ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ತಂಡದ ನಾಯಕ
- ಟಿ20 ವಿಶ್ವಕಪ್‌ನಲ್ಲಿ ದ.ಆಫ್ರಿಕಾ ಎದುರು ಟೀಮ್ ಇಂಡಿಯಾಗೆ ಹೀನಾಯ ಸೋಲು
- ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್-8 ಪಂದ್ಯದಲ್ಲಿ 74 ರನ್‌ಗಳ ಭಾರಿ ಅಂತರದಿಂದ ಸೋಲುಂಡ ಭಾರತ
- ಈ ಸಮಯದಲ್ಲಿ ವಿರಾಟ್ ಕೊಹ್ಲಿ ಇರಬಾರದಿತ್ತೇ ಎಂದ ಫ್ಯಾನ್ಸ್
ಗುಜರಾತ್: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಸೂಪರ್-8 ಹಂತದ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ಮೆಗಾ ಟೂರ್ನಮೆಂಟ್‌ನ ಭಾಗವಾಗಿ ನಿನ್ನೆ (ಫೆ.22) ಅಹಮದಾಬಾದ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ 74 ರನ್‌ಗಳ ಭಾರಿ ಅಂತರದಿಂದ ಸೋಲುಂಡಿತು. ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲವಾಯಿತು. ಟೀಮ್ ಇಂಡಿಯಾ ಸೋತ ಬೆನ್ನಲ್ಲೇ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆಗಳ ಸರದಾರ, ಕಿಂಗ್ ಕೊಹ್ಲಿ ಹೆಸರು ಟ್ರೆಂಡ್ ಆಯಿತು. ಅಸಲಿಗೆ ಭಾರತ ಸೋತಿದ್ದಕ್ಕೂ ವಿರಾಟ್ ಹೆಸರು ಮುನ್ನೆಲೆಗೆ ಬಂದಿದ್ದಕ್ಕೂ ಏನು ಸಂಬಂಧ ಎಂಬ ಪ್ರಶ್ನೆಗೆ ಹೀಗಿದೆ ನೋಡಿ ಉತ್ತರ.
ಹರಿಣರ ಪಡೆ ನೀಡಿದ 188 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ಟೀಮ್ ಇಂಡಿಯಾ ವಿಫಲವಾಯಿತು. ತಂಡದ ಆಡಳಿತ ಮಂಡಳಿ ಮಾಡಿದ ಕೆಲವು ತಪ್ಪುಗಳು ಮೆನ್ ಇನ್ ಬ್ಲೂ ತಂಡದ ಸೋಲಿಗೆ ಮುಖ್ಯ ಕಾರಣವಾಯಿತು ಎಂಬುದು ಒಂದೆಡೆಯಾದರೆ, ಕೊಟ್ಟ ಗುರಿಯನ್ನು ತಲುಪಲು ತಂಡದ ಓಪನರ್ಸ್ನಿಂದ ಹಿಡಿದು ಮಿಡಲ್ ಆರ್ಡರ್ ಹಾಗೂ ಆಲ್ರೌಂಡರ್ಗಳು ಮುಗ್ಗರಿಸಿದ್ದು ನಿಜಕ್ಕೂ ದುರಂತ. ಸದ್ಯ ಇದು ಕ್ರಿಕೆಟ್ ಪ್ರಿಯರು, ಮಾಜಿ ಹಿರಿಯ ಕ್ರಿಕೆಟಿಗರು ಮತ್ತು ದಿಗ್ಗಜರಿಗೆ ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ.
ಈ ಮಧ್ಯೆ, ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್, ದಾಖಲೆಗಳ ಸರದಾರ, ರನ್ಮಷಿನ್ ವಿರಾಟ್ ಕೊಹ್ಲಿ ಅವರನ್ನು ಅನೇಕ ಕ್ರಿಕೆಟ್ ಅಭಿಮಾನಿಗಳು ಒಂದು ನಿಮಿಷ ನೆನಪಿಸಿಕೊಂಡರು. ಏಕೆ ನಾವು ಕಿಂಗ್ ಕೊಹ್ಲಿಯನ್ನು ಚೇಸ್ಮಾಸ್ಟರ್ ಎಂದು ಕರೆಯುತ್ತೇವೆ ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿದರು. ಇದೇ ಸಮಯದಲ್ಲಿ ತಂಡದಲ್ಲಿ ಕೊಹ್ಲಿ ಇದ್ದಿದ್ರೆ ನಮಗಿಂತ ಹೀನಾಯ ಸೋಲು ಬರುತ್ತಿತ್ತೇ? ಎಂದು ಅವರ ಹಳೆಯ ಇನ್ನಿಂಗ್ಸ್ ಅನ್ನು ಮುನ್ನೆಲೆಗೆ ತಂದರು.
ಮೂರೇ ಬಾರಿ...
ಈ ಅಂಕಿ ಅಂಶವನ್ನು ನಾವಿಲ್ಲಿ ಗಮನಿಸಲೇಬೇಕು. ಭಾರತ ತನ್ನ ಟಿ20 ವಿಶ್ವಕಪ್ ಇತಿಹಾಸದಲ್ಲಿ 150ಕ್ಕಿಂತ ಹೆಚ್ಚು ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದು ಕೇವಲ ಮೂರು ಬಾರಿ ಮಾತ್ರ. ಅದು 2014ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 173, 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ 161 ಮತ್ತು 2022ರಲ್ಲಿ ಪಾಕಿಸ್ತಾನ ವಿರುದ್ಧ 160. ಅಸಲಿಗೆ ಈ ಮೂರು ಪಂದ್ಯಗಳಲ್ಲಿಯೂ ಒಂದೇ ಒಂದು ಸಾಮಾನ್ಯ ಅಂಶವಿದೆ. ಅದೇ ವಿರಾಟ್ ಕೊಹ್ಲಿ. ಕಾರಣ, ಈ ಮೂರು ಪಂದ್ಯಗಳಲ್ಲಿಯೂ ಗುರಿಯನ್ನು ಚೇಸ್ ಮಾಡುವಾಗಲೇ ಗೆದ್ದಿರುವುದು. ಅದು ಕೊಹ್ಲಿ ಅವರ ಇನ್ನಿಂಗ್ಸ್ನಿಂದಲೇ.
ಇದಕ್ಕೆ ಹೇಳೋದು ಕೊಹ್ಲಿ ಇಸ್ ಚೇಸ್ಮಾಸ್ಟರ್!
ಮೊದಲು ಪಂದ್ಯದಲ್ಲಿ 51 ಎಸೆತಗಳಲ್ಲಿ 82 ರನ್, 44 ಎಸೆತಗಳಲ್ಲಿ 72 ರನ್, ಮತ್ತು ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ 53 ಎಸೆತಗಳಲ್ಲಿ 82 ರನ್ ಬಾರಿಸಿದ ಕೊಹ್ಲಿ, ಆಯಾ ತಂಡಗಳು ನೀಡಿದ ಗುರಿಯನ್ನು ತಮ್ಮ ಸ್ಫೋಟಕ ಇನ್ನಿಂಗ್ಸ್ ಮೂಲಕ ಬೆನ್ನಟ್ಟಿದ್ದು ಇತಿಹಾಸ. ಇದಕ್ಕೆ ಇಂದಿಗೂ ಕೊಹ್ಲಿಯನ್ನು ಅಭಿಮಾನಿಗಳು ಚೇಸ್ಮಾಸ್ಟರ್ ಹಾಗೂ ಕಿಂಗ್ ಕೊಹ್ಲಿ ಎಂದು ನೆನಪಿಸಿಕೊಳ್ಳೋದು. ನಿನ್ನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಲು ಪರದಾಡುತ್ತಿದ್ದ ಸಂದರ್ಭದಲ್ಲಿ ಕ್ರಿಕೆಟ್ ಪ್ರಿಯರಿಗೆ ಕೊಹ್ಲಿ ಅನುಪಸ್ಥಿತಿ ಕಾಡಿದ್ದಂತು ಅಕ್ಷರಶಃ ನಿಜ.
ಕೊಹ್ಲಿ ಬಗ್ಗೆ ಸೌತ್ ಆಫ್ರಿಕಾ ಕ್ಯಾಪ್ಟನ್ ಮಾತು
ಡೇವಿಡ್ ಮಿಲ್ಲರ್ ಮತ್ತು ಡೆವಾಲ್ಡ್ ಬ್ರೆವಿಸ್ ಅವರ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಅವರ ಉತ್ತಮ ಜೊತೆಯಾಟ ತಂಡದ ಸ್ಕೋರ್ ಅನ್ನು ಇನ್ನಷ್ಟು ಹೆಚ್ಚಿಸಿತು. ಭಾರತೀಯ ಬೌಲರ್‌ಗಳು ಇನ್ನಿಂಗ್ಸ್‌ನ ಆರಂಭದಲ್ಲಿ ಮತ್ತು ಕೊನೆಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ, ಮಿಡಲ್ ಆರ್ಡರ್ನಲ್ಲಿ ನಮ್ಮವರು ಬ್ಯಾಟಿಂಗ್ ಮಾಡಿದ ರೀತಿ ಎರಡೂ ತಂಡಗಳ ನಡುವಿನ ವ್ಯತ್ಯಾಸಕ್ಕೆ ಕಾರಣವಾಯಿತು. ಭಾರತದ ಟಾಪ್ ಆರ್ಡರ್ ಅನ್ನು ಬಹುಬೇಗನೇ ಕಳಿಸುವಲ್ಲಿ ಯಶಸ್ವಿಯಾದೆವು. ನಮ್ಮ ಪುಣ್ಯ, ನಮಗೆ ಸವಾಲು ಹಾಕಲು ಈ ಬಾರಿ ಕೊಹ್ಲಿ ಇರಲಿಲ್ಲ ಎಂದರು,(ಏಜೆನ್ಸೀಸ್).