ಭಾರತೀಯ ಕ್ರಿಕೆಟ್​ನಲ್ಲಿ ಹೊಸ ರೋಗವೊಂದು ವಕ್ಕರಿಸಿದೆ: ಆಟಗಾರರ ವರ್ತನೆ ವಿರುದ್ಧ ಅಶ್ವಿನ್​ ಆಕ್ರೋಶ! Ravichandran Ashwin  
ಕ್ರಿಕೆಟ್

ಭಾರತೀಯ ಕ್ರಿಕೆಟ್​ನಲ್ಲಿ ಹೊಸ ರೋಗವೊಂದು ವಕ್ಕರಿಸಿದೆ: ಆಟಗಾರರ ವರ್ತನೆ ವಿರುದ್ಧ ಅಶ್ವಿನ್​ ಆಕ್ರೋಶ! Ravichandran Ashwin

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಕ್ರಿಕೆಟ್‌ನಲ್ಲಿ ಅಭಿಮಾನಿಗಳ ಸೈನ್ಯ ಮತ್ತು ಸೂಪರ್‌ಹೀರೋ ಸಂಸ್ಕೃತಿ ಹೆಚ್ಚಾಗಿದೆ ಎಂದ ಅಶ್ವಿನ್​
  • ಈ ಒಂದು ಬೆಳವಣಿಗೆ ಭಾರತೀಯ ಕ್ರಿಕೆಟ್‌ಗೆ ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಎಂಬುದು ಅಶ್ವಿನ್​ ಅವರ ಕಳವಳ
  • ಆಟಗಾರರ ವದಂತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಓದುವುದು ನಿಜಕ್ಕೂ ಆಶ್ಚರ್ಯಕರ ಎಂದ ಸ್ಪಿನ್​ ಮಾಂತ್ರಿಕ
Ravichandran Ashwin : ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಅಭಿಮಾನಿಗಳ ಸೈನ್ಯ ಮತ್ತು ಸೂಪರ್‌ಹೀರೋ ಸಂಸ್ಕೃತಿ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ. ಈ ಒಂದು ಬೆಳವಣಿಗೆ ಭಾರತೀಯ ಕ್ರಿಕೆಟ್‌ಗೆ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಆಟಗಾರರ ಪಿಆರ್ (ಸಾರ್ವಜನಿಕ ಸಂಪರ್ಕ) ಪ್ರಭಾವವು ಹೆಚ್ಚಾಗಿದ್ದ, ಇದು ಅಭಿಮಾನಿಗಳ ನಡುವೆ ತಂದಿಟ್ಟು ತಮಾಷೆ ನೋಡುತ್ತಿದೆ ಎಂದರು. 
ಇತ್ತೀಚೆಗೆ ಕೋಲ್ಕತದಲ್ಲಿ ನಡೆದ ರೇವ್ ಸ್ಪೋರ್ಟ್ಸ್ ಕಾನ್​ಕ್ಲೇವ್​ನಲ್ಲಿ ಮಾತನಾಡಿದ ಅಶ್ವಿನ್, ಈ ಆಟಗಾರ ಮತ್ತು ಆ ಆಟಗಾರ ನಡುವೆ ಏನೋ ಸಮಸ್ಯೆ ಇದೆ. ಅದಕ್ಕಾಗಿಯೇ ಆ ಆಟಗಾರ ತಂಡದಲ್ಲಿಲ್ಲ ಎಂಬ ವದಂತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಓದುವುದು ನಿಜಕ್ಕೂ ಆಶ್ಚರ್ಯಕರವಾಗಿದೆ. ಇದಿಷ್ಟೇ ಅಲ್ಲ, ಉಪಾಹಾರ ಮತ್ತು ಊಟದ ಟೇಬಲ್‌ಗಳಲ್ಲಿ ಆಟಗಾರು ಕೆಲವೊಮ್ಮೆ ಮಾತನಾಡುವ ವೈಯಕ್ತಿಕ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಆಯಾಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಇದೆಲ್ಲ ಹೇಗೆ ಸಾಧ್ಯ ಎಂದು ನನಗೆ ಅರ್ಥವಾಗುತ್ತಿಲ್ಲ. ಇದರ ಹಿಂದೆ ಯಾವುದೋ ಒಂದು ಬಿಜಿನೆಸ್​ ತಂತ್ರ ಇರಬಹುದು ಎಂದು ಅಶ್ವಿನ್​ ಹೇಳಿದರು. ಅಲ್ಲದೆ, ಇಂತಹ ವದಂತಿಗಳು ಆಗಾಗ್ಗೆ ಹರಡಿದಾಗ ಏನಾದರೂ ಸಂಭವಿಸುತ್ತದೆ ಎಂದು ನೀವು ಸಹಜವಾಗಿಯೇ ಭಾವಿಸುತ್ತೀರಿ. ಏಕೆಂದರೆ, ಅದು ಮಾನವ ಸ್ವಭಾವ ಎಂದರು. 

ಹೊಸ ರೋಗ ವಕ್ಕರಿಸಿದೆ

ಪ್ರಸ್ತುತ ಭಾರತೀಯ ಕ್ರಿಕೆಟ್​ನಲ್ಲಿ ಒಂದು ಹೊಸ ರೋಗ ಕಾಡುತ್ತಿದೆ. ಆ ರೋಗವೇ ಅಭಿಮಾನಿಗಳ ಸೇನೆ ಮತ್ತು ಸೂಪರ್‌ಹೀರೋ ಸಂಸ್ಕೃತಿ. ಕೆಲವು ಆಟಗಾರರು ತಮ್ಮ ಆಟಕ್ಕಿಂತ ಹೆಚ್ಚಾಗಿ ತಮ್ಮ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಲು ಕೆಲಸ ಮಾಡುತ್ತಿದ್ದಾರೆ. ತಮ್ಮ ಪಿಆರ್​ ಕಡೆ ಹೆಚ್ಚು ಗಮನ ವಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಆಟಗಾರನೂ ಉದ್ಯಮಿಯಾಗಿದ್ದಾನೆ. ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರಿಂದ ಬ್ರಾಂಡ್ ಮೌಲ್ಯ ಹೆಚ್ಚಾಗಬಹುದು. ನಾನು ಅದನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಆದರೆ, ನಾನು ಇನ್ನೊಬ್ಬ ಕ್ರಿಕೆಟಿಗನನ್ನು ಎಂದಿಗೂ ಟೀಕಿಸುವುದಿಲ್ಲ. ಇಲ್ಲಿ ಆಟಗಾರರೇ ಇದನ್ನೆಲ್ಲ ಮಾಡುತ್ತಿದ್ದಾರೆ ಅಂತ ನಾನು ಹೇಳುತ್ತಿಲ್ಲ. ಆದರೆ, ಇದೊಂದು ಭಯಾನಕ ರೋಗವಾಗುತ್ತಿದೆ. ಭಾರತೀಯ ಕ್ರಿಕೆಟ್‌ನಲ್ಲಿ 'ಸೂಪರ್‌ಹೀರೋ' ಸಂಸ್ಕೃತಿ ಬೆಳೆಯುತ್ತಿದೆ. ವಾಸ್ತವವಾಗಿ, ನಾವು ಕ್ರಿಕೆಟ್ ಅನ್ನು ಚಲನಚಿತ್ರವನ್ನಾಗಿ ಮಾಡಿದ್ದೇವೆ. ಈಗ ಯಾರಾದರೂ ನಿಜವಾದ ಆಟದ ಬಗ್ಗೆ ಮಾತನಾಡುತ್ತಿದ್ದಾರೆಯೇ? ಎಲ್ಲರೂ ಆಟಗಾರರ ಸುತ್ತಲಿನ ಕಥೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಅಶ್ವಿನ್​ ಹೇಳಿದರು.
ಅಂದಹಾಗೆ, ಕೋಚ್ ಗೌತಮ್ ಗಂಭೀರ್ ಅವರಿಗೆ ಮಾಡಲು ತುಂಬಾ ಕೆಲಸಗಳಿವೆ. ನಾನು, ಕೊಹ್ಲಿ ಮತ್ತು ರೋಹಿತ್ ತಂಡವನ್ನು ತೊರೆಯಬೇಕೆಂದು ಗಂಭೀರ್​ ಬಯಸುತ್ತಾರೋ? ಇಲ್ಲವೋ? ಅದು ಮುಖ್ಯವಲ್ಲ. ಅದು ಅವರ ಕೆಲಸ. ಅದನ್ನು ಅವರು ಮಾಡಿದ್ದಾರೆ ಎಂದು ಹೇಳಿದರು.
25 ವರ್ಷಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ವಿವಿಎಸ್ ಲಕ್ಷ್ಮಣ್ ಅವರ 281 ರನ್‌ಗಳ ಐತಿಹಾಸಿಕ ಇನ್ನಿಂಗ್ಸ್ ಎಲ್ಲರಿಗೂ ನೆನಪಿದೆ. ಆದರೆ, ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಆ ಪಂದ್ಯವನ್ನು ಭಾರತ ಗೆದ್ದಾಗಿನಿಂದ, ಲಕ್ಷ್ಮಣ್ ಅವರ ಇನ್ನಿಂಗ್ಸ್ ಇತಿಹಾಸದಲ್ಲಿ ದಾಖಲಾಗಿದೆ. ಇದು ಲಕ್ಷ್ಮಣ್ ಅವರ ವೈಯಕ್ತಿಕ ಪ್ರದರ್ಶನ ಮಾತ್ರವಲ್ಲ. ಇದು ತಂಡದ ಯಶಸ್ಸನ್ನೂ ಸಹ ಆಗಿತ್ತು. ಅಭಿಮಾನಿಗಳು ಕ್ರಿಕೆಟಿಗರನ್ನು ಮೆಚ್ಚಬಹುದು ಆದರೆ, ಡ್ರೆಸ್ಸಿಂಗ್ ಕೋಣೆಯಲ್ಲಿ, ವ್ಯಕ್ತಿಗಳಿಗಿಂತ ತಂಡವು ಮುಖ್ಯವಾಗಿದೆ ಎಂದು ಅಶ್ವಿನ್ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು, (ಏಜೆನ್ಸೀಸ್​).