ಅಂಧರ ಟಿ20 ವಿಶ್ವಕಪ್: ಭಾರತದ ಮಹಿಳೆಯರಿಗೆ ಸತತ 4ನೇ ಜಯ
- ಭಾನುವಾರ ಪಾಕಿಸ್ತಾನ ಎದುರು ಮುಖಾಮುಖಿ
- ಕೊಲಂಬೊದಲ್ಲಿ ನಡೆಯಲಿದೆ ಪಂದ್ಯ
- ಸತತ 5ನೇ ಜಯದ ನಿರೀಕ್ಷೆಯಲ್ಲಿ ಭಾರತ
ಬೆಂಗಳೂರು: ಆತಿಥೇಯ ಭಾರತ ತಂಡ ಚೊಚ್ಚಲ ಆವೃತ್ತಿಯ ಅಂಧ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ (blind womens t20 cricket world cup) ಸತತ 4ನೇ ಗೆಲುವಿನೊಂದಿಗೆ ಅಜೇಯ ಓಟ ಮುಂದುವರಿಸಿದ್ದು, ಸೆಮಿಫೈನಲ್ ಪ್ರವೇಶವನ್ನೂ ಖಾತ್ರಿಪಡಿಸಿಕೊಂಡಿದೆ. ತಿರುಮೇನಹಳ್ಳಿಯ ಸಂಪ್ರಸಿದ್ಧಿ ಸ್ಪೋರ್ಟ್ಸ್ ಎಸ್ಟಾಡಿಯೊದಲ್ಲಿ ಶನಿವಾರ ನಡೆದ ತನ್ನ 4ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ಅಮೆರಿಕ ವಿರುದ್ಧ 10 ವಿಕೆಟ್ಗಳಿಂದ ಸುಲಭ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ಗೆ ಇಳಿದ ಅಮೆರಿಕ 8 ವಿಕೆಟ್ಗೆ 60 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಭಾರತ ತಂಡ 3.3 ಓವರ್ಗಳಲ್ಲೇ ವಿಕೆಟ್ ನಷ್ಟವಿಲ್ಲದೆ 61 ರನ್ ಗಳಿಸಿ ಜಯ ಸಾಧಿಸಿತು.
ಭಾರತ ತಂಡ ಭಾನುವಾರ ಕೊಲಂಬೊದಲ್ಲಿ ನಡೆಯಲಿರುವ ತನ್ನ 5ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ಶನಿವಾರ ಆಡಿದ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎದುರು ವಿಕೆಟ್ ನಷ್ಟವಿಲ್ಲದೆ 331 ರನ್ ಗಳಿಸಿ 211 ರನ್ಗಳಿಂದ ದಾಖಲೆಯ ಗೆಲುವು ಸಾಧಿಸಿದೆ.