ಆರ್ಸಿಬಿ ತಂಡದ ಸ್ಟಾರ್ ಆಟಗಾರ ಅಲಭ್ಯ
- ನಾಳೆ (ಮಾ.28) ಆರ್ಸಿಬಿ ಮತ್ತು ಎಸ್ಆರ್ಎಚ್ ನಡುವೆ ಮೊದಲ ಐಪಿಎಲ್ ಪಂದ್ಯ
- ಐಪಿಎಲ್ 19ನೇ ಆವೃತ್ತಿಗೆ ಕ್ಷಣಗಣನೆ ಶುರು
- ಪಂದ್ಯಕ್ಕೆ ಇನ್ನೊಂದು ದಿನ ಬಾಕಿ ಎನ್ನುವುದರೊಳಗೆ ಆರ್ಸಿಬಿ ಸ್ಟಾರ್ ವೇಗಿಯ ಅಲಭ್ಯತೆ
RCB vs SRH: ನಾಳೆ (ಮಾ.28) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ 19ನೇ ಆವೃತ್ತಿಯ ಮೊದಲನೇ ಪಂದ್ಯಕ್ಕೆ ಸದ್ಯ ಕ್ರಿಕೆಟ್ ಪ್ರೇಮಿಗಳು ಭಾರೀ ಕಾತರ ಹಾಗೂ ಕುತೂಹಲದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ, ಫ್ರಾಂಚೈಸಿಗೆ ಸ್ಟಾರ್ ವೇಗಿಯ ಲಭ್ಯತೆ ಸಿಕ್ಕರೆ, ಇನ್ನೊಬ್ಬರ ಅಲಭ್ಯತೆ ಕಾಡಿದೆ.
ಕಳೆದ ವರ್ಷ ಫ್ರಾಂಚೈಸಿ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಆಸೀಸ್ನ ಸ್ಟಾರ್ ವೇಗಿ ಜೋಶ್ ಹೇಜಲ್ವುಡ್, ಇಂಜುರಿ ಸಮಸ್ಯೆಯಿಂದ 2026ರ ಐಪಿಎಲ್ನಲ್ಲಿ ತಂಡದಲ್ಲಿ ಆಡುವುದು ಬಹುತೇಕ ಡೌಟ್ ಎಂದೇ ಹೇಳಲಾಯಿತು. ಈ ಬಳಿಕ, ಮೊದಲೆರೆಡು ಪಂದ್ಯಕ್ಕೆ ಅವರು ಇರುವುದಿಲ್ಲ ಎನ್ನಲಾಯಿತು. ಆದರೆ, ಫ್ರಾಂಚೈಸಿ ಹಾಗೂ ಐಪಿಎಲ್ ಟೂರ್ನಿಯ ಕಿಕ್ಸ್ಟಾರ್ಟ್ ಪಂದ್ಯದಲ್ಲಿ ತಾವು ತಂಡದ ಪರ ಆಡುವುದಾಗಿ ಜೋಶ್ ಫ್ಯಾನ್ಸ್ಗಳಲ್ಲಿ ಇನ್ನಷ್ಟು ಜೋಶ್ ತಂದಿದ್ದಾರೆ.
ಈಗಾಗಲೇ ಆರ್ಸಿಬಿ ತಂಡ ಸೇರಿರುವ ಹೇಜಲ್ವುಡ್, ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ಖುಷಿ ವಿಷಯವಾದರೆ, ಮತ್ತೊಂದೆಡೆ ಶ್ರೀಲಂಕಾ ತಂಡದ ವೇಗಿ ನುವಾನ್ ತುಷಾರ ಅವರಿಗೆ ಎನ್ಓಸಿ (ಆಕ್ಷೇಪಣೆ ಇಲ್ಲ ಪ್ರಮಾಣಪತ್ರ) ನೀಡಲು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ನಿರಾಕರಿಸಿದೆ ಎಂದು ವರದಿಯಾಗಿದೆ. ಮಂಡಳಿಯು ತನ್ನ ಆಟಗಾರರು ಕೆಲವು ಫಿಟ್‌ನೆಸ್ ಮಾನದಂಡಗಳನ್ನು ಪೂರೈಸಿದರೆ ಮಾತ್ರ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ. ಹೀಗಾಗಿ, ಬೆಂಗಳೂರು ಬೌಲಿಂಗ್ ಯೂನಿಟ್ಗೆ ಅವರ ಅಲಭ್ಯತೆ ಎದುರಾಗಲಿದೆ.
'ಕಿಂಗ್' ನೋಡಲು ಉತ್ಸುಕತೆ ಜೋರು
ಇನ್ನು ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿಗೆ ಆಡಿಕೊಂಡು ಬಂದಿರುವ ಏಕೈಕ ಆಟಗಾರ ವಿರಾಟ್ ಕೊಹ್ಲಿ. ಅಭಿಮಾನಿಗಳ ನೆಚ್ಚಿನ 'ಕಿಂಗ್'ರನ್ನು ವರ್ಷಕ್ಕೊಮ್ಮೆ ಮೈದಾನದಲ್ಲಿ ಕಣ್ತುಂಬಿಕೊಳ್ಳುವ ಖುಷಿ, ಉತ್ಸುಕತೆ ಆರ್ಸಿಬಿ ಫ್ಯಾನ್ಸ್ಗಳದ್ದು. ಇಡೀ ತಂಡವನ್ನು ಎಷ್ಟರ ಮಟ್ಟಿಗೆ ಬೆಂಬಲಿಸಲು ಬರುತ್ತಾರೋ, ಅದಕ್ಕಿಂತ ಮುಖ್ಯವಾಗಿ, ಮಿಗಿಲಾಗಿ 'ರನ್ಮಷಿನ್'ರನ್ನು ನೋಡಲು ಫ್ಯಾನ್ಸ್ ಮುಗಿಬೀಳುವುದು ನಿಜಕ್ಕೂ ವಿರಾಟ್ ಮೇಲಿನ ಅಪಾರ ಅಭಿಮಾನವನ್ನು ಸಾಬೀತುಪಡಿಸುತ್ತದೆ,(ಏಜೆನ್ಸೀಸ್).