ಭಾವುಕ ಪೋಸ್ಟ್ ಹಂಚಿಕೊಂಡ ಸಚಿನ್ 
ಕ್ರಿಕೆಟ್

ಮೊದಲ ಬ್ಯಾಟ್‌ನ ಮಾತೇ ಬೇರೆ...ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು 37 ವರ್ಷ ಪೂರೈಸಿದ ನಿಮಿತ್ತ ಭಾವುಕ ಪೋಸ್ಟ್ ಹಂಚಿಕೊಂಡ ಸಚಿನ್! | Sachin Tendulkar

ಮುಂಬೈ: ಭಾರತೀಯ ಕ್ರಿಕೆಟ್ ಲೋಕದ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 37 ವರ್ಷಗಳು ಪೂರೈಸಿದ ವಿಶೇಷ ಸಂದರ್ಭವನ್ನು ಅತ್ಯಂತ ಭಾವುಕವಾಗಿ ಹಾಗೂ ವಿಶಿಷ್ಟವಾಗಿ ಆಚರಿಸಿದ್ದಾರೆ. ತಮ್ಮ ಜೀವನದ ಮೊಟ್ಟಮೊದಲ ಕ್ರಿಕೆಟ್ ಬ್ಯಾಟ್ ಅನ್ನು ಹಿಡಿದು, ಬಾಲ್ಯದ ಐಕಾನಿಕ್ ಫೋಟೋವೊಂದನ್ನು 53ನೇ ವಯಸ್ಸಿನಲ್ಲಿ ಮರುಸೃಷ್ಟಿಸುವ ಮೂಲಕ ಅಭಿಮಾನಿಗಳನ್ನು ಹಳೆಯ ನೆನಪುಗಳ ಲೋಕಕ್ಕೆ ಕರೆದೊಯ್ದಿದ್ದಾರೆ.

1989ರ ನವೆಂಬರ್ 15ರಂದು ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ಸಚಿನ್ ತೆಂಡೂಲ್ಕರ್ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಆಗ ಅವರಿಗೆ ಕೇವಲ 16 ವರ್ಷ ಮತ್ತು 205 ದಿನಗಳ ವಯಸ್ಸಾಗಿತ್ತು. ದಶಕಗಳ ಕಾಲ ಭಾರತದ ಅತ್ಯಂತ ಕಿರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗ ಎಂಬ ದಾಖಲೆ ಸಚಿನ್ ಹೆಸರಿನಲ್ಲಿತ್ತು. ಈ ವರ್ಷದ ಆರಂಭದಲ್ಲಿ ವೈಭವ್ ಸೂರ್ಯವಂಶಿ ಅವರು 15 ವರ್ಷ ಮತ್ತು 99 ದಿನಗಳ ವಯಸ್ಸಿನಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡುವ ಮೂಲಕ ಸಚಿನ್ ಅವರ ಈ ದಾಖಲೆಯನ್ನು ಮುರಿದಿದ್ದರು.

49 ವರ್ಷಗಳಾದರೂ ಜೊತೆಯಲ್ಲೇ ಇರುವ ಮೊದಲ ಬ್ಯಾಟ್!

ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಪಯಣದ ಬಗ್ಗೆ ಮಾತನಾಡುವಾಗ, ಉದ್ದನೆಯ ಕೂದಲು ಬಿಟ್ಟುಕೊಂಡು, ಕೈಯಲ್ಲಿ ಬ್ಯಾಟ್ ಹಿಡಿದು ಚೆಂಡನ್ನು ಎದುರಿಸಲು ಸಜ್ಜಾಗಿರುವ ಅವರ ಬಾಲ್ಯದ ಫೋಟೋ ಎಲ್ಲರ ಕಣ್ಣಮುಂದೆ ಬರುತ್ತದೆ. ಒಬ್ಬ ಬಾಲ ಪ್ರತಿಭೆ ವಿಶ್ವ ಕ್ರಿಕೆಟ್‌ನ ಮಹಾನ್ ದಿಗ್ಗಜನಾಗಿ ಬೆಳೆದ ಪಯಣದ ಆರಂಭವನ್ನು ಆ ಚಿತ್ರ ಸೆರೆಹಿಡಿದಿತ್ತು.

ಇದೀಗ ದಶಕಗಳ ನಂತರ, 53 ವರ್ಷದ ಸಚಿನ್ ಅದೇ ಬಾಲ್ಯದ ಫೋಟೋದಲ್ಲಿ ಹಿಡಿದಿದ್ದ ಬ್ಯಾಟ್ ಅನ್ನು ಹಿಡಿದು ಅದೇ ಭಂಗಿಯಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, ಮೊದಲ ಬ್ಯಾಟ್‌ನ ಮಾತೇ ಬೇರೆ, 49 ವರ್ಷಗಳ ನಂತರವೂ ಅದು ನನ್ನೊಂದಿಗಿದೆ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ಕ್ರಿಕೆಟ್ ದೇವರು ಎಂದೇ ಅಭಿಮಾನಿಗಳಿಂದ ಆರಾಧಿಸಲ್ಪಡುವ ಸಚಿನ್ ತೆಂಡೂಲ್ಕರ್, ತಮ್ಮ ಕಾಲಘಟ್ಟದ ಅತ್ಯಂತ ಪರಿಪೂರ್ಣ ಬ್ಯಾಟರ್ ಆಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 34,357 ರನ್ ಕಲೆಹಾಕುವ ಮೂಲಕ ಇಂದಿಗೂ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಅಗ್ರಸ್ಥಾನದಲ್ಲಿದ್ದಾರೆ. ವಿಶೇಷವೆಂದರೆ, ತಮ್ಮ 79ನೇ ಏಕದಿನ ಪಂದ್ಯದಲ್ಲಿ ಮೊದಲ ಶತಕ ಬಾರಿಸಿದ್ದ ಸಚಿನ್, ನಂತರ ಟೆಸ್ಟ್ ಮತ್ತು ಏಕದಿನ ಎರಡೂ ಮಾದರಿಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ವಿಶ್ವದಾಖಲೆ ನಿರ್ಮಿಸಿದರು.

ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ!

ವಿಶ್ವದಲ್ಲೇ ಅತಿ ಹೆಚ್ಚು ಅಂದರೆ 200 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಚಿನ್, 51 ಶತಕಗಳು ಮತ್ತು 2,058 ಬೌಂಡರಿಗಳ ಸಹಿತ 15,921 ರನ್ ಗಳಿಸಿದ್ದಾರೆ. ಕೇವಲ 300 ಇನ್ನಿಂಗ್ಸ್‌ಗಳಲ್ಲಿ 15,000 ಟೆಸ್ಟ್ ರನ್ ಪೂರೈಸಿದ ಅತ್ಯಂತ ವೇಗದ ಬ್ಯಾಟರ್ ಎಂಬ ಹೆಗ್ಗಳಿಕೆಯೂ ಇವರದ್ದಾಗಿದೆ.

ಏಕದಿನ ಕ್ರಿಕೆಟ್: ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ವೃತ್ತಿಜೀವನ ಆರಂಭಿಸಿ, ನಂತರ ವಿಶ್ವದ ಶ್ರೇಷ್ಠ ಆರಂಭಿಕ ಆಟಗಾರನಾಗಿ ಬದಲಾದ ಸಚಿನ್, 463 ಏಕದಿನ ಪಂದ್ಯಗಳಲ್ಲಿ 44.83ರ ಸರಾಸರಿಯಲ್ಲಿ 18,426 ರನ್ ಕಲೆಹಾಕಿದ್ದಾರೆ. ಇದರಲ್ಲಿ 49 ಶತಕಗಳು ಮತ್ತು 96 ಅರ್ಧಶತಕಗಳು ಸೇರಿವೆ

ವಿಶ್ವಕಪ್ ವಿಜೇತ ತಂಡದ ರೂವಾರಿ!

2002ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು 2011ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಭಾರತೀಯ ತಂಡದ ಅವಿಭಾಜ್ಯ ಅಂಗವಾಗಿದ್ದ ಸಚಿನ್, ವಿಶ್ವಕಪ್ ಇತಿಹಾಸದಲ್ಲೂ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಆಡಿದ 45 ವಿಶ್ವಕಪ್ ಪಂದ್ಯಗಳಲ್ಲಿ 56.95ರ ಸರಾಸರಿಯಲ್ಲಿ 6 ಶತಕ ಮತ್ತು 15 ಅರ್ಧಶತಕಗಳೊಂದಿಗೆ (ಗರಿಷ್ಠ 152) ಒಟ್ಟು 2,278 ರನ್‌ಗಳನ್ನು ಗಳಿಸಿ ಟೀಮ್​ ಇಂಡಿಯಾಗೆ ಐತಿಹಾಸಿಕ ಗೆಲುವುಗಳನ್ನು ತಂದುಕೊಟ್ಟಿದ್ದಾರೆ(ಏಜೆನ್ಸೀಸ್​).