ಶ್ರೇಯಸ್ ಪಡೆಗೆ ಸತತ 2ನೇ ಸರಣಿ ಸೋಲು: ಟಿ20 ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ನಂ.1 ಪಟ್ಟ ಕೈತಪ್ಪುವ ಭೀತಿ! 
ಕ್ರಿಕೆಟ್

ಶ್ರೇಯಸ್ ಪಡೆಗೆ ಸತತ 2ನೇ ಸರಣಿ ಸೋಲು: ಟಿ20 ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ನಂ.1 ಪಟ್ಟ ಕೈತಪ್ಪುವ ಭೀತಿ!

ಬ್ರಿಸ್ಟಲ್: ಯುಕೆ ಪ್ರವಾಸದಲ್ಲಿ ಟೀಮ್ ಇಂಡಿಯಾದ ನೀರಸ ನಿರ್ವಹಣೆ ಮುಂದುವರಿದಿದ್ದು, 12 ವರ್ಷಗಳ ನಂತರ ಇಂಗ್ಲೆಂಡ್ ಎದುರು ಚುಟುಕು ಸರಣಿ ಕೈಚೆಲ್ಲಿದೆ. ಜತೆಗೆ ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಳೆದುಕೊಳ್ಳುವ ಭೀತಿಯೂ ಎದುರಾಗಿದೆ. ನಾಯಕ ಶ್ರೇಯಸ್ ಅಯ್ಯರ್ (80* ರನ್, 49 ಎಸೆತ, 4 ಬೌಂಡರಿ, 5 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ ಭಾರತ ತಂಡ 4ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಎದುರು 9 ವಿಕೆಟ್‌ಗಳ ಸೋಲು ಅನುಭವಿಸಿತು.
ನಾಯಕ ಹ್ಯಾರಿ ಬ್ರೂಕ್ (79* ರನ್, 35 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ಫಿಲ್ ಸಾಲ್ಟ್ (59* ರನ್, 42 ಎಸೆತ, 9 ಬೌಂಡರಿ, 1 ಸಿಕ್ಸರ್) ಭರ್ಜರಿ ಜತೆಯಾಟದಿಂದ 9 ವಿಕೆಟ್‌ಗಳ ಜಯ ದಾಖಲಿಸಿದ ಆಂಗ್ಲರು, ಕೊನೇ ಪಂದ್ಯ ಬಾಕಿ ಇರುವಂತೆಯೇ ಐದು ಪಂದ್ಯಗಳ ಸರಣಿಯನ್ನು 3-0ಯಿಂದ ವಶಪಡಿಸಿಕೊಂಡರು.
ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಸಾಧಾರಣ ಬ್ಯಾಟಿಂಗ್ ನಡುವೆಯೂ ಶ್ರೇಯಸ್ ಆಸರೆಯಲ್ಲಿ 7 ವಿಕೆಟ್‌ಗೆ 158 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಬ್ರೂಕ್-ಸಾಲ್ಟ್ ಮುರಿಯದ 2ನೇ ವಿಕೆಟ್‌ಗೆ 70 ಎಸೆತಗಳಲ್ಲಿ 146 ರನ್‌ಗಳಿಸಿ ಸರಣಿ ಖಾತ್ರಿಪಡಿಸಿದರು. 13.5 ಓವರ್‌ಗಳಲ್ಲೇ 1 ವಿಕೆಟ್‌ಗೆ 159 ರನ್‌ಗಳಿಸಿದ ಇಂಗ್ಲೆಂಡ್, 37 ಎಸೆತ ಬಾಕಿ ಇರುವಂತೆಯೇ ಗೆದ್ದು ಬೀಗಿತು. ಇದರೊಂದಿಗೆ 2019ರ ನಂತರ ಭಾರತ ಎದುರು ಮೊದಲ ದ್ವಿಪಕ್ಷೀಯ ಸರಣಿ ಒಲಿಸಿಕೊಂಡಿತು.
ಭಾರತ: 7 ವಿಕೆಟ್‌ಗೆ 158 (ವೈಭವ್ 15, ಅಭಿಷೇಕ್ 16, ಕಿಶನ್ 4, ಶ್ರೇಯಸ್ 80*, ಶಿವಂ ದುಬೆ 22, ತಿಲಕ್ 11, ವಾಷಿಂಗ್ಟನ್ 5, ಅಕ್ಷರ್ 1, ಆರ್ಚರ್ 20ಕ್ಕೆ 2, ಟಂಗ್ 36ಕ್ಕೆ 2). ಇಂಗ್ಲೆಂಡ್: 13.5 ಓವರ್‌ಗಳಲ್ಲಿ 1 ವಿಕೆಟ್‌ಗೆ 159 (ಫಿಲ್ ಸಾಲ್ಟ್ 59*, ಬಟ್ಲರ್ 8, ಹ್ಯಾರಿ ಬ್ರೂಕ್ 79*, ಅರ್ಷದೀಪ್ 41ಕ್ಕೆ 1). ಪಂದ್ಯಶ್ರೇಷ್ಠ: ಹ್ಯಾರಿ ಬ್ರೂಕ್.
1. ಭಾರತ ತಂಡ ಇಂಗ್ಲೆಂಡ್ ವಿರುದ್ಧ 2 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ದ್ವಿಪಕ್ಷೀಯ ಟಿ20 ಸರಣಿ ಸೋತ ಮೊದಲ ದೃಷ್ಟಾಂತ ಇದಾಗಿದೆ. ಇದಕ್ಕೆ ಮುನ್ನ ಮೂರಕ್ಕಿಂತ ಹೆಚ್ಚು ಪಂದ್ಯಗಳ ಐದು ಸರಣಿ ಭಾರತ ಜಯಿಸಿದ್ದರೆ, 2 ಪಂದ್ಯಗಳ ಸರಣಿ ಸಮಬಲಗೊಂಡಿತ್ತು.
2. ಏಳು ವರ್ಷಗಳ ನಂತರ ಭಾರತ ತಂಡ ಸತತ ಎರಡು ಟಿ20 ಸರಣಿ ಸೋಲು ಅನುಭವಿಸಿತು. ಇದಕ್ಕೆ ಮುನ್ನ 2019ರಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಎದುರು ಸರಣಿ ಸೋತಿತ್ತು.
10. ಇಂಗ್ಲೆಂಡ್ ವಿರುದ್ಧ ಸತತ 10 ದ್ವಿಪಕ್ಷೀಯ ಸರಣಿಯ ಅಜೇಯ ಓಟ ಕೊನೆಗೊಂಡಿದ್ದು, ಭಾರತ 2018ರಲ್ಲಿ ಕೊನೆಯದಾಗಿ ಇಂಗ್ಲೆಂಡ್ ಎದುರು 1-4ರಿಂದ ಟೆಸ್ಟ್ ಸರಣಿ ಸೋತಿತ್ತು.
ನಂ.1 ಪಟ್ಟ ಕೈತಪ್ಪುವ ಭೀತಿ!
ಸತತ 2 ಸರಣಿ ಸೋಲಿನ ಬೆನ್ನಲ್ಲೇ ಹಾಲಿ ಟಿ20 ವಿಶ್ವ ಚಾಂಪಿಯನ್ ಭಾರತ ತಂಡ ಐಸಿಸಿ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದೆ. ಕಳೆದ 4 ವರ್ಷಗಳಿಂದ ಅಂದರೆ, 2022ರ ಫೆಬ್ರವರಿ 21ರಿಂದ ಸತತವಾಗಿ 1,602 ದಿನ ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ನಂಬರ್ ಒನ್ ಪಟ್ಟ ಕಾಯ್ದುಕೊಂಡಿರುವ ಭಾರತ ಸದ್ಯ 269 ರೇಟಿಂಗ್ ಪಾಯಿಂಟ್ ಹೊಂದಿದೆ.
ನಂಬರ್ ಒನ್ ಸ್ಥಾನ ಉಳಿಸಿಕೊಳ್ಳಲು ಭಾರತ, ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಪಂದ್ಯ ಗೆಲ್ಲುವ ಅನಿವಾರ್ಯತೆಯಲ್ಲಿದೆ. ಒಂದು ವೇಳೆ ಕೊನೇ ಪಂದ್ಯದಲ್ಲೂ ಇಂಗ್ಲೆಂಡ್ ಜಯ ಸಾಧಿಸಿದರೆ, ಭಾರತವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ. ಪ್ರಸ್ತುತ 267 ರೇಟಿಂಗ್ ಹೊಂದಿರುವ ಆಂಗ್ಲರು ಐಸಿಸಿ ರ‌್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಲು ಭಾರತ ತಂಡ, ಏಷ್ಯಾದ ಇತರ ತಂಡಗಳಿಗಿಂತ ಉನ್ನತ ಸ್ಥಾನ ಕಾಯ್ದುಕೊಳ್ಳಬೇಕಿದೆ.