ಈಡನ್​ ಟೆಸ್ಟ್​ ಪವಾಡಕ್ಕೆ 25ರ ಸಂಭ್ರಮ; ಲಕ್ಷ್ಮಣ್​-ಅದ್ಭುತ ಜತೆಯಾಟಕ್ಕೆ ಒಲಿದಿತ್ತು ಗೆಲುವು! 
ಕ್ರಿಕೆಟ್

ಈಡನ್​ ಟೆಸ್ಟ್​ ಪವಾಡಕ್ಕೆ 25ರ ಸಂಭ್ರಮ; ಲಕ್ಷ್ಮಣ್​-ದ್ರಾವಿಡ್​ ಅದ್ಭುತ ಜತೆಯಾಟಕ್ಕೆ ಒಲಿದಿತ್ತು ಗೆಲುವು!

ಬೆಂಗಳೂರು: ಭಾರತೀಯ ಕ್ರಿಕೆಟ್​ಗೆ ಹೊಸ ಆತ್ಮವಿಶ್ವಾಸವನ್ನು ತುಂಬಿದ, ಎಂಥದ್ದೇ ಸಂಕಷ್ಟದ ಪರಿಸ್ಥಿತಿಯಿಂದ ಪುಟಿದೆದ್ದು ಬರಬಹುದು ಎಂಬ ಪಾಠವನ್ನು ಕಲಿಸಿದ, ವಿಶ್ವ ಕ್ರಿಕೆಟ್​ನಲ್ಲಿ ಆಸ್ಟ್ರೆಲಿಯಾದ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದ, 2000ದ ಮ್ಯಾಚ್​ ಫಿಕ್ಸಿಂಗ್​ ಹಗರಣದ ಬಳಿಕ ಕ್ರಿಕೆಟ್​ ಪ್ರೇಮಿಗಳಿಗೆ ಮತ್ತೆ ಆಟದ ಮೇಲೆ ನಂಬಿಕೆ ಮೂಡಿಸಿದ ಮತ್ತು ಭಾರತ ತಂಡವನ್ನು "ಟೀಮ್​ ಇಂಡಿಯಾ' ಎಂಬ ಸಂಟಿತ ಶಕ್ತಿಯಾಗಿ ಬದಲಾಯಿಸಿದ 2001ರ ಕೋಲ್ಕತ ಟೆಸ್ಟ್​ ಪಂದ್ಯಕ್ಕೆ ಈಗ 25 ವರ್ಷಗಳ ಸಂಭ್ರಮ. ಈ ಪಂದ್ಯದ 3ನೇ ದಿನ ಫಾಲೋಆನ್​ಗೆ ಸಿಲುಕಿದ್ದ ಆತಿಥೇಯ ಭಾರತ ತಂಡ, ವಿವಿಎಸ್​ ಲಕ್ಷ್ಮಣ್​ (vvs laxman)-ರಾಹುಲ್​ ದ್ರಾವಿಡ್​ (rahul dravid) ಅದ್ಭುತ ಜತೆಯಾಟದಿಂದ ಪವಾಡಸದೃಶ ರೀತಿಯಲ್ಲಿ ಗೆದ್ದು, ಸ್ಟೀವ್​ ವಾ ಸಾರಥ್ಯದ ಆಸ್ಟ್ರೇಲಿಯಾ ತಂಡದ ಸೊಕ್ಕು ಮುರಿದಿತ್ತು. 
2001ರ ಮಾರ್ಚ್​ 11ರಂದು ಈಡನ್​ ಗಾರ್ಡನ್ಸ್​ನಲ್ಲಿ (eden gardens) ಆರಂಭಗೊಂಡ ಬಾರ್ಡರ್​-ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ 2ನೇ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಆಸೀಸ್​, ಮೊದಲ ದಿನ 8 ವಿಕೆಟ್​ಗೆ 291 ರನ್​ ಗಳಿಸಿತು. 2ನೇ ದಿನವಾದ ಮಾರ್ಚ್​ 12ಕ್ಕೆ 445 ರನ್​ಗಳಿಗೆ ಆಲೌಟ್​ ಅಯಿತು. ಪ್ರತಿಯಾಗಿ ಭಾರತ ದಿನದಂತ್ಯಕ್ಕೆ 128 ರನ್​ಗಳಿಗೆ 8 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 3ನೇ ದಿನವಾದ ಮಾರ್ಚ್​ 13ಕ್ಕೆ ಭಾರತ 171 ರನ್​ಗಳಿಗೆ ಆಲೌಟ್​ ಆಗಿ, 274 ರನ್​ ಹಿನ್ನಡೆಯೊಂದಿಗೆ ಫಾಲೋಆನ್​ಗೆ ಸಿಲುಕಿತು. 2ನೇ ಸರದಿಯಲ್ಲಿ ಪ್ರತಿರೋಧ ತೋರಿದ ನಡುವೆಯೂ ಭಾರತ ದಿನದಂತ್ಯಕ್ಕೆ 4 ವಿಕೆಟ್​ಗೆ 254 ರನ್​ ಗಳಿಸಿ ಇನ್ನೂ 20 ರನ್​ ಹಿನ್ನಡೆಯಲ್ಲಿತ್ತು.

4ನೇ ದಿನವಾದ ಮಾರ್ಚ್​ 14ರಂದು ವಿವಿಎಸ್​ ಲಕ್ಷ್ಮಣ್​ ಮತ್ತು ರಾಹುಲ್​ ದ್ರಾವಿಡ್​ ಆಡಿದ ಅದ್ಭುತ ಜತೆಯಾಟ ಆಸೀಸ್​ಗೆ ದಿಟ್ಟ ತಿರುಗೇಟು ನೀಡಿತು. ಇಡೀ ದಿನ ಆಸೀಸ್​ ಬೌಲರ್​ಗಳನ್ನು ಕಾಡಿದ ಈ ಜತೆಯಾಟ ಭಾರತೀಯ ಕ್ರಿಕೆಟ್​ಗೆ ಅದ್ಭುತ ಶಕ್ತಿಯನ್ನು ತುಂಬಿತು. ದಿನದಂತ್ಯಕ್ಕೆ 4 ವಿಕೆಟ್​ಗೆ 589 ರನ್​ ಗಳಿಸಿದ ಭಾರತ 5ನೇ ಹಾಗೂ ಅಂತಿಮ ದಿನ (ಮಾರ್ಚ್​ 15) 7 ವಿಕೆಟ್​ಗೆ 657 ರನ್​ ಗಳಿಸಿ ಡಿಕ್ಲೇರ್​ ಮಾಡಿಕೊಂಡಿತು. ಇದರಿಂದ ಗೆಲುವಿಗೆ 384 ರನ್​ ಗುರಿ ಪಡೆದ ಆಸೀಸ್​, ದಿನದ ಕೊನೆಯಲ್ಲಿ 212 ರನ್​ಗಳಿಗೆ ಸರ್ವಪತನ ಕಂಡು, 171 ರನ್​ಗಳಿಂದ ಶರಣಾಯಿತು. 

ವಿವಿಎಸ್​ ಲಕ್ಷ್ಮಣ್​ 452 ಎಸೆತಗಳಲ್ಲಿ 44 ಬೌಂಡರಿ ಸಹಿತ 281 ರನ್​ ಬಾರಿಸಿದರೆ, ದ್ರಾವಿಡ್​ 353 ಎಸೆತಗಳಲ್ಲಿ 20 ಬೌಂಡರಿ ಸಹಿತ 180 ರನ್​ ಗಳಿಸಿದರು. ಇವರಿಬ್ಬರು 5ನೇ ವಿಕೆಟ್​ಗೆ ಏಳೂವರೆ ಗಂಟೆಗಳ ಕಾಲ ಕ್ರೀಸ್​ನಲ್ಲಿ ನಿಂತು, ಸರಿಸುಮಾರು 104 ಓವರ್​ ಎದುರಿಸಿ 376 ರನ್​ ಜತೆಯಾಟವಾಡಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ್ದರು. 4ನೇ ದಿನದಂತ್ಯಕ್ಕೆ ಅಜೇಯ 275 ರನ್​ ಗಳಿಸಿದ್ದ ಲಕ್ಷ್ಮಣ್​​, ತ್ರಿಶತಕ ಸಿಡಿಸಿದ ಮೊದಲ ಭಾರತೀಯರೆನಿಸುವ ಅವಕಾಶವನ್ನೂ ಹೊಂದಿದ್ದರು. ಆದರೆ ಕೊನೇ ದಿನ ತ್ರಿಶತಕದಿಂದ 19 ರನ್​ ದೂರವಿದ್ದಾಗ ಮೆಕ್​ಗ್ರಾಥ್​ ಎಸೆತದಲ್ಲಿ ಔಟಾದರು. ಆದರೂ ಇದು ಆಗ ಭಾರತೀಯ ಬ್ಯಾಟರ್​ ಒಬ್ಬ ಟೆಸ್ಟ್​ನಲ್ಲಿ ಗಳಿಸಿದ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿತ್ತು. 

ಆಸೀಸ್​ ಸತತ 16 ಟೆಸ್ಟ್​ ಗೆಲುವಿನ ಓಟದೊಂದಿಗೆ ಈ ಪಂದ್ಯ ಆಡಲು ಕೋಲ್ಕತಕ್ಕೆ ಬಂದಿತ್ತು. ಈ ಪಂದ್ಯಕ್ಕೆ ಮುನ್ನ ನಡೆದ ಮುಂಬೈ ಟೆಸ್ಟ್​ನಲ್ಲಿ ಭಾರತ ಹೀನಾಯವಾಗಿ ಸೋತು ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿತ್ತು. ಈಡನ್​ ಗೆಲುವಿನಿಂದ ಸರಣಿ ಸಮಬಲ ಸಾಧಿಸಿದ ಭಾರತ ನಂತರ ಚೆನ್ನೈನಲ್ಲಿ ನಡೆದ ಕೊನೇ ಟೆಸ್ಟ್​ನಲ್ಲೂ ಗೆದ್ದು ಸರಣಿ ವಶಪಡಿಸಿಕೊಂಡಿತ್ತು. 
ಪಂದ್ಯದ ಇತರ ಹೀರೋಗಳು
ಲಕ್ಷ್ಮಣ್​-ದ್ರಾವಿಡ್​ ಜತೆಗೆ ಈ ಪಂದ್ಯದಲ್ಲಿ ಭಾರತದ ಇತರ ಕೆಲ ಆಟಗಾರರ ಕೊಡುಗೆಯೂ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಹರ್ಭಜನ್​ ಸಿಂಗ್​ ಈ ಪಂದ್ಯದಲ್ಲಿ ಒಟ್ಟು 13 ವಿಕೆಟ್​ (123ಕ್ಕೆ 7 ಮತ್ತು 73ಕ್ಕೆ 6) ಕಬಳಿಸಿ ಆಸೀಸ್​ಗೆ ಕಡಿವಾಣ ಹೇರಿದ್ದರು. ಕೊನೇ ದಿನ ಪಂದ್ಯ ಡ್ರಾದತ್ತ ಸಾಗುತ್ತಿದ್ದಾಗ ಸಚಿನ್​ ತೆಂಡುಲ್ಕರ್​ (31ಕ್ಕೆ 3), ಮ್ಯಾಥ್ಯೂ ಹೇಡನ್​, ಆಡಂ ಗಿಲ್​ಕ್ರಿಸ್ಟ್​ ವಿಕೆಟ್​ಗಳನ್ನು ಕಬಳಿಸಿ ಗೆಲುವಿಗೆ ನೆರವಾಗಿದ್ದರು. ವೆಂಕಟೇಶ್​ ಪ್ರಸಾದ್​ ಮೊದಲ ಇನಿಂಗ್ಸ್​ನಲ್ಲಿ ಕೊನೇ ವಿಕೆಟ್​ಗೆ ಲಕ್ಷ್ಮಣ್​ ಜತೆ 42 ರನ್​ ಜತೆಯಾಟದಲ್ಲಿ ಪಾಲ್ಗೊಂಡು ಭಾರತಕ್ಕೆ ಹಿನ್ನಡೆ ತಗ್ಗಿಸಿಕೊಳ್ಳಲು ನೆರವಾಗಿದ್ದರು. ಸಡಗೋಪನ್​ ರಮೇಶ್​ ಫೀಲ್ಡಿಂಗ್​ನಲ್ಲಿ ಕೆಲ ಉತ್ತಮ ಕ್ಯಾಚ್​ಗಳನ್ನು ಹಿಡಿದಿದ್ದರು. 2ನೇ ಸರದಿಯಲ್ಲಿ ದ್ರಾವಿಡ್​ಗೆ ಮುನ್ನ ನಾಯಕ ಸೌರವ್​ ಗಂಗೂಲಿ (48) ಕೂಡ 4ನೇ ವಿಕೆಟ್​ಗೆ 117 ರನ್​ಗಳ ಉಪಯುಕ್ತ ಜತೆಯಾಟವಾಡಿದ್ದರು.
ಲಕ್ಷ್ಮಣ್​​ಗೆ ಬಡ್ತಿ, ದ್ರಾವಿಡ್​ಗೆ ಹಿಂಬಡ್ತಿ
ಕೋಲ್ಕತ ಟೆಸ್ಟ್​ನ 2ನೇ ಇನಿಂಗ್ಸ್​ನಲ್ಲಿ ನಾಯಕ ಗಂಗೂಲಿ ಮತ್ತು ಕೋಚ್​ ಜಾನ್​ ರೈಟ್​ ಇಟ್ಟ ಜಾಣ ನಡೆಯೂ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತು. ಅದೆಂದರೆ ಉತ್ತಮ ಫಾರ್ಮ್​ನಲ್ಲಿದ್ದ ಲಕ್ಷ್ಮಣ್​ಗೆ 3ನೇ ಕ್ರಮಾಂಕಕ್ಕೆ ಬಡ್ತಿ ನೀಡಿದ್ದರೆ, ಸರಣಿಯ ಮೊದಲ 3 ಇನಿಂಗ್ಸ್​ಗಳಲ್ಲಿ ರನ್​ಬರ ಎದುರಿಸಿದ್ದ ದ್ರಾವಿಡ್​ಗೆ 6ನೇ ಕ್ರಮಾಂಕಕ್ಕೆ ಹಿಂಬಡ್ತಿ ನೀಡಿದ್ದರು. ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 6ನೇ ಕ್ರಮಾಂಕದಲ್ಲಿ ಅರ್ಧಶತಕ ಬಾರಿಸಿದ್ದ ಲಕ್ಷ್ಮಣ್​ಗೆ (59) 2ನೇ ಸರದಿಯಲ್ಲಿ ಹೆಚ್ಚಿನ ಸಮಯ ಬ್ಯಾಟಿಂಗ್​ ನಡೆಸುವ ಮತ್ತು ಆಸೀಸ್​ ಬೌಲರ್​ಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಅವಕಾಶ ಕಲ್ಪಿಸಿತ್ತು. ಹಿಂಬಡ್ತಿಯಿಂದಾಗಿ ದ್ರಾವಿಡ್​ಗೆ ಹೆಚ್ಚಿನ ರನ್​ಗಳಿಸುವ ಛಲವೂ ಹುಟ್ಟಿತ್ತು. 
ಫಾಲೋ ಆನ್​ ನೀಡಲು ಈಗಲೂ ಹೆದರುತ್ತಾರೆ!
ಈಡನ್​ ಟೆಸ್ಟ್​ ಬಳಿಕ ಫಾಲೋಆನ್​ ನೀಡಲು ಆಸೀಸ್​ ಮಾತ್ರವಲ್ಲದೆ ವಿಶ್ವದ ಇತರೆಲ್ಲ ತಂಡಗಳೂ ಹೆದರುವಂತಾಯಿತು. ಫಾಲೋ ಆನ್​ ನೀಡುವ ಅವಕಾಶವಿದ್ದರೂ, ಎದುರಾಳಿ ತಿರುಗೇಟು ನೀಡುವ ಭಯದಿಂದ ಮರಳಿ ಬ್ಯಾಟಿಂಗ್​ಗೆ ಇಳಿದ ಹಲವು ದೃಷ್ಟಾಂತಗಳನ್ನು ಕಾಣಬಹುದು. ಫಾಲೋಆನ್​ ಬಗೆಗಿನ ದೃಷ್ಟಿಕೋನವನ್ನೇ ಈ ಪಂದ್ಯ ಬದಲಾಯಿಸಿತು. ಪಂದ್ಯದಲ್ಲಿ ಹೆಚ್ಚಿನ ಸಮಯ ಬಾಕಿ ಇಲ್ಲದಿದ್ದಾಗ, ತೀರಾ ಅನಿವಾರ್ಯ ಎನಿಸಿದಾಗ ಮಾತ್ರ ಈಗ ನಾಯಕರು ಫಾಲೋಆನ್​ ಹೇರುತ್ತಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ರಣಜಿ ಟ್ರೋಫಿ ಫೈನಲ್​ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡ ಭಾರಿ ಮುನ್ನಡೆ ಪಡೆದರೂ, ಆತಿಥೇಯ ಕರ್ನಾಟಕ ತಂಡ 2ನೇ ಸರದಿಯಲ್ಲಿ ತಿರುಗೇಟು ನೀಡುವ ಭಯದಿಂದಲೇ ಫಾಲೋಆನ್​ ಹೇರಲಿಲ್ಲ. ಫಾಲೋಆನ್​ಗೆ ಬದಲಾಗಿ ಮತ್ತೆ ಬ್ಯಾಟಿಂಗ್​ಗೆ ಇಳಿದು 500-600 ಪ್ಲಸ್​ ಸವಾಲು ನೀಡುವ ಮೂಲಕ ಎದುರಾಳಿಗೆ ಗೆಲ್ಲಲು ಅವಕಾಶವೇ ಇಲ್ಲದಂತೆ ಮಾಡಲು ಈಗ ಹೆಚ್ಚಿನ ನಾಯಕ-ಕೋಚ್​ ಬಯಸುತ್ತಾರೆ.
*ನನಗೆ ಈಗಲೂ ಕೆಲ ಜನರು ಕೋಲ್ಕತ ಟೆಸ್ಟ್​ ಇನಿಂಗ್ಸ್​ ಬಗ್ಗೆ ನೆನಪಿಸುತ್ತಿರುತ್ತಾರೆ. ನಾನು ನಂತರ ಅದಕ್ಕಿಂತಲೂ ಉತ್ತಮವಾಗಿ ಬ್ಯಾಟಿಂಗ್​ ಮಾಡಿರುವೆ, ಬ್ಯಾಟಿಂಗ್​ನಲ್ಲಿ ಅದಕ್ಕಿಂತಲೂ ಹೆಚ್ಚು ತೃಪ್ತಿ ನೀಡಿದ ಇನಿಂಗ್ಸ್​ಗಳಿವೆ ಮತ್ತು ಇತರ ಕಠಿಣ ಪರಿಸ್ಥಿತಿಯಲ್ಲೂ ಆಡಿರುವೆ. ಆದರೆ ಆ ಇನಿಂಗ್ಸ್​ ಭಾರತೀಯ ಕ್ರಿಕೆಟ್​ಗೆ ತುಂಬಿದಷ್ಟು ಆತ್ಮವಿಶ್ವಾಸ ಬೇರಾವುದೇ ಇನಿಂಗ್ಸ್​ನಿಂದ ಸಾಧ್ಯವಾಗಿಲ್ಲ.
| ರಾಹುಲ್​ ದ್ರಾವಿಡ್​
*ಆ ಪಂದ್ಯಕ್ಕೆ ಮುನ್ನ ಸ್ನಾಯುಸೆಳೆತದ ನೋವು ನನ್ನನ್ನು ಕಾಡಿತ್ತು. ನಾನು ಶೇ.50-60 ಮಾತ್ರ ಫಿಟ್​ ಆಗಿದ್ದೆ. ಆದರೆ ಗಂಗೂಲಿ-ಜಾನ್​ರೈಟ್​ ನಾನು ಆಡಬೇಕೆಂದು ಬಯಸಿದ್ದರು. ಪಂದ್ಯದುದ್ದಕ್ಕೂ ನಾನು ನೋವಿನಲ್ಲೇ ಆಡಿದ್ದೆ. ಕಿರಿಯರ ಕ್ರಿಕೆಟ್​, ದಕ್ಷಿಣ ವಲಯ ಪರ ದ್ರಾವಿಡ್​ ಜತೆಗೂಡಿ ಆಡಿದ್ದ ಅನುಭವ ನಮ್ಮ ಸುದೀರ್ ಜತೆಯಾಟಕ್ಕೆ ನೆರವಾಯಿತು.
| ವಿವಿಎಸ್​ ಲಕ್ಷ್ಮಣ್​
*2001ರ ಕೋಲ್ಕತ ಟೆಸ್ಟ್​ನಲ್ಲಿ ಭಾರತದ ಮೇಲೆ ಫಾಲೋಆನ್​ ಹೇರಿದ್ದು ಕೋಚ್​ ಆಗಿ ನನ್ನ ವೃತ್ತೀಜಿವನದ ಅತ್ಯಂತ ಕೆಟ್ಟ ನಿರ್ಧಾರಗಳಲ್ಲಿ ಒಂದಾಗಿದೆ. ನಾವು ಮತ್ತೆ ಬ್ಯಾಟಿಂಗ್​ಗೆ ಇಳಿದಿದ್ದರೆ ಭಾರತಕ್ಕೆ ಪಂದ್ಯಕ್ಕೆ ಮರಳುವ ಅವಕಾಶವೇ ಇರುತ್ತಿರಲಿಲ್ಲ. 
| ಜಾನ್​ ಬುಕಾನನ್​, ಕೋಲ್ಕತ ಟೆಸ್ಟ್​ನಲ್ಲಿ ಆಸೀಸ್​ ಕೋಚ್​