ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್
- ಇಂದು (ಜೂ.28) ಐರ್ಲೆಂಡ್ ವಿರುದ್ಧದ ಎರಡನೇ ನಿರ್ಣಾಯಕ ಟಿ20 ಪಂದ್ಯ
- ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲೇಬೇಕಾದ ಅನಿವಾರ್ಯ
- ಸಂಜು ಸ್ಯಾಮ್ಸನ್‌ಗೆ ವಿಶ್ರಾಂತಿ ಕೊಟ್ಟು ವೈಭವ್ ಸೂರ್ಯವಂಶಿಗೆ ಅವಕಾಶ
IND vs IRE: ಪ್ರಸಕ್ತ ಬೆಲ್ಫಾಸ್ಟ್ನಲ್ಲಿ ನಡೆಯುತ್ತಿರುವ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಪಂದ್ಯದಲ್ಲಿ ಮೊದಲ ಮ್ಯಾಚ್ನಲ್ಲಿ ಭಾರತ 34 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಐರಿಶ್ ಬೌಲರ್ಗಳ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ ಬ್ಯಾಟರ್ಗಳ ಪೈಕಿ ಅಭಿಷೇಕ್ ಶರ್ಮಾ ಉತ್ತಮ ಇನ್ನಿಂಗ್ಸ್ ಆಡಿದ್ದು ಬಿಟ್ಟರೆ ಉಳಿದ್ಯಾರು ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಇದು ಸೋಲಿಗೆ ಮುಖ್ಯ ಕಾರಣವಾಯಿತು. ಆದರೀಗ, ಬ್ಯಾಟಿಂಗ್ ಯೂನಿಟ್ನಲ್ಲಿ ಮಹತ್ವದ ಬದಲಾವಣೆಯ ಅಗತ್ಯ ಎದುರಾಗಿದೆ.
ಇಂದು (ಜೂ.28) ಭಾರತ ಮತ್ತು ಐರ್ಲೆಂಡ್ ನಡುವೆ ಎರಡನೇ ಹಾಗೂ ಕೊನೆಯ ಟಿ20 ಪಂದ್ಯ ನಡೆಯಲಿದ್ದು, ಯಾರಿಗೆ ಜಯ ಸಿಗಲಿದೆ ಎಂಬ ಕುತೂಹಲ ಕ್ರಿಕೆಟ್ ಪ್ರಿಯರಲ್ಲಿ ಕೆರಳಿದೆ. ಬೆಲ್‌ಫಾಸ್ಟ್‌ನ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್‌ನಲ್ಲಿ ನಡೆಯಲಿರುವ ಎರಡನೇ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದು, ಸರಣಿಯನ್ನು ಸಮಬಲಗೊಳಿಸಲಿ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಶಿಸಿದ್ದಾರೆ. ಈ ನಿಟ್ಟಿನಲ್ಲಿ, ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲಿ, ಅದರಲ್ಲೂ ಓಪನಿಂಗ್ನಲ್ಲಿ ಸಂಜು ಸ್ಯಾಮನ್ಸ್ ಬದಲಿಗೆ ವೈಭವ್ ಸೂರ್ಯವಂಶಿ ಆಡಿಸಲು ಮ್ಯಾನೇಜ್ಮೆಂಟ್ ನಿರ್ಧರಿಸಿದೆ ಎನ್ನಲಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಐರಿಶ್ ತಂಡ ಭಾರತದ ವಿರುದ್ಧ ಗೆದ್ದಿರುವುದು ಇದೇ ಮೊದಲು. ನಾಯಕನಾಗಿ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಭಾರಿ ಮುಖಭಂಗ ಅನುಭವಿಸಿದರು. ಇಂದಿನ ಎರಡನೇ ಪಂದ್ಯವನ್ನು ಗೆದ್ದು ತಮ್ಮ ಘನತೆಯನ್ನು ಉಳಿಸಿಕೊಳ್ಳುವ ಸವಾಲು ಐಯ್ಯರ್ ಮುಂದಿದೆ. ಮತ್ತೊಂದೆಡೆ, ಪುನಃ ಫ್ಲಾಪ್ ಹಾದಿಯನ್ನೇ ಹಿಡಿದ ಸಂಜು ಸ್ಯಾಮ್ಸನ್ ಸ್ಥಾನಕ್ಕೆ ವೈಭವ್ರನ್ನು ಕಳುಹಿಸುವ ಸಾಧ್ಯತೆಗಳಿವೆ.
ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಪ್ರೇಮಿಗಳ ಕಣ್ಣು ಸಂಪೂರ್ಣವಾಗಿ 15 ವರ್ಷದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮೇಲಿದೆ. ಮೊದಲ ಪಂದ್ಯದಲ್ಲಿ ಸ್ಥಾನ ಸಿಗದೆ, ವಿಶ್ವ ದಾಖಲೆಗಳಿಂದ ದೂರ ಉಳಿದ ಸೂರ್ಯವಂಶಿಗೆ ಇಂದಿನ ಪಂದ್ಯದಲ್ಲಿ ಅವಕಾಶ ಖಂಡಿತ ಸಿಗಲಿದೆ ಎಂಬ ಮಾತು ಕೇಳಿಬಂದಿದೆ. ಅಕಸ್ಮಾತ್ ಸಿಕ್ಕರೆ, ಖಚಿತವಾಗಿ ಹಲವು ದಾಖಲೆಗಳಿಗೆ ವೈಭವ್ ಸರದಾರನಾಗುವುದು ಫಿಕ್ಸ್.
ಒಂದಷ್ಟು ವರದಿಗಳ ಪ್ರಕಾರ, ಕಳೆದ ಪಂದ್ಯದ ಸೋಲಿನ ಬಳಿಕ, ಸಂಜು ಸ್ಯಾಮ್ಸನ್‌ಗೆ ವಿಶ್ರಾಂತಿ ನೀಡಲಾಗಿದೆ. ಅವರ ಸ್ಥಾನಕ್ಕೆ ವೈಭವ್ ಅವರನ್ನು ಪ್ಲೇಯಿಂಗ್ 11ಗೆ ಆಡಿಸಲು ತಂಡ ನಿರ್ಧರಿಸಿದೆ ಎನ್ನಲಾಗಿದೆ. ಹಾಗೇನಾದರೂ ಆದರೆ, ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇನ್ನು ಬೌಲಿಂಗ್ ಯೂನಿಟ್ನಲ್ಲಿ ವಾಷಿಂಗ್ಟನ್ ಸುಂದರ್ ಬದಲಿಗೆ ರವಿ ಬಿಷ್ಣೋಯ್ ಅಥವಾ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡದ ಆಲ್‌ರೌಂಡರ್ ಸೂರ್ಯಾಂಶ್ ಸೆಡ್ಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಡಳಿತ ಮಂಡಳಿ ಚಿಂತಿಸುತ್ತಿದೆ ಎಂದು ವರದಿಯಾಗಿದೆ.
ಹೀಗಿರಲಿದೆ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್/ಸೂರ್ಯಾಂಶ್ ಸೆಡ್ಜ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್.
ಐರ್ಲೆಂಡ್: ಟಿಮ್ ಟೆಕ್ಟರ್, ರಾಸ್ ಅಡೈರ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್/ನಾಯಕ), ಬೆಂಜಮಿನ್ ಕಾಲಿಟ್ಜ್, ಗ್ಯಾರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಲಿಯಾಮ್ ಮೆಕಾರ್ಥಿ, ಮ್ಯಾಥ್ಯೂ ಹಂಫ್ರೀಸ್, ಜೈ ಮುಂದ್ರಾ, ಮ್ಯಾಥ್ಯೂ ಹೊಲ್ಲಾರ್ಡ್.