ಯುವ ಬ್ಯಾಟರ್ ಅಭಿಷೇಕ್ ಶರ್ಮ
- ನಿನ್ನೆ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಅಭಿಷೇಕ್ ಶರ್ಮ ಡಕ್ಔಟ್
- ಸತತ ಮೂರು ಪಂದ್ಯಗಳಲ್ಲಿ ಒಂದು ರನ್ ಗಳಿಸದೆ ಔಟ್
- ಅಭಿಷೇಕ್ ಶರ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್
Abhishek Sharma: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಅದ್ಭುತ ಲಯ ಕಂಡುಕೊಂಡಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಗೆಲುವಿನ ಓಟ ಮುಂದುವರೆದಿದೆ. ಈಗಾಗಲೇ ಸೂಪರ್ 8 ಹಂತಕ್ಕೆ ನೇರ ಪ್ರವೇಶ ಪಡೆದಿರುವ ಸೂರ್ಯಕುಮಾರ್ ಯಾದವ್ ಪಡೆಗೆ ಕಾಡುತ್ತಿರುವ ಚಿಂತೆಯೇ ಅಭಿಷೇಕ್ ಶರ್ಮ. ಇದು ಕೇವಲ ತಂಡಕ್ಕೆ ಮಾತ್ರವಲ್ಲ, ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳಿಗೂ ಕೂಡ.
3 ಔಟ್
ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಮೂರು ಡಕ್ಔಟ್ ಆಗಿರುವ ಯುವ ಓಪನರ್ ಅಭಿಷೇಕ್ ಶರ್ಮ, ಸದ್ಯ ಫ್ಲಾಪ್ ಪ್ರದರ್ಶನದಿಂದ ಕ್ರಿಕೆಟ್ ಪ್ರೇಮಿಗಳ ಭರವಸೆ, ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಯುಎಸ್ಎ, ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಗಳಲ್ಲಿ ಒಂದೇ ಒಂದು ರನ್ ಗಳಿಸದೆ ಪೆವಿಲಿಯನ್ ಹಾದಿ ಹಿಡಿದ ಅಭಿಷೇಕ್ ವಿರುದ್ಧ ಸದ್ಯ ವ್ಯಾಪಕ ಟ್ರೋಲ್, ಟೀಕೆಗಳು ಸಾಮಾಜಿಕ ಜಾಲತಾಣವನ್ನು ಸುತ್ತುವರೆದಿವೆ.
ಭರವಸೆಯೇ ಇಲ್ಲ?
ಟೀಮ್ ಇಂಡಿಯಾ ಪರ ಸ್ಫೋಟಕ ಇನ್ನಿಂಗ್ಸ್ ಆಡುವ ಸಾಮರ್ಥ್ಯವಿರುವ ಅದ್ಭುತ ಬ್ಯಾಟರ್ ಎಂದೇ ಖ್ಯಾತಿ ಪಡೆದಿರುವ ಅಭಿಷೇಕ್ ಶರ್ಮ, ಕಳೆದ ಟೂರ್ನಿಗಳಲ್ಲಿ ತಮ್ಮ ಅಮೋಘ ಬ್ಯಾಟಿಂಗ್ನಿಂದ ಹಲವು ದಾಖಲೆಗಳನ್ನು ಉಡೀಸ್ ಮಾಡಿದರು. ಅದೇ ಭರವಸೆಯಲ್ಲಿ ಅವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಯಿತು. ಆದರೀಗ, ಮ್ಯಾನೇಜ್ಮೆಂಟ್ ಮತ್ತು ಅಭಿಮಾನಿಗಳು ಆಶಿಸಿದಂತೆ, ಊಹಿಸಿದಂತೆ ಯಾವುದೂ ನಡೆಯುವುದಿರುವುದೇ ಸದ್ಯ ಆಕ್ರೋಶಕ್ಕೆ ಕಾರಣವಾಗಿದೆ.
ಅಭಿಷೇಕ್ ಹೆಸರು ಮತ್ತು ಫೋಟೋಗಳನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿರುವ ನೆಟ್ಟಿಗರು, ಈಗಾಗಲೇ ಮೂರು ಪಂದ್ಯಗಳಲ್ಲಿ ಡಕ್ಔಟ್ ಆಗಿರುವ ಶರ್ಮ, ಇನ್ನೊಂದು ಪಂದ್ಯದಲ್ಲಿ ಆಡಿ ಸಂಸ್ಥೆಗೆ ಬ್ರ್ಯಾಂಡ್ ಅಂಬಾಸಿಡರ್ ಆಗ್ತಾರೆ. ಅದೇ ಇನ್ನೆರಡು ಪಂದ್ಯ ಆಡಿದರೆ, ಒಲಿಂಪಿಕ್ಸ್ಗೆ ರಾಯಭಾರಿಯಾಗುತ್ತಾರೆ ಎಂದು ಲೇವಡಿ ಮಾಡಿದ್ದಾರೆ. ಇದು ಇಲ್ಲಿಗೆ ನಿಂತಿಲ್ಲ. ಇನ್ನೂ ಅನೇಕರು, ತಮಗೆ ಅನಿಸಿದಂತೆಲ್ಲ ಸ್ಟಾರ್ ಬ್ಯಾಟರ್ನನ್ನು ಟ್ರೋಲ್ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಈ ಮಧ್ಯೆ, ಕೆಲವೇ ಕೆಲವರು ಮಾತ್ರ ಅವರು ಮುಂದಿನ ಮ್ಯಾಚ್ನಲ್ಲಿ ಕಮ್ಬ್ಯಾಕ್ ಮಾಡ್ತಾರೆ. ಸ್ಫೋಟಕ ಇನ್ನಿಂಗ್ಸ್ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).