ಆರ್‌ಸಿಬಿ ಫ್ರಾಂಚೈಸಿ, ಸಿಇಒ ಆದರ್ ಪೂನಾವಲ್ಲ
ಬೆಂಗಳೂರು: ಕಳೆದ 18 ವರ್ಷಗಳಿಂದ ಈ ಸಲ ಕಪ್ ನಮ್ದೆ ಅಂತಾ ಹೇಳಿ ಹೇಳಿ ಬೇಸರಗೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ಅಭಿಮಾನಿಗಳಿಗೆ 2025 ಮರೆಯಲಾಗದ ವರ್ಷ (ಎರಡು ವಿಷಯ). ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಖುಷಿ ಒಂದೆಡೆಯಾದರೆ, ಆ ಗೆಲುವಿನ ಸಂಭ್ರಮನ್ನು ಕಸಿದುಕೊಂಡ ಮಹಾ ದುರಂತ ಇನ್ನೊಂದೆಡೆ. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಬಲಿಷ್ಠ ತಂಡವಾಗಿ ಉಳಿದಿರುವ ಹಾಗೂ ಅತಿ ಹೆಚ್ಚು ನಿಯತ್ತಿನ ಅಭಿಮಾನಿಗಳನ್ನು ಹೊಂದಿರುವ ಫ್ರಾಂಚೈಸಿ ಎಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಈ ತಂಡ ಒಂದಲ್ಲ, ಒಂದು ವಿಚಾರಗಳಿಂದ ಸುದ್ದಿಯಲ್ಲಿ ಇದ್ದೇ ಇರುತ್ತದೆ ಅನ್ನೋದಕ್ಕೆ ಇದೊಂದು ವರದಿ ಸಾಕ್ಷಿ.
ಸೀರಮ್ ಇನ್ಸ್ಟಿಟ್ಯೂಟ್ ಸಿಇಒ ಆಗಿರುವ ಆದರ್ ಪೂನವಾಲ್ಲಾ, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಕಣ್ಣಿಟ್ಟಿರುವುದು ಹಲವರ ಗಮನ ಸೆಳೆದಿದೆ. ಇದಕ್ಕೆ ಕಾರಣ ಅವರು ಮಾಡಿರುವ ಇತ್ತೀಚಿಗಿನ ಟ್ವೀಟ್ (ಪ್ರಸ್ತುತ ಎಕ್ಸ್). ಮುಂದಿನ ಕೆಲವು ತಿಂಗಳಲ್ಲಿ ಐಪಿಎಲ್ನ ಬಲಿಷ್ಠ ಫ್ರಾಂಚೈಸಿ ಆರ್ಸಿಬಿಯನ್ನು ಖರೀದಿಸಲು ನಾನು ಸ್ಪರ್ಧಾತ್ಮಕ ಬಿಡ್ನಲ್ಲಿ ಭಾಗಿಯಾಗುತ್ತೇನೆ ಎಂದು ಘೋಷಿಸಿದ್ದಾರೆ. ಸದ್ಯ ಈ ಟ್ವೀಟ್ ಆರ್‌ಸಿಬಿ ಫ್ಯಾನ್ಸ್ಗಳ ಗಮನ ಸೆಳೆದಿದ್ದು, ಇನ್ನೂ ಯಾರೆಲ್ಲ ಬಿಡ್ಡಿಂಗ್ನಲ್ಲಿ ಪಾಲ್ಗೊಳ್ಳಬಹುದು ಎಂದು ಯೋಚಿಸುತ್ತಿದ್ದಾರೆ.
ಷೇರು ಪಡೆಯಲು ಬಾಲಿವುಡ್ ನಟ ಆಸಕ್ತಿ?
ವರದಿಗಳ ಪ್ರಕಾರ, ಬಾಲಿವುಡ್ ನಟ ರಣಬೀರ್ ಕಪೂರ್ ಆರ್‌ಸಿಬಿಯಲ್ಲಿ ಸುಮಾರು 300ರಿಂದ 350 ಕೋಟಿ ರೂ.ಗೆ ಶೇ.2ರಷ್ಟು ಷೇರು ಖರೀದಿಸಲು ತೆರೆಮರೆಯಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಈ ಕುರಿತಾಗಿ ನಟನಿಂದಲೇ ಆಗಲಿ ಅಥವಾ ಐಪಿಎಲ್ ಫ್ರಾಂಚೈಸಿಯಿಂದಲೇ ಆಗಲಿ ಇಲ್ಲಿಯವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂಬುದು ಗಮನಾರ್ಹ.
2008ರಿಂದ...
ಆರ್‌ಸಿಬಿ ಬಗ್ಗೆ ಹೇಳುವುದಾದರೆ, ಈ ಫ್ರಾಂಚೈಸಿಯನ್ನು 2008ರಲ್ಲಿ ಕಿಂಗ್ಫಿಶರ್ ಮಾಲೀಕರಾಗಿದ್ದ ವಿಜಯ್ ಮಲ್ಯ ಅವರ ಯುಬಿ ಗ್ರೂಪ್ ಸುಮಾರು 111.6 ಮಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ಖರೀದಿಸಿತು. ಅದಾಗಿ ವರ್ಷಗಳ ನಂತರ, ಲಂಡನ್ ಮೂಲದ ಸ್ಪಿರಿಟ್ಸ್ ದೈತ್ಯ ಕಂಪನಿಯಾದ ಡಿಯಾಜಿಯೊ ಯುನೈಟೆಡ್ ಸ್ಪಿರಿಟ್ಸ್ ಜವಾಬ್ದಾರಿ ತೆಗೆದುಕೊಂಡಿತು. ಮತ್ತು 2014ರ ಹೊತ್ತಿಗೆ ಬಹುಪಾಲು ಷೇರುದಾರರಾಗಿ ಹೊರಹೊಮ್ಮಿತು. ಈಗ ಆರ್ಸಿಬಿಯನ್ನು ಖರೀದಿಗೆ ಮುಂದಿಟ್ಟಿರುವ ಸಂಸ್ಥೆ, ಯಾರ ಒಡೆತನಕ್ಕೆ ಬಿಡಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).