2025ರಲ್ಲಿ ನಡೆದ ಕ್ರಿಕೆಟ್ ವಿವಾದಗಳು
- 2025ರಲ್ಲಿ ನಡೆದ ದುರಂತ ಹಾಗೂ ವಿವಾದಗಳು
- ಆರ್ಸಿಬಿ ಕಾಲ್ತುಳಿತ ದುರಂತ ಸೇರಿ 3 ಘಟನೆಗಳು
- ಭಾರೀ ವಿವಾದಕ್ಕೆ ಕ್ರಿಕೆಟ್ ಪ್ರಿಯರಿಂದ ತೀವ್ರ ಆಕ್ರೋಶ
ನವದೆಹಲಿ: 2025ರ ವರ್ಷವು ಭಾರತೀಯ ಕ್ರಿಕೆಟ್ ಲೋಕಕ್ಕೆ ನಿಜಕ್ಕೂ ಒಳ್ಳೆಯ ಕ್ಷಣವಾಗಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ. ಚಾಂಪಿಯನ್ಸ್ ಟ್ರೋಫಿ ಗೆಲುವಿನಿಂದ ಹಿಡಿದು ಮಹಿಳಾ ಭಾರತೀಯ ತಂಡ ಗೆದ್ದ ಚೊಚ್ಚಲ ಏಕದಿನ ವಿಶ್ವಕಪ್ ಹೊಸ ದಾಖಲೆ ನಿರ್ಮಿಸಿತು. ಖುಷಿ, ಸಂಭ್ರಮಕ್ಕೆ ಕಾರಣವಾದ ಟ್ರೋಫಿ ಜಯ ಒಂದೆಡೆಯಾದರೆ, ಮತ್ತೊಂದೆಡೆ ಸಂಭವಿಸಿದ ದುರಂತ ಮತ್ತು ವಿವಾದಗಳು ಭಾರೀ ಬೇಸರ, ಅಸಮಾಧಾನಕ್ಕೆ ಕಾರಣವಾಯಿತು.
ಯಾವುದು ಆ 3 ಘಟನೆಗಳು?
1. ಚಿನ್ನಸ್ವಾಮಿ ಕಾಲ್ತುಳಿತ ದುರಂತ
2025ರ ಐಪಿಎಲ್ 18ನೇ ಆವೃತ್ತಿಯಲ್ಲಿ ಚೊಚ್ಚಲ ಗೆಲುವು ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 18 ವರ್ಷಗಳ ಬಳಿಕ ಟ್ರೋಫಿಯನ್ನು ಎತ್ತಿಹಿಡಿದಿದ್ದು ನಿಜಕ್ಕೂ ಅಭಿಮಾನಿಗಳಲ್ಲಿ ಅತೀವ ಸಂಸತ ಉಂಟುಮಾಡಿತು. ಈ ಸಂಭ್ರಮಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿತ್ತು ಅಂದಿನ ರಾತ್ರಿ. ಟ್ರೋಫಿ ಗೆದ್ದ ಮರುದಿನವೇ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂಗೆ ಆರ್ಸಿಬಿ ಪಡೆ ವಿಜಯದ ಮೆರವಣಿಗೆಗೆ ಬಂದಿಳಿಯಿತು. ಆದರೆ, ಇದೇ ದೊಡ್ಡ ದುರಂತಕ್ಕೆ ಕಾರಣವಾಯಿತು.
ವಿರಾಟ್ ಕೊಹ್ಲಿ ಮತ್ತು ನೆಚ್ಚಿನ ಫ್ರಾಂಚೈಸಿಯ ಆಟಗಾರರನ್ನು ನೋಡಲು ತೀವ್ರ ಕಾತರ ವ್ಯಕ್ತಪಡಿಸಿದ ಆರ್ಸಿಬಿ ಅಭಿಮಾನಿಗಳು, ಸಾವಿರಾರೂ ಸಂಖ್ಯೆಯಲ್ಲಿ ಸ್ಟೇಡಿಯಂನತ್ತ ಜಮಾಯಿಸಿದರು. ಜನಸಂದಣಿ ವೇಗವಾಗಿ ಹೆಚ್ಚಾದಂತೆ, ಕಾಲ್ತುಳಿತ ದುರಂತ ಸಂಭವಿಸಿತು. ಈ ಕಹಿ ಘಟನೆಯಲ್ಲಿ 11 ಯುವ ಅಭಿಮಾನಿಗಳು ಪ್ರಾಣ ಕಳೆದುಕೊಂಡರು. ಇದು ಭಾರೀ ವಿವಾದ ಸೃಷ್ಟಿಸಿತು ಮತ್ತು ಹಲವರ ಆಕ್ರೋಶ, ಆರೋಪಗಳಿಗೆ ಸಾಕ್ಷಿಯಾಯಿತು.
2. ಭಾರತ-ಪಾಕ್ ಹ್ಯಾಂಡ್‌ಶೇಕ್
2025ರ ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಮಧ್ಯೆ ನೋ ಹ್ಯಾಂಡ್‌ಶೇಕ್ ದೊಡ್ಡ ವಿವಾದಕ್ಕೆ ಗುರಿಯಾಯಿತು. ಇಡೀ ಟೂರ್ನಿಯಲ್ಲಿ ಪಾಕ್ ಜತೆಗೆ ಮೂರು ಪಂದ್ಯಗಳನ್ನಾಡಿದ ಟೀಮ್ ಇಂಡಿಯಾ, ಮೂರು ಬಾರಿಯೂ ಕೈಕುಲಕದೆ ಹೋಗಿದ್ದು, ಪಾಕ್ ಕ್ರಿಕೆಟಿಗರ ಕಿಡಿಗೆ ಕಾರಣವಾಯಿತು. ಇದು ಕೇವಲ ಸೀನಿಯರ್ಸ್ಗೆ ಮಾತ್ರ ಸೀಮಿತವಾಗಲಿಲ್ಲ. ಜೂನಿಯರ್ಸ್ ಕ್ರಿಕೆಟ್ನಲ್ಲಿಯೂ ಮುಂದುವರಿಯಿತು.
3. ಏಷ್ಯಾಕಪ್ ಟ್ರೋಫಿ ಹೊತ್ತೊಯ್ದ ನಖ್ವಿ
ಏಷ್ಯಾಕಪ್ ಟ್ರೋಫಿಯಲ್ಲಿ ಪಾಕ್ ಜತೆಗೆ ಹ್ಯಾಂಡ್‌ಶೇಕ್ ಮಾಡದ ಟೀಮ್ ಇಂಡಿಯಾ, ಫೈನಲ್ನಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಇದಕ್ಕೂ ಮೊದಲೇ ಪಿಸಿಬಿ ಅಧ್ಯಕ್ಷ ಮತ್ತು ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸುವುದಿಲ್ಲ ಎಂದು ಭಾರತ ತಂಡದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹೇಳಿದ್ದರು. ಅಂತೆಯೇ, ಪ್ರಶಸ್ತಿ ಗೆದ್ದ ಬಳಿಕ ಅವರಿಂದ ಟ್ರೋಫಿ ಪಡೆಯಲು ಟೀಮ್ ಇಂಡಿಯಾ ವೇದಿಕೆ ಹತ್ತಲಿಲ್ಲ. ಇದು ನಖ್ವಿ ಕೋಪಕ್ಕೆ ಕಾರಣವಾಯಿತು.
ವೈರಿ ರಾಷ್ಟ್ರದೊಂದಿಗೆ ಇದ್ದ ಉದ್ವಿಗ್ನತೆಯನ್ನು ಮರೆಯದ ಟೀಮ್ ಇಂಡಿಯಾ, ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸಲಿಲ್ಲ. ಬದಲಿಗೆ ಮೈದಾನದಲ್ಲೇ ಕುಳಿತು ಕೆಲ ಸಮಯ ಕಾಲಹರಣ ಮಾಡಿತು. ಭಾರತ ತಂಡದ ಆಟಗಾರರ ನಡೆಯಿಂದ ಸಿಟ್ಟಾದ ನಖ್ವಿ, ಏಷ್ಯಾಕಪ್ ಟ್ರೋಫಿ ಮತ್ತು ಮೆಡಲ್ಗಳನ್ನು ತನ್ನೊಂದಿಗೆ ಹೊತ್ತೊಯ್ದು, ಅವುಗಳನ್ನು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಲಾಕ್ ಮಾಡಿದರು. ಇಂದಿಗೂ ಭಾರತಕ್ಕೆ ಟ್ರೋಫಿ ಹಸ್ತಾಂತರವಾಗಿಲ್ಲ. ಅಂದು ಇದು ದೊಡ್ಡ ವಿವಾದ ಸೃಷ್ಟಿಸಿದ್ದು ಬಹುತೇಕರಿಗೆ ಗೊತ್ತೇ ಇದೆ,(ಏಜೆನ್ಸೀಸ್).