ಎಬಿಲಿಟಿ ಸ್ಪೋರ್ಟ್ಸ್ ಲೀಗ್ ಟಿ20
ಬೆಂಗಳೂರು: ಕ್ಷಮತಾ ಇನ್ನೋವೇಷನ್ ಫೌಂಡೇಶನ್ ಮತ್ತು ದಿವ್ಯಾಂಗ್ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ ಆಯೋಜಿಸಿರುವ ಎಬಿಲಿಟಿ ಸ್ಪೋರ್ಟ್ಸ್ ಲೀಗ್ ಟಿ20 ಪಂದ್ಯಾವಳಿ ಮಂಗಳವಾರದಿಂದ ಶನಿವಾರದವರೆಗೆ ಬೆಂಗಳೂರಿನ ಕೆಎಸ್‌ಸಿಎ ಆಲೂರು ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಇದು ಭಾರತದ ಮೊದಲ ವೀಲ್‌ಚೇರ್ ಕ್ರಿಕೆಟ್ ಪಂದ್ಯಾವಳಿ ಆಗಿದೆ. 2018ರಲ್ಲಿ ಆರಂಭವಾದಾಗಿನಿಂದಲೂ ಈ ಲೀಗ್ ಈವರೆಗೆ 600ಕ್ಕೂ ಹೆಚ್ಚು ವೀಲ್‌ಚೇರ್ ಆಟಗಾರರಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತಾ ಬಂದಿರುವುದು ಗಮನಾರ್ಹ.
ಈ ಬಾರಿಯ ಟೇಕ್‌ಸ್ಪೋರ್ಟ್ಸ್ ಎಎಸ್ಎಲ್ ಟಿ20 2025 ಪಂದ್ಯಾವಳಿಯಲ್ಲಿ ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಮತ್ತು ಲಕ್ನೋ ಸೇರಿದಂತೆ ಆರು ತಂಡಗಳು ಭಾಗವಹಿಸುತ್ತಿವೆ. ಭಾರತದ 16 ರಾಜ್ಯಗಳ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಪಂದ್ಯಾವಳಿಯು ಅತ್ಯಂತ ರಾಷ್ಟ್ರದ ಪ್ರಮುಖ ವೀಲ್‌ಚೇರ್ ಕ್ರಿಕೆಟ್ ಪಂದ್ಯಾವಳಿಯಾಗಿ ಮೂಡಿಬರಲಿದೆ.
ಕಳೆದ ಆವೃತ್ತಿ ಸಂದರ್ಭದಲ್ಲಿ ವೃತ್ತಿಪರ ಮಟ್ಟದ ಕ್ರಿಕೆಟ್ ಕಿಟ್ ಮತ್ತು ಸಲಕರಣೆಗಳನ್ನು ನೀಡಿದ್ದ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯು ಈ ಬಾರಿ ಪೂರ್ತಿ ಹಣಕಾಸು ಪ್ರಾಯೋಜಕತ್ವದ ಒದಗಿಸುತ್ತಿದೆ. ಇದರಿಂದ ಈ ಪಂದ್ಯಾವಳಿ ಮತ್ತಷ್ಟು ಉತ್ಕೃಷ್ಟವಾಗಿ ನಡೆಯಲು ಅನುವು ಮಾಡಿಕೊಟ್ಟಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಚೆಕ್ ಹಸ್ತಾಂತರಿಸಿದ್ದಾರೆ. ಈ ಮೂಲಕ ಎಲ್ಲರನ್ನೂ ಒಳಗೊಳ್ಳುವ ಕ್ರೀಡೆಯನ್ನು ಪ್ರೋತ್ಸಾಹಿಸುವ ತಮ್ಮ ಬದ್ಧತೆಯನ್ನು ಸಾರಿದ್ದಾರೆ.
ಎಬಿಲಿಟಿ ಸ್ಪೋರ್ಟ್ಸ್ ಲೀಗ್ ಟಿ20ಯ ಆಯೋಜಕಿ ಕ್ಷಮತಾ ಇನ್ನೋವೇಷನ್ ಫೌಂಡೇಶನ್ ನ ನಿರ್ದೇಶಕಿ ಕ್ಷಮಾ ರಂಗನ್ ಅವರು ಮಾತನಾಡಿ, “ಸೈಕಲ್ ಪ್ಯೂರ್ ಅಗರಬತ್ತಿಯು ನೀಡುತ್ತಿರುವ ನಿರಂತರ ಬೆಂಬಲಕ್ಕೆ ನಾವು ಕೃತಜ್ಞರಾಗಿದ್ದೇವೆ. ಈ ಪಂದ್ಯಾವಳಿಯನ್ನು ನಡೆಸಲು ಮತ್ತು ಬೆಳೆಸಲು ಈ ನೆರವು ಬಹಳ ಮುಖ್ಯವಾಗಿದೆ. ಈ ಹಣಕಾಸಿನ ಬೆಂಬಲದಿಂದ ನಮ್ಮ ಆಟಗಾರರು ಆಟದ ಮೇಲೆಯೇ ಗಮನ ಹರಿಸುವುದು ಸಾಧ್ಯವಾಗಲಿದೆ. ನಾವು ಅವರಿಗೆ ಉತ್ಕೃಷ್ಟ ಕ್ರಿಕೆಟ್ ಅನುಭವ ಒದಗಿಸಲು ಎದುರು ನೋಡುತ್ತಿದ್ದೇವೆ” ಎಂದರು.