CRICKET: ಇಂದು ಅಫ್ಘಾನಿಸ್ತಾನ ವಿರುದ್ಧ ಕೊನೇ ಏಕದಿನ; ಕ್ಲೀನ್ಸ್ವೀಪ್ ಹಂಬಲದಲ್ಲಿ ಟೀಮ್ ಇಂಡಿಯಾ
ಚೆನ್ನೈ: ನಾಲ್ವರು ಪ್ರಮುಖ ಆಟಗಾರರ (ಕೊಹ್ಲಿ, ಬುಮ್ರಾ, ಸಿರಾಜ್, ಹಾರ್ದಿಕ್) ಗೈರಿನಲ್ಲಿ ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧ ಸರಾಗವಾಗಿ ಏಕದಿನ ಸರಣಿ (CRICKET) ಗೆದ್ದಿರುವ ಆತಿಥೇಯ ಭಾರತ ತಂಡ ಇದೀಗ ಕ್ಲೀನ್ಸ್ವೀಪ್ ಸಾಧನೆಯತ್ತ ದೃಷ್ಟಿನೆಟ್ಟಿದೆ. ಭಾರತ ತಂಡ ಶನಿವಾರ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಆಡಲಿದ್ದು, ಅಫ್ಘಾನಿಸ್ತಾನ ವಿರುದ್ಧದ ಪ್ರಾಬಲ್ಯ ಮುಂದುವರಿಸುವ ನಿರೀಕ್ಷೆ ಇದೆ.
ಭಾರತ ತಂಡ ಲಖನೌದಲ್ಲಿ 400 ಪ್ಲಸ್ ಮೊತ್ತ ಪೇರಿಸಿ ಬಲಿಷ್ಠ ಬ್ಯಾಟಿಂಗ್ ನಿರ್ವಹಣೆ ತೋರಿತ್ತು. ಇದರ ನಡುವೆಯೂ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್, ವಿಕೆಟ್ ಕೀಪರ್-ಬ್ಯಾಟರ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಮತ್ತು ಟಿ20 ಉಪನಾಯಕ ಶ್ರೇಯಸ್ ಅಯ್ಯರ್ ವೈಫಲ್ಯ ಕಂಡಿದ್ದರು. ಹೀಗಾಗಿ ಕೊನೇ ಪಂದ್ಯದಲ್ಲಿ ಈ ಮೂವರಿಂದ ದೊಡ್ಡ ಇನಿಂಗ್ಸ್ನ ನಿರೀಕ್ಷೆ ಇಡಲಾಗಿದೆ. ಜೈಸ್ವಾಲ್ ರನ್ಬರ ನೀಗಿಸಿಕೊಂಡರೆ ಮುಂಬರುವ ಇಂಗ್ಲೆಂಡ್ ಪ್ರವಾಸದ ಏಕದಿನ ಸರಣಿಯಲ್ಲೂ ಅವಕಾಶ ಪಡೆಯಬಹುದು.
ಭಾರತ ಈಗಾಗಲೆ ಸರಣಿಯಲ್ಲಿ 3 ಆಟಗಾರರಿಗೆ ಪದಾರ್ಪಣೆ (ಗುರುನೂರ್, ಹರ್ಷ್, ಪ್ರಿನ್ಸ್) ಅವಕಾಶ ಕಲ್ಪಿಸಿದೆ. ಈ ಪೈಕಿ ವೇಗಿ ಗುರುನೂರ್ ಬ್ರಾರ್ ಎರಡೂ ಪಂದ್ಯಗಳಲ್ಲಿ ತಲಾ 3 ವಿಕೆಟ್ ಕಬಳಿಸಿ ಗಮನಸೆಳೆದಿದ್ದಾರೆ. ಎಡಗೈ ಸ್ಪಿನ್ನರ್ ಹರ್ಷ್ ದುಬೆ ಕೂಡ ಪದಾರ್ಪಣೆಯ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿದ್ದರು. ಪ್ರಿನ್ಸ್ ಯಾದವ್ ಪದಾರ್ಪಣೆಯ ಪಂದ್ಯದಲ್ಲಿ ದುಬಾರಿಯಾದರೂ 2 ವಿಕೆಟ್ ಪಡೆದಿದ್ದರು. ಸರಣಿಯ ಕೊನೇ ಪಂದ್ಯದಲ್ಲಿ ಈ ಮೂವರು ಇನ್ನೊಂದು ಅವಕಾಶ ಪಡೆಯುವ ನಿರೀಕ್ಷೆ ಇದೆ.
ಭಾರತ: ತೊಡೆ ನೋವಿನಿಂದಾಗಿ ಲಖನೌ ಏಕದಿನ ತಪ್ಪಿಸಿಕೊಂಡಿದ್ದ ಯುವ ವೇಗದ ಬೌಲಿಂಗ್ ಆಲ್ರೌಂಡರ್ ನಿತೀಶ್ ರೆಡ್ಡಿ ಅಂತಿಮ ಪಂದ್ಯದಲ್ಲಿ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಶುಕ್ರವಾರ ಚೆಪಾಕ್ನಲ್ಲಿ ಅವರು ಪೂರ್ಣ ಪ್ರಮಾಣದಲ್ಲಿ ಅಭ್ಯಾಸ ನಡೆಸಿದ್ದು ಇದರ ಸೂಚನೆ ನೀಡಿದೆ. ಯಶಸ್ವಿ ಜೈಸ್ವಾಲ್ ಇನ್ನೊಂದು ಅವಕಾಶ ಪಡೆಯಬಹುದು. ಈಗಾಗಲೆ ಸರಣಿ ವಶಪಡಿಸಿಕೊಂಡಿರುವುದರಿಂದ ಭಾರತ 2027ರ ವಿಶ್ವಕಪ್ ಪೂರ್ವಸಿದ್ಧತೆಯಾಗಿ ಆಡುವ 11ರ ಬಳಗದಲ್ಲಿ ಕೆಲ ಪ್ರಯೋಗ ನಡೆಸುವ ಸಾಧ್ಯತೆಯೂ ಇದೆ.
ಅಫ್ಘಾನಿಸ್ತಾನ: ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಮೊಹಮದ್ ನಬಿ ಮತ್ತು ಒಮರ್ಜಾಯಿ ಆಡುವ 11ರ ಬಳಗಕ್ಕೆ ಮರಳಬಹುದು. ಈ ಬಗ್ಗೆ ಅಫ್ಘಾನಿಸ್ತಾನ ತಂಡದ ಫೀಲ್ಡಿಂಗ್ ಕೋಚ್ ಜಾನ್ ಮೂನಿ ಭರವಸೆ ವ್ಯಕ್ತಪಡಿಸಿದ್ದಾರೆ.
ವೇಗಿ ಹರ್ಷಿತ್ ರಾಣಾ ಮೊಣಕಾಲು ಗಾಯದ ಬಳಿಕ ಪುನಶ್ಚೇತನ ಪೂರ್ಣಗೊಳಿಸಿ, ಅಫ್ಘಾನಿಸ್ತಾನ ವಿರುದ್ಧದ ಕೊನೇ ಏಕದಿನ ಪಂದ್ಯಕ್ಕೆ ಮುನ್ನ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಹರ್ಷಿತ್ ವರ್ಷಾರಂಭದಲ್ಲಿ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದರು. ಬಳಿಕ ಫೆಬ್ರವರಿಯಲ್ಲಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. 24 ವರ್ಷದ ಹರ್ಷಿತ್ ಈ ಗಾಯದಿಂದಾಗಿ ಟಿ20 ವಿಶ್ವಕಪ್ ಮತ್ತು ಐಪಿಎಲ್ ಎರಡನ್ನೂ ತಪ್ಪಿಸಿಕೊಂಡಿದ್ದರು. ಅವರು ಈಗ ತಂಡ ಸೇರಿಕೊಂಡಿದ್ದರೂ, 11ರ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನವೆನಿಸಿದೆ.
*15: ಭಾರತ ತಂಡ ಚೆಪಾಕ್ನಲ್ಲಿ ಇದುವರೆಗೆ ಆಡಿರುವ 15 ಏಕದಿನ ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದು, 6ರಲ್ಲಿ ಸೋತಿದೆ. 1 ಪಂದ್ಯ ರದ್ದುಗೊಂಡಿದೆ.