ಗೌತಮ್ ಗಂಭೀರ್ ಮನೆಯಿಂದ ಹೊರನಡೆಯುತ್ತಿರುವ ಅಭಿಷೇಕ್ ಶರ್ಮಾ
- ಕೋಚ್ ಗೌತಮ್ ಗಂಭೀರ್ ಮನೆಯಲ್ಲಿ ಏರ್ಪಡಿಸಿದ್ದ ಔತಣಕೂಟ
- ಔತಣಕೂಟದಿಂದ ಒಬ್ಬರೆ ಹೊರನಡೆದ ಅಭಿಷೇಕ್ ಶರ್ಮಾ
- ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾದ ಘಟನೆ
ನವದೆಹಲಿ: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ (Abhishek Sharma) ಭಾನುವಾರ ಕೋಚ್ ಗೌತಮ್ ಗಂಭೀರ್ ಏರ್ಪಡಿಸಿದ್ದ ಔತಣ ಕೂಟದಿಂದ ಒಬ್ಬರೇ ಹೊರನಡೆದ ಘಟನೆ ಈಗ ಸಾಮಾಜಿಕ ಮಾಧ್ಯಮದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಪ್ರಸ್ತುತ ನಡೆಯುತ್ತಿರುವ ಟಿ.20 ವಿಶ್ವಕಪ್ ಪಂದ್ಯಾವಳಿಯಲ್ಲಿ ಫೆಬ್ರವರಿ 12 ರಂದು ಭಾರತ ದೆಹಲಿಯ ಅರುಣ ಜೇಟ್ಲಿ ಸ್ಟೇಡಿಯಂನಲ್ಲಿ ನಮಿಬೀಯಾ ವಿರುದ್ಧ ಕಣಕ್ಕಿಳಿಯಲಿದ್ದು, ಈ ಪಂದ್ಯಕ್ಕೂ ಮೊದಲು ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ನಿವಾಸದಲ್ಲಿ ಔತಣಕೂಟವನ್ನು ಏರ್ಪಡಿಸಲಾಗಿತ್ತು.
ತಮ್ಮ ನಿವಾಸಕ್ಕೆ ಆಗಮಿಸಿದ ಟೀಮ್ ಇಂಡಿಯಾದ ಆಟಗಾರರನ್ನು ಮತ್ತು ತಂಡದ ಸಿಬ್ಬಂದಿಗಳನ್ನು ಗೌತಮ್ ಗಂಭೀರ್, ಅವರ ಪತ್ನಿ ನತಾಶಾ, ಪುತ್ರಿಯರಾದ ಆಜೀನ್ ಮತ್ತು ಅನೈಜಾ ಹಾರ್ದಿಕವಾಗಿ ಸ್ವಾಗತಿಸಿದರು.
ಸಂಜೆ ಹೊತ್ತಿಗೆ ತಂಡದ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗಳು ಗಂಭೀರ್ ಅವರ ನಿವಾಸವನ್ನು ತಲುಪಿದ್ದರು. ಆದರೆ ಈ ಔತಣಕೂಟದಿಂದ ಅಭಿಷೇಕ್ ಶರ್ಮಾ ನಿರ್ಗಮಿಸಿದ್ದು ಏಕೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಆದರೆ ತಂಡದ ಉಳಿದ ಸದಸ್ಯರು ಮಧ್ಯರಾತ್ರಿಯವರೆಗೆ ಗಂಭೀರ್ ಅವರ ನಿವಾಸದಲ್ಲಿ ಇದ್ದರು ಎಂದು ಹೇಳಲಾಗುತ್ತಿದೆ.
ಟಿ20 ಯ ವಿಶ್ವದ ಅಗ್ರಸ್ಥಾನದಲ್ಲಿರುವ ಅಭಿಷೇಕ್ ಶರ್ಮಾ ಭಾರತ, ಅಮೆರಿಕಾದೊಂದಿಗೆ ಆಡಿದ ಮೊದಲ ಪಂದ್ಯದಲ್ಲಿ ಸೊನ್ನಗೆ ಔಟ್ ಆಗಿದ್ದಕ್ಕೆ ಹೀಗೇ ಮಾಡಿದರೇ ಎಂದು ಕೆಲವರು ಹೇಳಿದರೆ, ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿರುವ ಕಾರಣ ಅವರು ಗಂಭೀರ್ ಅವರ ಮನೆಯಿಂದ ಬೇಗ ನಿರ್ಗಮಿಸಿದರು ಎಂದು ಸಾಮಾಜಿಕ ಮಾದ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ.
ಫೆ. 12 ರಂದು ನಮೀಬಿಯಾ, 15 ರಂದು ಪಾಕಿಸ್ತಾನ
ಆರಂಭಿಕ ಪಂದ್ಯದಲ್ಲಿ ಅಮೆರಿಕವನ್ನು ಸೋಲಿಸಿದ ನಂತರ, ಭಾರತವು ಫೆಬ್ರವರಿ 12 ರಂದು ನಮೀಬಿಯಾವನ್ನು ಎದುರಿಸಲಿದೆ. ಈ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಾಕಿಸ್ತಾನ ಸರ್ಕಾರವು ಭಾರತದೊಂದಿಗೆ ಫೆಬ್ರವರಿ 15 ರಂದು ನಡೆಯಲಿರುವ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ. ಅದರೂ ಈ ಅನಿಶ್ಚಿತತೆ ಕುರಿತು ಇನ್ನೂ ಸ್ಪಷ್ಟ ಚಿತ್ರಣ ದೊರೆಯದ ಹಿನ್ನಲೆ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಕೊಲಂಬೊಗೆ ಪ್ರಯಾಣಿಸಲಿದೆ ಎಂದು ಹೇಳಲಾಗುತ್ತಿದೆ,(ಏಜನ್ಸೀಸ್).