Abhishek Sharma 
ಕ್ರಿಕೆಟ್

ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ: ಕೇವಲ 30 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಅಭಿಷೇಕ್ ಶರ್ಮಾ! | Abhishek Sharma

Abhishek Sharma: ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ದಾಖಲೆ ಬರೆದಿದ್ದಾರೆ.
ಪಂದ್ಯದ ಆರಂಭದಲ್ಲಿ ಫಜಲ್ಹಕ್ ಫಾರೂಕಿ ಎಸೆತದಲ್ಲಿ ಎಕ್ಸ್‌ಟ್ರಾ ಕವರ್ ಕಡೆಗೆ ಬೌಂಡರಿ ಬಾರಿಸಿ ಖಾತೆ ತೆರೆದ ಅಭಿಷೇಕ್, ನಂತರ ಅಫ್ಘಾನ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಅಜ್ಮತುಲ್ಲಾ ಉಮರ್‌ಝಾಯಿ ಬೌಲಿಂಗ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿದ ಎಡಗೈ ಬ್ಯಾಟರ್​, ಫಾರೂಕಿ ಅವರ ಶಾರ್ಟ್ ಪಿಚ್ ಎಸೆತಗಳನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದರು.
5ನೇ ಓವರ್‌ನಲ್ಲಿ ಮೊಹಮ್ಮದ್ ನಬಿ ಬೌಲಿಂಗ್‌ಗೆ ಗುರಿಯಾಗಿಟ್ಟುಕೊಂಡ ಅಭಿಷೇಕ್, 3 ಸಿಕ್ಸರ್ ಹಾಗೂ 1 ಫೋರ್ ನೆರವಿನಿಂದ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ರಶೀದ್ ಖಾನ್ ಅವರಂತಹ ವಿಶ್ವ ದರ್ಜೆಯ ಸ್ಪಿನ್ನರ್‌ಗಳಿಗೆ ಭರ್ಜರಿ ಸಿಕ್ಸರ್‌ ಬಾರಿಸುತ್ತಾ, 30ನೇ ಎಸೆತದಲ್ಲಿ ಶತಕ ಪೂರ್ಣಗೊಳಿಸಿ ಹೊಸ ದಾಖಲೆ ನಿರ್ಮಿಸಿದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸಾಹಿಲ್ ಚೌಹಾಣ್ (27 ಎಸೆತ) ಮತ್ತು ಮುಹಮ್ಮದ್ ಫಹಾದ್ (29 ಎಸೆತ) ನಂತರ ಅತ್ಯಂತ ವೇಗವಾಗಿ ಶತಕ ಸಿಡಿಸಿದ ವಿಶ್ವದ 3ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅಭಿಷೇಕ್ ಪಾತ್ರರಾಗಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸಿದ ಆಟಗಾರರು

1. 27 ಎಸೆತ - ಸಾಹಿಲ್ ಚೌಹಾಣ್ (ಎಸ್ಟೋನಿಯಾ) ವಿರುದ್ಧ ಸೈಪ್ರಸ್, ಎಪಿಸ್ಕೋಪಿ, 2024

2. 29 ಎಸೆತ - ಮುಹಮ್ಮದ್ ಫಹಾದ್ (ಟರ್ಕಿ) ವಿರುದ್ಧ ಬಲ್ಗೇರಿಯಾ, ಸೋಫಿಯಾ, 2025

3. 30 ಎಸೆತ - ಅಭಿಷೇಕ್ ಶರ್ಮಾ (ಭಾರತ) ವಿರುದ್ಧ ಅಫ್ಘಾನಿಸ್ತಾನ, ದೆಹಲಿ, 2026

4. 33 ಎಸೆತ - ಜಾನ್ ನಿಕೋಲ್ ಲಾಫ್ಟಿ-ಈಟನ್ (ನಮೀಬಿಯಾ) ವಿರುದ್ಧ ನೇಪಾಳ, ಕೀರ್ತಿಪುರ, 2024

4. 33 ಎಸೆತ - ಸಿಕಂದರ್ ರಾಜಾ (ಜಿಂಬಾಬ್ವೆ) ವಿರುದ್ಧ ಗ್ಯಾಂಬಿಯಾ, ನೈರೋಬಿ (ರುಆರಕಾ), 2024

5. 33 ಎಸೆತ - ಫಿನ್ ಅಲೆನ್ (ದಕ್ಷಿಣ ಆಫ್ರಿಕಾ) ವಿರುದ್ಧ ನ್ಯೂಜಿಲೆಂಡ್, ಕೋಲ್ಕತ್ತಾ, 2026

ಅಂತಿಮವಾಗಿ 108 ರನ್ ಗಳಿಸಿದ್ದಾಗ ರಶೀದ್ ಖಾನ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ರಹಮಾನುಲ್ಲಾ ಗುರ್ಬಾಜ್‌ಗೆ ಕ್ಯಾಚ್ ನೀಡಿ ಅಭಿಷೇಕ್ ನಿರ್ಗಮಿಸಿದರು. ಅವರ ಈ ಬಿರುಗಾಳಿ ಇನಿಂಗ್ಸ್ ಭಾರತ ತಂಡಕ್ಕೆ ಬೃಹತ್ ಮೊತ್ತ ಕಲೆಹಾಕಲು ಬಲವಾದ ಅಡಿಪಾಯ ಹಾಕಿಕೊಟ್ಟಿತು(ಏಜೆನ್ಸೀಸ್​).