ಅಭಿ ತಬ್ಬಿಬ್ಬು... ನಿಮ್ಮ ಭಾವ ಪ್ರೀತಿಯಿಂದ ಹೇಳಿದ್ರೂ ಕೇಳಲಿಲ್ಲ ಅದಕ್ಕೆ ಕೈ ಹಿಡಿದೆಳೆದೆ ಎಂದ ಯುವತಿ! Abhishek Sharma
- ಮೈದಾನದ ಹೊರಗೆ ಅಹಿತಕರ ಘಟನೆಯೊಂದಕ್ಕೆ ಸಾಕ್ಷಿಯಾದ ಎಸ್‌ಆರ್‌ಎಚ್ ಆಟಗಾರ ಅಭಿಷೇಕ್ ಶರ್ಮಾ
- ಎಸ್‌ಆರ್‌ಎಚ್ ತಂಡದ ಆಟಗಾರರು ಹೋಟೆಲ್ಗೆ ಹೋಗುವಾಗ ಅಭಿಶೇಕ್ ಅವರ ಕೈ ಹಿಡಿದು ಎಳೆದ ಯುವತಿ
- ನಿಮ್ಮ ಭಾವನಿಗೆ ಪ್ರೀತಿಯಿಂದ ಹೇಳಿದರೂ ಕೇಳುತ್ತಿರಲಿಲ್ಲ ಅದಕ್ಕೆ ನಾನು ಈ ರೀತಿ ಮಾಡಬೇಕಾಯಿತು ಎಂದ ಯುವತಿ
- ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ ಫ್ಯಾನ್ ಗರ್ಲ್
Abhishek Sharma : ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ ಇತ್ತೀಚೆಗೆ ಮೈದಾನದ ಹೊರಗೆ ಅಹಿತಕರ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ಶನಿವಾರ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ನಂತರ ತಂಡದ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಅಭಿಷೇಕ್ ಅವರನ್ನು ನೋಡಿದ ಮಹಿಳಾ ಅಭಿಮಾನಿಯೊಬ್ಬರು ಅತೀವ ಉತ್ಸಾಹದಿಂದ ಅವರ ಕೈಯನ್ನು ಬಲವಂತವಾಗಿ ಎಳೆದಾಡಿದ್ದಾರೆ. ಈ ವೇಳೆ ಅಭಿಷೇಕ್ ಕೂಡ ಒಂದು ಕ್ಷಣ ತಬ್ಬಿಬ್ಬಾದರು. ಕೂಡಲೇ ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸಿ ಆ ಹುಡುಗಿಯನ್ನು ತಡೆದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ನಡುವೆ ಭಾರಿ ಚರ್ಚೆಗೆ ಕಾರಣವಾಗಿದೆ. ಇದು ಸ್ಪಷ್ಟವಾದ ಭದ್ರತಾ ಲೋಪ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಅಭಿ ಕೈಹಿಡಿದು ಎಳೆದ ಅಭಿಮಾನಿ, moreofhimshikha ಹೆಸರಿನ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, "ಹುಡುಗಿಯರೇ, ನಿಮ್ಮ ಭಾವನಿಗೆ ಪ್ರೀತಿಯಿಂದ ಹೇಳಿದರೂ ಕೇಳುತ್ತಿರಲಿಲ್ಲ, ಅದಕ್ಕೆ ನಾನು ಈ ರೀತಿ ಮಾಡಬೇಕಾಯಿತು" ಎಂದು ಬರೆದುಕೊಂಡಿದ್ದಾಳೆ. ಯಾವಾಗ ಈ ವಿಡಿಯೋ ವೈರಲ್ ಆಯಿತೋ ಆಕೆಯ ವಿರುದ್ಧ ಆಕ್ರೋಶಗಳ ಸುರಿಮಳೆಯಾಗುತ್ತಿದೆ.
ದಯವಿಟ್ಟು ಅರ್ಥಮಾಡಿಕೊಳ್ಳಿ
ಯಾವಾಗ ಜಾಲತಾಣದಲ್ಲಿ ತನ್ನ ವಿರುದ್ಧ ಟೀಕೆಗಳು ಜಾಸ್ತಿಯಾಯಿತೋ ಅದಕ್ಕೆ ಸ್ಪಷ್ಟನೆಯನ್ನೂ ಮಹಿಳಾ ಅಭಿಮಾನಿ ನೀಡಿದ್ದಾರೆ. ಅಭಿಷೇಕ್ ಶರ್ಮಾ ಮತ್ತು ಅವರ ಅಭಿಮಾನಿಗಳ ಮೇಲಿರುವ ಗೌರವದೊಂದಿಗೆ ಆ ದಿನ ವಾಸ್ತವವಾಗಿ ಏನಾಯಿತು ಎಂಬುದನ್ನು ನಾನು ತಿಳಿಸಲು ಬಯಸುತ್ತೇನೆ. ಅಂತರ್ಜಾಲದಲ್ಲಿ ಅಥವಾ ಆನ್‌ಲೈನ್‌ನಲ್ಲಿ ಕಾಣಿಸುವ ಪ್ರತಿಯೊಂದು ವಿಷಯವೂ ಯಾವಾಗಲೂ ಪೂರ್ಣ ಸತ್ಯವಾಗಿರುವುದಿಲ್ಲ, ಅದರ ಹಿಂದೆ ಬೇರೆಯದೇ ಆದ ಕಥೆಯಿರುತ್ತದೆ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ ಎಂದು ಆ ಯುವತಿ ಹೇಳಿದ್ದಾಳೆ.
ಈ ರೀತಿ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ
ಅಭಿಷೇಕ್ ಶರ್ಮಾ ಅವರು ಬಂದಿದ್ದ ಸ್ಥಳದಲ್ಲೇ ನಾನೂ ಇದ್ದೆ. ಅವರು ಪ್ರಸಿದ್ಧರಾಗುವ ಮೊದಲಿನಿಂದಲೂ ನಾನು ಅವರ ದೊಡ್ಡ ಅಭಿಮಾನಿಯಾಗಿದ್ದರಿಂದ, ಅವರನ್ನು ಭೇಟಿ ಮಾಡಿ ಹಸ್ತಲಾಘವ ಮಾಡಬೇಕೆಂಬ ಆಸೆಯಿಂದ ಅಲ್ಲಿಗೆ ಹೋದೆ. ಆದರೆ, ಅಲ್ಲಿ ಅತಿಯಾದ ಜನಸಂದಣಿ ಇತ್ತು. ಆ ಗಡಿಬಿಡಿಯಲ್ಲಿ ಜನರಿಗೆ ಜಾಗ ಬಿಡಲು ಹೋಗಿ, ಕೈ ಕುಲುಕುವ ಬದಲಿಗೆ ಆಕಸ್ಮಿಕವಾಗಿ ಅವರ ಕೈಯನ್ನು ಬಲವಾಗಿ ಹಿಡಿದುಬಿಟ್ಟೆ. ಇದೆಲ್ಲವೂ ಕ್ಷಣಮಾತ್ರದಲ್ಲಿ ನಡೆದುಹೋಯಿತು ಮತ್ತು ನಾನು ಗಾಬರಿಗೊಂಡೆ. ತಕ್ಷಣವೇ ನನ್ನ ಸಹೋದರ ನನ್ನನ್ನು ಅಲ್ಲಿಂದ ಹಿಂದೆ ಕರೆದೊಯ್ದರು. ಆ ಕ್ಷಣ ನನಗೆ ವಿಶೇಷವೆನಿಸಿದ್ದರಿಂದ ನಾನು ವಿಡಿಯೋ ಪೋಸ್ಟ್ ಮಾಡಿದ್ದೆ ಅಷ್ಟೇ ಆದರೆ, ಅದು ಇಷ್ಟೊಂದು ವೈರಲ್ ಆಗಿ ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಹಿಂಶಿಕಾ ಅವರು ಸ್ಪಷ್ಟನೆ ನೀಡಿದ್ದಾರೆ.
ಮತ್ತೊಂದೆಡೆ, ಜೈಪುರದಲ್ಲಿ ನಡೆದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವಿಗೆ ಕಾರಣರಾದ ಅಭಿಷೇಕ್ ಶರ್ಮಾ, ಐಪಿಎಲ್ 2026ರಲ್ಲಿ ತಮ್ಮ ಮೂರನೇ ಅರ್ಧಶತಕವನ್ನು ಸಿಡಿಸಿದರು. ಕೇವಲ 29 ಎಸೆತಗಳಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 196ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 57 ರನ್ ಗಳಿಸಿದ ಅವರು, ಇದೇ ವೇಳೆ ನ್ಯೂಜಿಲೆಂಡ್‌ನ ದೈತ್ಯ ಆಟಗಾರ ಕೇನ್ ವಿಲಿಯಮ್ಸನ್ ಅವರ ದಾಖಲೆಯನ್ನು ಮೀರಿಸಿದರು. ಎಸ್‌ಆರ್‌ಎಚ್ (SRH) ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅಭಿಷೇಕ್, ಈಗ 82 ಪಂದ್ಯಗಳಿಂದ ಒಟ್ಟು 2,133 ರನ್ ಕಲೆಹಾಕಿದ್ದಾರೆ. ಈ ಮೂಲಕ ಅವರು ವಿಲಿಯಮ್ಸನ್ ಅವರ 2,101 ರನ್‌ಗಳ ದಾಖಲೆಯನ್ನು ಹಿಂದಿಕ್ಕಿದ್ದು, ಅಭಿಷೇಕ್ ಅವರ ಒಟ್ಟಾರೆ ಸಾಧನೆಯಲ್ಲಿ 2 ಶತಕಗಳು ಮತ್ತು 2 ಅರ್ಧಶತಕಗಳು ಸೇರಿವೆ, (ಏಜೆನ್ಸೀಸ್).