ಟೀಮ್​ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ  
ಕ್ರಿಕೆಟ್

IPL​ ಮಿನಿ ಹರಾಜಿನಲ್ಲಿ ಭಾರಿ ಬೆಲೆಗೆ ಮಾರಾಟವಾಗುವ 5 ವಿದೇಶಿ ಆಟಗಾರರನ್ನು ಹೆಸರಿಸಿದ ಆಕಾಶ್​ ಚೋಪ್ರಾ! IPL 2026 Auction

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿರುವ ಐಪಿಎಲ್​ ಮಿನಿ ಹರಾಜಿಗೆ ಸಮಯ ಹತ್ತಿರ ಬರುತ್ತಿದೆ
  • ಅಬುದಾಭಿಯಲ್ಲಿ ಡಿಸೆಂಬರ್ 16 ರಂದು ಮಧ್ಯಾಹ್ನ 2.30 ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ
  • ಹರಾಜಿನಲ್ಲಿ ಹೆಚ್ಚು ಬೆಲೆ ಮಾರಾಟವಾಗುವ 5 ವಿದೇಶಿ ಆಟಗಾರರನ್ನು ಆಕಾಶ್ ಚೋಪ್ರಾ ಹೆಸರಿಸಿದ್ದಾರೆ
IPL 2026 Auction : ಕ್ರಿಕೆಟ್ ಅಭಿಮಾನಿಗಳು ಬಹಳ ಕುತೂಹಲದಿಂದ ಎದುರು ನೋಡುತ್ತಿರುವ ಬಹುನಿರೀಕ್ಷಿತ ಐಪಿಎಲ್​ ಮಿನಿ ಹರಾಜಿಗೆ ಸಮಯ ಹತ್ತಿರ ಬರುತ್ತಿದೆ. ಡಿಸೆಂಬರ್ 16 ರಂದು ದುಬೈನಲ್ಲಿ ಈ ಈವೆಂಟ್​ ನಡೆಯಲಿದ್ದು, ಹರಾಜಿಗೆ ನೋಂದಣಿ ಮಾಡಿಕೊಂಡಿರುವ ಆಟಗಾರರ ಪಟ್ಟಿಯಿಂದ ಬಿಸಿಸಿಐ 1005 ಆಟಗಾರರ ಹೆಸರುಗಳನ್ನು ತೆಗೆದುಹಾಕಿದೆ. ಅದೇ ಸಮಯದಲ್ಲಿ, 35 ಹೊಸ ಆಟಗಾರರ ಹೆಸರುಗಳನ್ನು ಬಿಸಿಸಿಐ ಸೇರಿಸಿದೆ.
ಒಟ್ಟು 350 ಆಟಗಾರರ ಕಿರುಪಟ್ಟಿಯನ್ನು ಮಿನಿ ಹರಾಜಿಗಾಗಿ ಬಿಸಿಸಿಐ ಸಿದ್ಧಪಡಿಸಿದೆ. ಇದರಲ್ಲಿ 240 ಭಾರತೀಯ ಆಟಗಾರರು ಮತ್ತು 110 ವಿದೇಶಿ ಆಟಗಾರರಿದ್ದಾರೆ. ಒಟ್ಟು ಆಟಗಾರರಲ್ಲಿ 224 ಭಾರತೀಯ ಅನ್​ಕ್ಯಾಪ್ಡ್​ ಆಟಗಾರರು ಮತ್ತು 14 ವಿದೇಶಿ ಅನ್​ಕ್ಯಾಪ್ಡ್​ ಆಟಗಾರರಿದ್ದಾರೆ. ಎಲ್ಲ 10 ಫ್ರಾಂಚೈಸಿಗಳಲ್ಲಿ ಒಟ್ಟು 77 ಸ್ಥಾನಗಳು ಖಾಲಿ ಇದ್ದು, ಅವುಗಳ ಪೈಕಿ 31 ಸ್ಥಾನಗಳು ವಿದೇಶಿ ಆಟಗಾರರಿಗೆ ಮೀಸಲಾಗಿವೆ. 40 ಆಟಗಾರರು ಗರಿಷ್ಠ ಮೂಲ ಬೆಲೆ 2 ಕೋಟಿ ರೂಪಾಯಿಯೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಡಿಸೆಂಬರ್ 16 ರಂದು ಮಧ್ಯಾಹ್ನ 2.30 ಕ್ಕೆ ಹರಾಜು ಆರಂಭವಾಗಲಿದೆ. ಇದಕ್ಕೂ ಮುನ್ನ ಮಾಜಿ ಆಟಗಾರರು ಹಾಗೂ ಕ್ರಿಕೆಟ್​ ಪರಿಣಿತರು ಈ ಹರಾಜಿನಲ್ಲಿ ಯಾವ ಆಟಗಾರರು ಹೆಚ್ಚು ಬೆಲೆಗೆ ಬಿಕರಿ ಆಗಬಹುದೆಂದು ಈಗಲೇ ಭವಿಷ್ಯ ನುಡಿಯುತ್ತಿದ್ದಾರೆ.
ಟೀಮ್​ ಇಂಡಿಯಾ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಅವರು ಐಪಿಎಲ್​-2026 ಮಿನಿ ಹರಾಜಿನಲ್ಲಿ ಅತಿ ಹೆಚ್ಚು ಬೆಲೆ ಮಾರಾಟವಾಗುವ ಅಗ್ರ ಐದು ವಿದೇಶಿ ಆಟಗಾರರನ್ನು ಹೆಸರಿಸಿದ್ದಾರೆ.
5ನೇ ಸ್ಥಾನಕ್ಕಾಗಿ ಮೂವರು ಆಟಗಾರರು ಹೆಸರಿಸಿದ್ದಾರೆ. ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಮತ್ತು ಅನ್ರಿಚ್ ನಾರ್ಟ್ಜೆ ಹಾಗೂ ಶ್ರೀಲಂಕಾದ ವೇಗಿ ಮತೀಶಾ ಪತಿರಾಣ ಹೆಸರನ್ನು ಹೇಳಿದ್ದಾರೆ. ಪ್ರಸ್ತುತ ಟೀಮ್​ ಇಂಡಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಟಿ20 ಸರಣಿ ಆಡುತ್ತಿದೆ. ನಾರ್ಟ್ಜೆ ಮತ್ತು ಮಿಲ್ಲರ್ ಭಾರತದ ವಿರುದ್ಧ ಉತ್ತಮವಾಗಿ ಪ್ರದರ್ಶನ ನೀಡಿದರೆ, ಅವರಿಗೆ ಸಾಕಷ್ಟು ಹಣ ಸಿಗುತ್ತದೆ. ಇನ್ನು ಪತಿರಾಣ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಆಕಾಶ್​ ಚೋಪ್ರಾ ಹೇಳಿದ್ದಾರೆ.
ಸ್ಪಿನ್-ಬೌಲಿಂಗ್ ಆಲ್‌ರೌಂಡರ್‌ಗಳಾದ ಮೈಕೆಲ್ ಬ್ರೇಸ್‌ವೆಲ್ (ನ್ಯೂಜಿಲೆಂಡ್) ಮತ್ತು ಕೂಪರ್ ಕಾನೋಲಿ (ಆಸ್ಟ್ರೇಲಿಯಾ) ಅವರನ್ನು ನಾಲ್ಕನೇ ಸ್ಥಾನದಲ್ಲಿ ಚೋಪ್ರಾ ಇರಿಸಿದ್ದಾರೆ. ಮೈಕೆಲ್ ಬ್ರೇಸ್‌ವೆಲ್ ಬಗ್ಗೆ ಹೆಚ್ಚಿನ ಗಮನವಿರಲಿ. ಏಕೆಂದರೆ, ಸ್ಪಿನ್​ ಬೌಲಿಂಗ್​ ಜೊತೆಗೆ ಚೆನ್ನಾಗಿ ಬ್ಯಾಟಿಂಗ್ ಕೂಡ ಮಾಡುತ್ತಾರೆ. ಆದ್ದರಿಂದ ಸಿಎಸ್‌ಕೆ ತಂಡ ಅವರ ಬಗ್ಗೆ ಯೋಚಿಸಬೇಕು ಎಂದು ಸಲಹೆ ನೀಡಿರುವ ಆಕಾಶ್​ ಚೋಪ್ರಾ, ರಿಕಿ ಪಾಂಟಿಂಗ್‌ ಸ್ಥಾನ ತುಂಬಬಲ್ಲ ಕೂಪರ್​ ಕಾನೊಲಿ ಒಂದು ಉತ್ತಮ ಆಯ್ಕೆ ಎಂದು ಚೋಪ್ರಾ ಅಭಿಪ್ರಾಯಪಟ್ಟರು.
ಇನ್ನು ಎರಡು ಮತ್ತು ಮೂರನೇ ಸ್ಥಾನಗಳಿಗೆ ಚೋಪ್ರಾ ಅವರು ಕ್ರಮವಾಗಿ ಇಂಗ್ಲೆಂಡ್ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಜಾನಿ ಬೈರ್‌ಸ್ಟೋವ್ ಮತ್ತು ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಹೆಸರಿಸಿದ್ದಾರೆ. ಲಿವಿಂಗ್‌ಸ್ಟೋನ್ ಅವರು ಪಂಜಾಬ್ ಹಾಗೂ ಆರ್‌ಸಿಬಿ ಪರ ಆಡಿದ್ದು, ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಮಧ್ಯಮ ಕ್ರಮಾಂಕದ ಸ್ಫೋಟಕ ಆಟಗಾರರ ಕೊರತೆ ಇದೆ. ಮ್ಯಾಕ್ಸ್‌ವೆಲ್ ಸಹ ಈಗ ಇಲ್ಲ. ಆದ್ದರಿಂದ, ಈ ಬಾರಿ ಲಿವಿಂಗ್‌ಸ್ಟೋನ್ ಹಣ ಗಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಚೋಪ್ರಾ ಹೇಳಿದ್ದಾರೆ.
ನಾನು ಜಾನಿ ಬೈರ್‌ಸ್ಟೋವ್ ಅವರನ್ನೂ ನಂ. 2 ಸ್ಥಾನದಲ್ಲಿ ಇರಿಸಿದ್ದೇನೆ. ಏಕೆಂದರೆ, ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ ಕೆಲವು ಪಂದ್ಯಗಳನ್ನು ಆಡಿದ್ದಾರೆ. ಹೀಗಾಗಿ ಸಾಕಷ್ಟು ತಂಡಗಳು ಈ ಹರಾಜಿನಲ್ಲಿ ಅವರ ಹಿಂದೆ ಹೋಗಬಹುದು. ಕೆಕೆಆರ್‌ಗೆ ಕೀಪರ್ ಹಾಗೂ ಬ್ಯಾಟರ್ ಅಗತ್ಯವಿದೆ. ಅದೇ ರೀತಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಸ್ಫೋಟಕ ಬ್ಯಾಟರ್ ಅಗತ್ಯವಿದೆ. ಆದ್ದರಿಂದ, ಜಾನಿ ಬೈರ್​ಸ್ಟೋವ್​ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.
ಅಂದಹಾಗೆ, ನಂಬರ್​ 1 ಸ್ಥಾನದಲ್ಲಿ ಆಸ್ಟ್ರೇಲಿಯಾದ ಕ್ಯಾಮೆರಾನ್ ಗ್ರೀನ್ ಇರುತ್ತಾರೆ. ಯಾರೂ ಕೂಡ ಅವರ ಹತ್ತಿರಕ್ಕೂ ಬರಲಾಗದು. ಅಂತಿಮ ಬೆಲೆ ಎಷ್ಟಾದರು ಇರಬಹುದು ಆದರೆ, ಗರಿಷ್ಠ 18 ಕೋಟಿ ರೂಪಾಯಿಯಂತೂ ಗ್ರೀನ್​ಗೆ ಸಿಗಲಿದೆ. ಒಂದು ವೇಳೆ ಸರಿಯಾಗಿ ಬಿಡ್ಡಿಂಗ್​ ನಡೆದರೆ, ಕೆಕೆಆರ್ ಮತ್ತು ಸಿಎಸ್‌ಕೆ ಪೈಪೋಟಿ ನಡೆಸಲಿದೆ. ವಾಸ್ತವವಾಗಿ ಗ್ರೀನ್​ ಅವರು 25 ರಿಂದ 28 ಕೋಟಿ ರೂಪಾಯಿವರೆಗೂ ಬಿಕರಿಯಾಬಹುದು ಎಂದು ಆಕಾಶ್​ ಚೋಪ್ರಾ ಭವಿಷ್ಯ ನುಡಿದರು, (ಏಜೆನ್ಸೀಸ್​).