸಿಬಿ ಅಧ್ಯಕ್ಷರೂ ಆಗಿರುವ ಮೊಹ್ಸಿನ್ ನಖ್ವಿ, ಮಹಿಳಾ ಏಷ್ಯಾಕಪ್​ ಫೈನಲ್​ ಪಂದ್ಯಕ್ಕೆ ಆಗಮಿಸಿದಾಗಲೇ ಹರ್ಮನ್​ಪ್ರೀತ್​ ಕೌರ್​ ಪಡೆಯ ಟ್ರೋಫಿಗೆ ಮುತ್ತಿಡುವ ಕನಸು ಕಮರಿ ಹೋಯಿತು. ಆದರೂ, ಗೆದ್ದು ಅಹಂಕಾರದ, ನರಿ ಬುದ್ಧಿ ತೋರುವ ಪಾಕಿಸ್ತಾನಿಯ ಮುಂದೆ ಸಂಭ್ರಮವನ್ನು ತೋರಿಸೋಣ ಎಂದು ಪಣತೊಟ್ಟ ಟೀಮ್ ಇಂಡಿಯಾ, ಅಂದುಕೊಂಡಂತೆ ಭರ್ಜರಿ ಗೆಲುವಿನ ಮೂಲಕ ನಖ್ವಿಗೆ ಮೊದಲ ಹಂತದ ಉತ್ತರ ನೀಡಿತು.
ಫೈನಲ್ ಗೆದ್ದ ಬಳಿಕ ಎಂದಿನಂತೆ ಟ್ರೋಫಿ ಹಸ್ತಾಂತರಿಸಲು ನಖ್ವಿಯೇ ವೇದಿಕೆ ಮೇಲೆ ನಿಂತಿದ್ದನ್ನು ನೋಡಿದ ಹರ್ಮನ್​ ಪಡೆ, ಪ್ರಶಸ್ತಿ ಪಡೆಯಲು ಕಿಂಚಿತ್ತು ಅಲುಗಾಡಲಿಲ್ಲ. ಇದನ್ನು ನೋಡಿದ ನಖ್ವಿ ಮತ್ತು ಆಯೋಜಕರ ತಂಡ, ರನರ್-ಅಪ್​ ತಂಡ ಶ್ರೀಲಂಕಾಗೆ ಪ್ರಶಸ್ತಿಯನ್ನು ನೀಡಿ, ಟೀಮ್​ ಇಂಡಿಯಾ ಪ್ರತಿಕ್ರಿಯೆಗೆ ಸಮಯ ಕೊಡದೆ, ಕೆಲವೇ ಸಮಯದಲ್ಲಿ ಇಡೀ ಜಾಗ ಖಾಲಿ ಮಾಡಿದರು. ಈ ನಡೆಗೆ ಸಂಬಂಧಿಸಿದಂತೆ ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಕಡೆಗೂ ಟೀಮ್ ಇಂಡಿಯಾ ಉತ್ತರಿಸಿದೆ.  

ಸಮಸ್ಯೆಯೇ ಅಲ್ಲ

"ನಮ್ಮ ತಂಡ ಅಧಿಕೃತವಾಗಿ ಏಷ್ಯಾ ಕಪ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಟ್ರೋಫಿ ಕೊಡಲಿ ಅಥವಾ ಕೊಡದಿರಲಿ, ಅದು ನಮಗೆ ಯಾವುದೇ ರೀತಿಯಲ್ಲೂ ಸಮಸ್ಯೆಯೇ ಅಲ್ಲ. ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದಿರುವುದು ಬಿಸಿಸಿಐನ ಗಟ್ಟಿಯಾದ ನಿರ್ಧಾರವಾಗಿದೆ. ಈ ಬಗ್ಗೆ ನಾವು ಹೆಚ್ಚೇನೂ ಹೇಳಲು ಹೋಗಲ್ಲ" ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಟೀಮ್ ಇಂಡಿಯಾ ಮಹಿಳೆಯರ ತಂಡದ ಕೋಚ್ ಅಮೋಲ್ ಮುಜುಂದಾರ್ ಹೇಳಿದರು.
ಕಳೆದ ವರ್ಷ ದುಬೈನಲ್ಲಿ ನಡೆದ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ಪುರುಷರ ತಂಡಕ್ಕೂ ಇದೇ ಸಮಸ್ಯೆ ಎದುರಾಯಿತು. ಪಾಕಿಸ್ತಾನ ಹೀನಾಯ ಸೋಲುಂಡಿದ್ದರಿಂದ ಮೊದಲೇ ಕುಪಿತಗೊಂಡ ಮೊಹ್ಸಿನ್​ ನಖ್ವಿ, ಸೂರ್ಯಕುಮಾರ್ ಯಾದವ್​ ಪಡೆ ಫೈನಲ್​ ಗೆದ್ದರೂ ಕೂಡ ತನ್ನಿಂದ ಟ್ರೋಫಿ ಪಡೆಯಲು ಹಿಂದೇಟು ಹಾಕಿದರು ಎಂಬ ಒಂದೇ ಕಾರಣಕ್ಕೆ ಸಿಡಿಮಿಡಿಗೊಂಡು ಇಂದಿಗೂ ಭಾರತಕ್ಕೆ ಟ್ರೋಫಿ ಹಸ್ತಾಂತರಿಸಿಲ್ಲ. 
ಈ ವಿವಾದಕ್ಕೆ ಸ್ವತಃ ಬಿಸಿಸಿಐ ಮತ್ತು ಐಸಿಸಿ ಮಧ್ಯೆಪ್ರವೇಶಿಸಿ, ಪುರುಷರ ಏಷ್ಯಾ ಕಪ್​ ವಿಜೇತ ಭಾರತ ತಂಡಕ್ಕೆ ಟ್ರೋಫಿಯನ್ನು ಹಸ್ತಾಂತರಿಸುವುದು ನಿಮ್ಮ ಜವಾಬ್ದಾರಿ ಎಂದು ಹೇಳಿದರೂ ಸಹ ಇಂದಿಗೂ ತನ್ನೊಂದಿಗೆಯೇ ಟ್ರೋಫಿ ಇಟ್ಟುಕೊಂಡಿರುವ ಕುತಂತ್ರಿ ನಖ್ವಿ, ಭಾರತೀಯ ಆಟಗಾರರು ತನ್ನಿಂದಲೇ ಅದನ್ನು ಸ್ವೀಕರಿಸಬೇಕು. ಇಲ್ಲವೇ, ಅದು ತನ್ನ ಕೊಠಡಿಯಲ್ಲೇ ಉಳಿಯಲಿದೆ ಎಂದು ಆಡಿದ ಸೊಕ್ಕಿನ ಮಾತುಗಳು ಈಗ ಮಹಿಳೆಯರ ತಂಡಕ್ಕೂ ತಟ್ಟಿದೆ ಎಂಬುದೇ ಕ್ರಿಕೆಟ್​ ಪ್ರಿಯರ ಬೇಸರ,(ಏಜೆನ್ಸೀಸ್).