ಅಂಧರ ಟಿ20 ವಿಶ್ವಕಪ್​: ಪಾಕ್​ ವಿರುದ್ಧವೂ ಭಾರತದ ಮಹಿಳೆಯರ ಗೆಲುವಿನ ಓಟ 
ಕ್ರಿಕೆಟ್

ಅಂಧರ ಟಿ20 ವಿಶ್ವಕಪ್​: ಪಾಕ್​ ವಿರುದ್ಧವೂ ಭಾರತದ ಮಹಿಳೆಯರ ಗೆಲುವಿನ ಓಟ

ಬೆಂಗಳೂರು: ಭಾರತ ತಂಡ ಚೊಚ್ಚಲ ಆವೃತ್ತಿಯ ಅಂಧ ಮಹಿಳೆಯರ ಟಿ20 ವಿಶ್ವಕಪ್​ ಟೂರ್ನಿಯಲ್ಲಿ (blind womens t20 cricket world cup) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧವೂ ಗೆಲುವಿನ ಓಟ ಮುಂದುವರಿಸಿದ್ದು, ಸತತ 5ನೇ ಜಯದೊಂದಿಗೆ ಅಜೇಯವಾಗಿ ಸೆಮಿಫೈನಲ್​ ಪ್ರವೇಶಿಸಿದೆ. ಶ್ರೀಲಂಕಾದ ಕೊಲಂಬೊದಲ್ಲಿ ಭಾನುವಾರ ನಡೆದ ತನ್ನ 5ನೇ ಹಾಗೂ ಅಂತಿಮ ಲೀಗ್​ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 8 ವಿಕೆಟ್​ಗಳಿಂದ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್​ಗೆ ಇಳಿದ ಪಾಕಿಸ್ತಾನ 8 ವಿಕೆಟ್​ಗೆ 135 ರನ್​ ಗಳಿಸಿತು. ಪ್ರತಿಯಾಗಿ ಭಾರತ 10.2 ಓವರ್​ಗಳಲ್ಲೇ 2 ವಿಕೆಟ್​ಗೆ 136 ರನ್​ ಗಳಿಸಿ ಜಯಭೇರಿ ಬಾರಿಸಿತು. 64 ರನ್​ (34 ಎಸೆತ, 7 ಬೌಂಡರಿ) ಸಿಡಿಸಿದ ಅನೇಖಾ ದೇವಿ ಪಂದ್ಯಶ್ರೇಷ್ಠ ಪ್ರಶಸ್ತಿ ಭಾಜನರಾದರು. ನಾಯಕಿ ದೀಪಿಕಾ ಟಿ.ಸಿ. (45) ಉಪಯುಕ್ತ ಕೊಡುಗೆ ನೀಡಿದರು.

ಏಷ್ಯಾಕಪ್​, ಮಹಿಳಾ ವಿಶ್ವಕಪ್​ನ "ನೋ ಹ್ಯಾಂಡ್​ಶೇಕ್​' ನಿಯಮವನ್ನು ಪಾಲಿಸದೆ, ಭಾರತ ತಂಡದ ಆಟಗಾರ್ತಿಯರು ಪಂದ್ಯದ ನಂತರ ಪಾಕ್​ ಆಟಗಾರ್ತಿಯರಿಗೆ ಹಸ್ತಲಾಘವ ನೀಡಿದರು.