ನ್ಯೂಜಿಲೆಂಡ್​ ಮತ್ತು ಭಾರತ ನಡುವಿನ 2ನೇ ಟಿ20 ಪಂದ್ಯ 
ಕ್ರಿಕೆಟ್

1 ಎಸೆತ, 11 ರನ್​... ಭಾರತ ಎದುರು ಮಂಡಿಯೂರಿದ ಕಿವೀಸ್! ವರ್ಸ್ಟ್​ ಬೌಲರ್​ ಹಣೆಪಟ್ಟಿ ಪಡೆದ ನ್ಯೂಜಿಲೆಂಡ್​ ವೇಗಿ

ಪ್ರಮುಖ ಮುಖ್ಯಾಂಶಗಳು

  • 5 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯ ಗೆದ್ದ ಟೀಮ್ ಇಂಡಿಯಾ
  • ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ವಿಚಿತ್ರ
  • ಕಿವೀಸ್ ಬೌಲರ್​ ಎಡವಟ್ಟಿನಿಂದ ಭಾರತಕ್ಕೆ ಸುಲಭ ಗೆಲುವು
  • ಒಂದೇ ಎಸೆತದಲ್ಲಿ 11 ರನ್ ಕೊಟ್ಟ ವೇಗಿ ಜಕಾರಿ ಫೌಲ್ಕ್ಸ್
IND vs NZ T20: ನಿನ್ನೆ (ಜ.24) ರಾಯ್​ಪುರದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ 7 ವಿಕೆಟ್​ಗಳ ಭರ್ಜರಿ ಗೆಲುವನ್ನು ದಾಖಲಿಸಿತು. ಟೀಮ್ ಇಂಡಿಯಾ ಪರ ನಾಯಕ ಸೂರ್ಯಕುಮಾರ್​, ಇಶಾನ್ ಕಿಶಾನ್ ಮತ್ತು ಶಿವಂ ದುಬೆ ಅವರ ಸ್ಫೋಟಕ ಇನ್ನಿಂಗ್ಸ್​ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ, ಕಿವೀಸ್​ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಬ್ಯಾಟ್​ ಮಾಡಿದ ನ್ಯೂಜಿಲೆಂಡ್​ 20 ಓವರ್​ ಅಂತ್ಯಕ್ಕೆ ಆರು ವಿಕೆಟ್‌ಗಳ ನಷ್ಟಕ್ಕೆ 208 ರನ್​ಗಳನ್ನು ಗಳಿಸಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ, ಕೇವಲ 15.2 ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟಕ್ಕೆ 209 ರನ್​ಗಳನ್ನು ಸುಲಭವಾಗಿ ತಲುಪಿತು. ಆದಾಗ್ಯೂ, ಈ ಪಂದ್ಯದಲ್ಲಿ ಒಂದು ಕುತೂಹಲಕಾರಿ ಘಟನೆ ನಡೆದಿದ್ದು, ಕ್ರಿಕೆಟ್​ ಪ್ರೇಮಿಗಳ ಅಚ್ಚರಿಗೆ ಹಾಗೂ ಸ್ವತಃ ಕಿವೀಸ್ ತಂಡಕ್ಕೆ ತೀವ್ರ ಬೇಸರ ತಂದೊಡ್ಡಿದೆ.

ಒಂದೇ ಎಸೆತದಲ್ಲಿ 11 ರನ್

ಭಾರತ ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ವಿಚಿತ್ರ ಘಟನೆ ನಡೆಯಿತು. ಅದು ಕಿವೀಸ್ ಯುವ ಬೌಲರ್ ಜಕಾರಿ ಫೌಲ್ಕ್ಸ್ ಅವರ ಮೂರನೇ ಓವರ್​ನಲ್ಲಿ ಆದದ್ದು. ಈ ವೇಳೆ, ಕ್ರೀಸ್​ನಲ್ಲಿ ಇಶಾನ್ ಕಿಶನ್ ಬ್ಯಾಟ್​ ಮಾಡುತ್ತಿದ್ದರು. ಫೌಲ್ಕ್ಸ್ ಎಸೆದ ಮೊದಲ ಚೆಂಡು ನೋ-ಬಾಲ್ ಆಗಿತ್ತು. ಇಶಾನ್ ಆ ಬಾಲ್​ ಅನ್ನು ಬೌಂಡರಿಯತ್ತ ಬಾರಿಸಿದರು. ಆದರೆ, ಆ ಚೆಂಡನ್ನು ಎಸೆಯುವ ಪ್ರಕ್ರಿಯೆಯಲ್ಲಿ, ಫೌಲ್ಕ್ಸ್ ನಾನ್-ಸ್ಟ್ರೈಕರ್ ಸ್ಟಂಪ್‌ಗಳನ್ನು ಕೈಬಿಟ್ಟರು. ಇದರಿಂದಾಗಿ, ಅಂಪೈರ್ ನೋ-ಬಾಲ್ ಕೂಡ ನೀಡಿದರು. ಫ್ರೀ-ಹಿಟ್ ಚೆಂಡು ಬೌಂಡರಿಗೆ ಹೋಗುವುದನ್ನು ತಡೆಯುವ ಪ್ರಯತ್ನದಲ್ಲಿ, ಫೌಲ್ಕ್ಸ್ ಮುಂದಿನ ಎರಡು ಎಸೆತಗಳನ್ನು ವೈಡ್‌ ಹಾಕಿದರು. ಅದರ ಮುಂದಿನ ಬಾಲ್​, ಇಶಾನ್ ಬೌಂಡರಿ ಹೊಡೆದರು. ಇದರೊಂದಿಗೆ, ಒಂದು ಎಸೆತದಿಂದ ಬರೋಬ್ಬರಿ 11 ರನ್‌ (4+ನೋಬಾಲ್​, ವೈಡ್​, ವೈಡ್​, 4) ಕೊಟ್ಟು ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ವರ್ಸ್ಟ್​ ಬೌಲರ್ ಹಣೆಪಟ್ಟಿ..

ಮತ್ತೊಂದೆಡೆ, ಜಕಾರಿ ಫೌಲ್ಕ್ಸ್ ಅತ್ಯಂತ ಕೆಟ್ಟ ಬೌಲರ್ ಎಂಬ ದಾಖಲೆಗೆ ಸಾಕ್ಷಿಯಾಗಿದ್ದಾರೆ. ಈ ಹಿಂದೆ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಮೂರು ಓವರ್‌ಗಳಲ್ಲಿ ಅತಿ ಹೆಚ್ಚು ಎಕಾನಮಿ ದಾಖಲೆ ಮಾಡಿರುವ ಬೌಲರ್, ಬಲ್ಗೇರಿಯಾ ವಿರುದ್ಧ ಸೆರ್ಬಿಯಾದ ಸ್ಪಿನ್ನರ್ ಡಿಜಾ (ಮೂರು ಓವರ್‌ಗಳಲ್ಲಿ 63 ರನ್‌ಗಳು, 21 ಎಕಾನಮಿ) ಅವರ ಹೆಸರಿನಲ್ಲಿದ್ದ ಕೆಟ್ಟ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಭಾರತ ವಿರುದ್ಧದ ಪಂದ್ಯದಲ್ಲಿ, ಮಾಡಿದ ಮೂರು ಓವರ್‌ಗಳಲ್ಲಿ ಜಕಾರಿ, 67 ರನ್‌ಗಳನ್ನು (3 ಓವರ್‌ಗಳಲ್ಲಿ 24, 25, 18) ಬಿಟ್ಟುಕೊಟ್ಟಿದ್ದು ಸದ್ಯ ಕಿವೀಸ್​ ಪಡೆಯ ಕೆಂಗಣ್ಣಿಗೆ ಗುರಿಯಾಗಿದೆ,(ಏಜೆನ್ಸೀಸ್).