ಟೀಮ್ ಇಂಡಿಯಾ ದಿಗ್ಗಜ ಕ್ರಿಕೆಟಿಗ ರೋಹಿತ್ ಶರ್ಮ
- ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯವೇ ರೋಹಿತ್ ಕೊನೇ ಮ್ಯಾಚ್
- ಲಾರ್ಡ್ಸ್ ಮೈದಾನದಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯ?
- ಕಡೆಗೂ ಸ್ಪಷ್ಟನೆ ನೀಡಿದ ಬಿಸಿಸಿಐ ಕಾರ್ಯದರ್ಶಿ
ನವದೆಹಲಿ: ಭಾನುವಾರ (ಜು.19) ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ನಡೆಯಲಿರುವ ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವೇ ರೋಹಿತ್ ಶರ್ಮಾ (Rohit Sharma) ಅವರ ಅಂತಾರಾಷ್ಟ್ರೀಯ ಕಡೆಯ ಮ್ಯಾಚ್ ಎಂಬ ಸುದ್ದಿಗಳು ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ ಬೆನ್ನಲ್ಲೇ ಸ್ವತಃ ಬಿಸಿಸಿಐ ಬೇರೆ ದಾರಿಯಿಲ್ಲದೆ ಸ್ಪಷ್ಟನೆ ನೀಡಿದೆ.
ಟೀಮ್ ಇಂಡಿಯಾದ ದಿಗ್ಗಜ, ಸ್ಟಾರ್ ಆರಂಭಿಕ ಬ್ಯಾಟ್ಸ್ಮನ್, ಅತ್ಯಂತ ಯಶಸ್ವಿ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ತಮ್ಮ ಕೊನೆಯ ಏಕದಿನ ಪಂದ್ಯವನ್ನು ಇಂಗ್ಲೆಂಡ್ ಎದುರು ಲಾರ್ಡ್ಸ್ ಮೈದಾನದಲ್ಲಿ ಆಡಲಿದ್ದಾರೆ ಎಂಬ ಗುಮಾನಿಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಈ ವಿಷಯ ರೋಹಿತ್ ಅಭಿಮಾನಿಗಳಲ್ಲಿ ತೀವ್ರ ಗೊಂದಲ ಹಾಗೂ ಬೇಸರಕ್ಕೆ ಕಾರಣವಾಗಿದೆ. ಈಗಾಗಲೇ ಹಿಟ್ಮ್ಯಾನ್ ಅವರ ಹೆತ್ತವರು ಸಹ ಇಂಗ್ಲೆಂಡ್ಗೆ ಆಗಮಿಸಿರುವುದು ಇದು ವಿದಾಯ ಸೂಚನೆ ನಿಜ ಎನ್ನುವಂತೆ ಮಾಡಿದೆ.
ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯ ರೋಹಿತ್ ಶರ್ಮಾ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಮ್ಯಾಚ್ ವದಂತಿಗೆ ಉತ್ತರಿಸಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಸರಣಿ ನಿರ್ಣಾಯಕ ಪಂದ್ಯವೇ ರೋಹಿತ್ ಅವರಿಗೆ ಕೊನೆಯಲ್ಲ. ನಿವೃತ್ತಿ ಕುರಿತಂತೆ ಅಥವಾ ಕಡೆಯ ಪಂದ್ಯ ಎನ್ನುವ ಯಾವುದೇ ವಿಷಯಗಳು ಹಿರಿಯ ಕ್ರಿಕೆಟಿಗನೊಂದಿಗೆ ಚರ್ಚೆಯಾಗಿಲ್ಲ. ಇದು ಫ್ಯಾನ್ಸ್ ಮತ್ತು ಸಾಮಾಜಿಕ ಜಾಲತಾಣಗಳ ಚರ್ಚೆಗಳಿಗಷ್ಟೇ ಸೀಮಿತ ಎಂದು ಗೊಂದಲ ಬಗೆಹರಿಸಿದ್ದಾರೆ.
2027ರ ವಿಶ್ವಕಪ್ ರೇಸ್‌ನಿಂದ ರೋಹಿತ್ ಹೊರಗೆ?
ಈಗಾಗಲೇ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾ, 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಗುರಿ ಹೊಂದಿದ್ದರು. ಆದರೆ, ಬಿಸಿಸಿಐ ಆಯ್ಕೆ ಸಮಿತಿಯು ಮುಂದಿನ ವಿಶ್ವಕಪ್ ಯೋಜನೆಯಿಂದ ರೋಹಿತ್ರನ್ನು ಕೈಬಿಡುವ ಮೂಲಕ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ಗೆ ಆರಂಭಿಕ ಸ್ಥಾನ ನೀಡಲು ನಿರ್ಧರಿಸಲಾಗಿದೆ ಎಂಬ ಸುದ್ದಿಯೂ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಆದರ, ಈ ವಿಚಾರಕ್ಕೆ ಸೈಕಿಯಾ ಅವರಿಂದ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ,(ಏಜೆನ್ಸೀಸ್).