ಆರ್ಸಿಬಿಗೆ ಸತತ 2 ಕಪ್ ಗೆದ್ದುಕೊಟ್ಟ ನಾಯಕ ರಜತ್ ಪಾಟೀದಾರ್ ಈಗ 'ಚೀತಾ' ಬೇಟೆಗೆ ರೆಡಿ...! Rajat Patidar
- ಸತತ ಎರಡನೇ ಬಾರಿಗೆ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಆರ್ಸಿಬಿಯ ಐಪಿಎಲ್ ಟ್ರೋಫಿ ಬರವನ್ನು ನೀಗಿಸಿದ ಯಶಸ್ವಿ ನಾಯಕನೆಂಬ ಹೆಗ್ಗಳಿಕೆ ರಜತ್ ಪಾಟೀದಾರ್ ಪಾತ್ರ
- ರೋಹಿತ್ ಶರ್ಮಾ ಮತ್ತು ಎಂ.ಎಸ್. ಧೋನಿ ನಂತರ ಈ ಸಾಧನೆ ಮಾಡಿದ ಅಪರೂಪದ ನಾಯಕ
- ಐಪಿಎಲ್ ಬೆನ್ನಲ್ಲೇ ತಮ್ಮ ತವರು ನೆಲದಲ್ಲಿ ನಡೆಯಲಿರುವ ಮಧ್ಯಪ್ರದೇಶ ಲೀಗ್ ಟ್ವೆಂಟಿ-20 ಸಿಂಧಿಯಾ ಕಪ್ಗೆ ಸಜ್ಜು
Rajat Patidar : ರಜತ್ ಪಾಟೀದಾರ್ ಅವರ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ಸತತ ಎರಡನೇ ಬಾರಿಗೆ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ರೋಹಿತ್ ಶರ್ಮಾ ಮತ್ತು ಎಂ.ಎಸ್. ಧೋನಿ ನಂತರ ಈ ಸಾಧನೆ ಮಾಡಿದ ಅಪರೂಪದ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಮೇ 31ರಂದು ಮುಕ್ತಾಯವಾದ 19ನೇ ಆವೃತ್ತಿಯ ಐಪಿಎಲ್ನಲ್ಲಿ ಬ್ಯಾಟ್ಸ್‌ಮನ್ ಆಗಿ 500 ಕ್ಕೂ ಹೆಚ್ಚು ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದ ಪಾಟೀದಾರ್, ಇದೀಗ ತಮ್ಮ ತವರು ನೆಲದಲ್ಲಿ ನಡೆಯಲಿರುವ ಮಧ್ಯಪ್ರದೇಶ ಲೀಗ್ ಟ್ವೆಂಟಿ-20 ಸಿಂಧಿಯಾ ಕಪ್‌ನಲ್ಲಿ 'ಗ್ವಾಲಿಯರ್ ಚೀತಸ್' ತಂಡವನ್ನು ಮುನ್ನಡೆಸಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ.
ಕಳೆದ 2025ರ ಸೀಸನ್‌ನಲ್ಲಿ ಸೆಮಿಫೈನಲ್ ತಲುಪಿಯೂ ಕೂದಲೆಳೆಯ ಅಂತರದಲ್ಲಿ ಫೈನಲ್ ಅವಕಾಶ ತಪ್ಪಿಸಿಕೊಂಡಿದ್ದ ಗ್ವಾಲಿಯರ್ ಚೀತಸ್ ತಂಡಕ್ಕೆ, ಈ ಬಾರಿ ರಜತ್ ಪಾಟೀದಾರ್ ಅವರ ಉಪಸ್ಥಿತಿ ಭಾರಿ ಆತ್ಮವಿಶ್ವಾಸ ತಂದಿದೆ.
ಮಧ್ಯಪ್ರದೇಶ ತಂಡವು 2021-22ರಲ್ಲಿ ಆದಿತ್ಯ ಶ್ರೀವಾತ್ಸವ ಅವರ ನಾಯಕತ್ವದಲ್ಲಿ ಐತಿಹಾಸಿಕ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಟೀದಾರ್ ಅವರ ಆಗಮನವು ತಂಡದ ಯುವ ಆಟಗಾರರಿಗೆ ಆನೆಬಲ ನೀಡಲಿದ್ದು, ನಾಳೆ ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಾರೆ ಮಾಧವ್ ತಿವಾರಿ ನಾಯಕತ್ವದ 'ಉಜ್ಜಯಿನಿ ಫಾಲ್ಕನ್ಸ್' ವಿರುದ್ಧ ಗ್ವಾಲಿಯರ್ ಚೀತಸ್ ತನ್ನ 2026ರ ಅಭಿಯಾನವನ್ನು ಆರಂಭಿಸಲಿದೆ.
ತವರು ನೆಲದಲ್ಲಿ ಮರಳಿ ಕ್ರಿಕೆಟ್ ಆಡುವುದು ಯಾವಾಗಲೂ ಒಂದು ವಿಶೇಷ ಅನುಭವ ನೀಡುತ್ತದೆ. ಕಳೆದ ಕೆಲವು ತಿಂಗಳುಗಳು ಮರೆಯಲಾಗದಂತಿದ್ದರೂ, ಪ್ರತಿಯೊಂದು ಹೊಸ ಟೂರ್ನಿಯೂ ಹೊಸ ಸವಾಲುಗಳನ್ನು ತರುತ್ತದೆ," ಎಂದು ರಜತ್ ಪಾಟೀದಾರ್ ಹೇಳಿದ್ದಾರೆ. ರಾಜ್ಯದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಮಧ್ಯಪ್ರದೇಶ ಲೀಗ್ (MPL) ಒಂದು ಅತ್ಯುತ್ತಮ ವೇದಿಕೆಯಾಗಿದೆ ಎಂದು ತಿಳಿಸಿದ ಅವರು, ಈ ಬಾರಿ ಉತ್ತಮ ಕ್ರಿಕೆಟ್ ಆಡುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವುದೇ ತಮ್ಮ ತಂಡದ ಮುಖ್ಯ ಗುರಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).