ವೈಭವ್ ಸೂರ್ಯವಂಶಿ ಕಿರಿಯ ಸಹೋದರ ಆರ್ಶಿವಾದ್ ಸೂರ್ಯವಂಶಿ
- ವೈಭವ್ ಸೂರ್ಯವಂಶಿ ಹಾದಿಯಲ್ಲೇ ಕಿರಿಯ ಸಹೋದರ ಆರ್ಶಿವಾದ್
- ಅಭ್ಯಾಸದ ಪಂದ್ಯದಲ್ಲೇ ಶತಕದಾಟ ತೋರಿದ ಬಾಲಕ
- ಭಾರತೀಯ ಕ್ರಿಕೆಟ್ ಲೋಕಕ್ಕೆ ಮತ್ತೊಬ್ಬ ವಂಡರ್ ಕಿಡ್ ಆಗಮನ?
Aashirwad Suryavanshi: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಇಡೀ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸಿದ 15 ವರ್ಷ ವೈಭವ್ ಸೂರ್ಯವಂಶಿ, ಒಂದೇ ಆವೃತ್ತಿಯಲ್ಲಿ ಹಲವಾರು ದಾಖಲೆಗಳನ್ನು ಮುರಿದಿದ್ದು ಹೊಸ ಇತಿಹಾಸ. ಬೇಬಿ ಬಾಸ್ ಆಗಿ ಮಿಂಚುತ್ತಿರುವ ಈ ವಂಡರ್ ಕಿಡ್ ಬೆನ್ನಲ್ಲೇ ಮತ್ತೊಬ್ಬ ಸೂರ್ಯವಂಶಿಯ ಸ್ಫೋಟಕ ಬ್ಯಾಟಿಂಗ್ ಈಗ ಅನೇಕರ ಗಮನ ಸೆಳೆದಿದೆ.
ವೈಭವ್ ಸೂರ್ಯವಂಶಿ ಅವರ ಕಿರಿಯ ಸಹೋದರ ಆಶೀರ್ವಾದ್ ಸೂರ್ಯವಂಶಿ ಕೂಡ ಅಣ್ಣನಂತೆ ಕ್ರಿಕೆಟ್ನಲ್ಲಿ ಮಹತ್ತರ ಸಾಧನೆ ಮಾಡಲು ಪಣತೊಟ್ಟಿದ್ದಾರೆ. ಇದಕ್ಕಾಗಿ ಮೈದಾನದಲ್ಲಿ ಸಖತ್ ಬೆವರಿಳಿಸುತ್ತಿರುವ ಅವರು, ಸಮಷ್ಟಿಪುರದಲ್ಲಿ ನಡೆದ ಸ್ಥಳೀಯ ಅಭ್ಯಾಸ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ, 83 ಎಸೆತಗಳಲ್ಲಿ 103 ರನ್ ಕಲೆಹಾಕಿದ್ದಾರೆ.
ಇದು ಆಶೀರ್ವಾದ್ ಅವರು ಬಾರಿಸಿದ ಮೊದಲ ಶತಕ ಎನ್ನಲಾಗಿದೆ. ಹಿರಿಯ ಸಹೋದರ ವೈಭವ್ ಅವರಂತೆಯೇ, ಆರ್ಶಿವಾದ್ ಕೂಡ ಮೈದಾನದಲ್ಲಿ ರನ್‌ಗಳ ಹೊಳೆಯನ್ನು ಹರಿಸುತ್ತಿರುವುದು ಪೋಷಕರಲ್ಲಿ ಮತ್ತು ಕ್ರಿಕೆಟ್ ಅಭಿಮಾನಿಗಳಲ್ಲಿ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಈತನೂ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆಯಬಹುದು, ಸಹೋದರನಂತೆ ಶತಕ ಬಾರಿಸಿ ಹೊಸ ದಾಖಲೆ ಬರೆಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
83 ಎಸೆತ 103 ರನ್
ವೈಭವ್ ಸೂರ್ಯವಂಶಿ ಸಾಮಾನ್ಯವಾಗಿ ಸ್ಫೋಟಕ ಬ್ಯಾಟಿಂಗ್ ಮಾಡುವುದಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದರೆ, ಅವರ ಕಿರಿಯ ಸಹೋದರ ಆಶೀರ್ವಾದ್ ತುಂಬಾ ತಾಳ್ಮೆ ಹಾಗೂ ಕೌಶಲ್ಯವುಳ್ಳ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆಡಿದ ಪಂದ್ಯದಲ್ಲಿ, ಕೇವಲ 83 ಎಸೆತಗಳಲ್ಲಿ 103 ರನ್‌ಗಳ ಶತಕ ದಾಖಲಿಸಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ 20 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ ಸೆಂಚುರಿ ಬಾರಿಸಿ, ಔಟ್ ಆಗಿದ್ದಾರೆ.
ನಿಜವಾಗ್ತಿದೆ ವೈಭವ್ ತಂದೆ ಮಾತು
ಇತ್ತೀಚಿನ ಸಂದರ್ಶನವೊಂದರಲ್ಲಿ, ವೈಭವ್ ಸೂರ್ಯವಂಶಿ ತಂದೆ ಸಂಜೀವ್ ಮಾತನಾಡಿ, ಮುಂದಿನ ಎರಡು ವರ್ಷಗಳಲ್ಲಿ ನನ್ನ ಕಿರಿಯ ಮಗನನ್ನು ವೈಭವ್‌ನಂತೆಯೇ ಉನ್ನತ ದರ್ಜೆಯ ಕ್ರಿಕೆಟಿಗನನ್ನಾಗಿ ಮಾಡುತ್ತೇನೆ ಎಂದರು. ಹೀಗೆ ಹೇಳಿದ ಕೆಲವೇ ದಿನಗಳಲ್ಲಿ ಆಶೀರ್ವಾದ್ ಈ ಸಾಧನೆ ಮಾಡಿರುವುದು ಶ್ಲಾಘನೀಯ.
ಪ್ರಸ್ತುತ, ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದು, ಶ್ರೀಲಂಕಾದಲ್ಲಿ ಭಾರತ-ಎ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮತ್ತೊಂದೆಡೆ, ಅವರ ಕಿರಿಯ ಸಹೋದರ ಆಶೀರ್ವಾದ್ ಬಿಹಾರದಲ್ಲಿ ಸ್ಥಳೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ವೈಭವ್ ಅವರ ಹೆಜ್ಜೆಗಳನ್ನು ಹಿಂಬಾಲಿಸುತ್ತಿರುವುದು ಸ್ಪಷ್ಟ,(ಏಜೆನ್ಸೀಸ್).