ವಿಶ್ವದ ಡೇಂಜರಸ್ ಬೌಲರ್ ಬುಮ್ರಾ ಈ ಐಪಿಎಲ್ನಲ್ಲಿ ಒಂದೇ ಒಂದು ವಿಕೆಟ್ ಪಡೆದಿಲ್ಲ ಏಕೆ? ಇಲ್ಲಿದೆ ನೋಡಿ ಅಚ್ಚರಿ ಕಾರಣ...Jasprit Bumrah
- ವಿಶ್ವದ ಡೇಂಜರಸ್ ಬೌಲರ್ ಯಾರೆಂದು ಕೇಳಿದರೆ ಥಟ್ಟನೆ ನಮ್ಮ ನೆನಪಿಗೆ ಜಸ್ಪ್ರೀತ್ ಬುಮ್ರಾ
- ತನ್ನ ಮಾರಕ ಬೌಲಿಂಗ್ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳ ವಿಕೆಟ್ಗಳನ್ನು ಕಬಳಿಸುತ್ತಾರೆ
- ಈ ಹಿಂದೆ ಸೋಲುವ ಪಂದ್ಯಗಳನ್ನೂ ಏಕಾಂಗಿಯಾಗಿ ಬುಮ್ರಾ ಗೆಲ್ಲಿಸಿಕೊಟ್ಟಿದ್ದಾರೆ
- ಇಂಥಾ ವಿಶ್ವ ದರ್ಜೆಯ ಬೌಲರ್ ಇಂದು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ
- ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಬುಮ್ರಾ ಬತ್ತಳಿಕೆಗೆ ಈವರೆಗೂ ಒಂದೇ ಒಂದು ವಿಕೆಟ್ ಬೀಳದಿರಲು ಕಾರಣವೇನು?
Jasprit Bumrah : ಪ್ರಸ್ತುತ ವಿಶ್ವದ ಡೇಂಜರಸ್ ಬೌಲರ್ ಯಾರೆಂದು ಕೇಳಿದರೆ ಥಟ್ಟನೆ ನಮ್ಮ ನೆನಪಿಗೆ ಜಸ್ಪ್ರೀತ್ ಬುಮ್ರಾ. ತನ್ನ ಮಾರಕ ಯಾರ್ಕರ್, ಭಯಾನಕ ಬೌನ್ಸರ್ ಮತ್ತು ಚಾಣಾಕ್ಷತೆಯ ಸ್ಲೋ ಬಾಲ್ಗಳ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳ ವಿಕೆಟ್ಗಳನ್ನು ಹೊಡೆದುರುಳಿಸುವ ಬುಮ್ರಾ, ಡೆತ್ ಓವರ್ ಸ್ಪೆಷಲಿಸ್ಟ್ ಅಂತಾನೇ ಖ್ಯಾತಿ ಪಡೆದಿದ್ದಾರೆ. ತಮ್ಮ ಮೊನೆಚಾದ ಬೌಲಿಂಗ್ ದಾಳಿಯಿಂದಾಗಿ ಸೋಲುವ ಪಂದ್ಯಗಳನ್ನೂ ಏಕಾಂಗಿಯಾಗಿ ಬುಮ್ರಾ ಗೆಲ್ಲಿಸಿಕೊಟ್ಟಿದ್ದಾರೆ. ಇಂಥಾ ವಿಶ್ವ ದರ್ಜೆಯ ಬೌಲರ್ ಇಂದು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬುಮ್ರಾ ಬತ್ತಳಿಕೆಗೆ ಒಂದೇ ಒಂದು ವಿಕೆಟ್ ಬಿದ್ದಿಲ್ಲ. ಅಷ್ಟಕ್ಕೂ ಬುಮ್ರಾಗೆ ಏನಾಯಿತು? ಬೌಲಿಂಗ್ನಲ್ಲಿ ತಮ್ಮ ಲಯ ಕಳೆದುಕೊಂಡ್ರಾ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳವ ಪ್ರಯತ್ನ ಮಾಡೋಣ.
ಅಂದಹಾಗೆ, ಬುಮ್ರಾ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದುವರೆಗೂ ಐದು ಪಂದ್ಯಗಳನ್ನು ಆಡಿರುವ ಬುಮ್ರಾ, ಒಂದೇ ಒಂದು ವಿಕೆಟ್ ಪಡೆದಿಲ್ಲ. ಅಲ್ಲದೆ, ತಮ್ಮ ಬಾಲ್ಗಳಿಂದ 164 ರನ್ ಬಿಟ್ಟುಕೊಡುವ ಮೂಲಕ ದುಬಾರಿಯಾಗಿದ್ದಾರೆ. ಈ ಹಿಂದೆ ಕಡಿಮೆ ಎಕನಾಮಿ ರೇಟ್ ಕಾಯ್ದುಕೊಳ್ಳುತ್ತಿದ್ದ ಬುಮ್ರಾ, ಈ ಬಾರಿ 8.63ರ ಎಕನಾಮಿ ರೇಟ್ನೊಂದಿಗೆ ದುಬಾರಿ ಬೌಲರ್ ಆಗಿದ್ದಾರೆ.
ಪವರ್ ಪ್ಲೇನಲ್ಲಿ ವಿಕೆಟ್ಗಳನ್ನು ಕಬಳಿಸುವ ತಾಕತ್ತು ಹೊಂದಿರುವ ಈ ಬಲಗೈ ಬೌಲರ್, ಡೆತ್ ಓವರ್ಗಳಲ್ಲಿ ಮಾರಕ ಯಾರ್ಕರ್ಗಳ ಮೂಲಕ ಪಂದ್ಯದ ಗತಿಯನ್ನೇ ಬದಲಿಸುತ್ತಾರೆ. ಆದರೆ, ಈ ಸೀಸನ್ನಲ್ಲಿ ತಮ್ಮ ಪ್ರಭಾವ ಬೀರುವಲ್ಲಿ ಬುಮ್ರಾ ಹಿಂದೆ ಉಳಿದಿದ್ದಾರೆ. ಯುವ ಬ್ಯಾಟರ್ಗಳು ಕೂಡ ಬುಮ್ರಾ ಬೌಲಿಂಗ್ ಅನ್ನು ನಿರ್ಭಯವಾಗಿ ಎದುರಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ, 15 ವರ್ಷದ ವೈಭವ್ ಸೂರ್ಯವಂಶಿ ಒಂದೇ ಓವರ್ನಲ್ಲಿ ಬುಮ್ರಾಗೆ ಎರಡು ಸಿಕ್ಸರ್ ಬಾರಿಸಿದ್ದನ್ನು ನೆನಪು ಮಾಡಿಕೊಳ್ಳಬಹುದು. ಹಾಗಾದರೆ, ಬುಮ್ರಾರ ಈ ಕಳಪೆ ಪ್ರದರ್ಶನಕ್ಕೆ ಕಾರಣ ಏನು?
ಕಾರಣ ಬಿಚ್ಚಿಟ್ಟ ಇರ್ಫಾನ್ ಪಠಾಣ್
ಅಂದಹಾಗೆ, ಬುಮ್ರಾ ಅವರ ಕಳಪೆ ಫಾರ್ಮ್ಗೆ ಕಾರಣ ಏನು ಅನ್ನೋದನ್ನು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ವಿವರಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ನಿಧಾನಗತಿಯ ಎಸೆತಗಳನ್ನು ಅಂದರೆ ಸ್ಲೋ ಬಾಲ್ಗಳನ್ನು ಎಸೆಯುತ್ತಿದ್ದು, ಅದಕ್ಕೆ ಬೆಲೆ ತೆರುತ್ತಿದೆ ಎಂದು ಹೇಳಿದರು.
ವಿಕೆಟ್ಗಳನ್ನು ಕಬಳಿಸುವಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ತುಂಬಾನೇ ಮುಖ್ಯ. ಆತನ ಫಾರ್ಮ್ನಲ್ಲಿ ಯಾವುದೇ ಪ್ರಮುಖ ಕೊರತೆ ಇಲ್ಲ ಆದರೆ, ಈ ಸೀಸನ್ನಲ್ಲಿ ಬುಮ್ರಾರ ಸರಾಸರಿ ಬೌಲಿಂಗ್ ವೇಗ ಗಂಟೆಗೆ 130 ಕಿ.ಮೀ ಇದೆ. ಶೇ. 44 ರಷ್ಟು ಸ್ಲೋ ಬಾಲ್ಗಳನ್ನು ಬುಮ್ರಾ ಬಳಸುತ್ತಿದ್ದಾರೆ ಎಂದು ಇರ್ಫಾನ್ ಪಠಾಣ್ ಅವರು ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಹೇಳಿದರು.
ತರಬೇತಿಯ ಅಗತ್ಯವೇ ಇಲ್ಲ
ಅಷ್ಟಕ್ಕೂ ಜಸ್ಪ್ರೀತ್ ಬುಮ್ರಾ ಈ ರೀತಿ ಮಾಡುತ್ತಿರುವುದು ಏಕೆ? ಎಂದು ಪ್ರಶ್ನೆ ಮಾಡಿರುವ ಇರ್ಫಾನ್ ಪಠಾಣ್, ನಾವು ಇದರ ಬಗ್ಗೆ ಇನ್ನಷ್ಟು ಆಳವಾಗಿ ಯೋಚಿಸಬೇಕೆಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ನನ್ನ ಪ್ರಕಾರ, ಬುಮ್ರಾ ಅವರು ವೇಗದ ಎಸೆತಗಳನ್ನು ಹೆಚ್ಚು ಎಸೆದು, ಸ್ಲೋ ಬಾಲ್ಗಳನ್ನು ಕಡಿಮೆ ಮಾಡಿದರೆ, ಉತ್ತಮ ಫಲಿತಾಂಶಗಳು ಬಂದೇ ಬರುತ್ತವೆ. ಅಂದಹಾಗೆ, ಇದು ತುಂಬಾ ಸರಳ ಪರಿಹಾರವಾಗಿದೆ. ಹೇಳಬೇಕೆಂದರೆ, ಬುಮ್ರಾಗೆ ತರಬೇತಿಯ ಅಗತ್ಯವೇ ಇಲ್ಲ. ಆದರೆ, ಸದ್ಯದ ಸಂಖ್ಯೆಗಳು ಬುಮ್ರಾ ಬೌಲಿಂಗ್ನಲ್ಲಿ ಏನಾಗುತ್ತಿದೆ ಎಂಬುದನ್ನು ತೋರಿಸುತ್ತಿವೆ ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
ಶೇ. 44 ರಷ್ಟು ಸ್ಲೋ ಬಾಲ್ಗಳು ಮತ್ತು ಸರಾಸರಿ ವೇಗ ಗಂಟೆಗೆ 130 ಕಿಮೀಗಿಂತ ಕಡಿಮೆ ಇದ್ದರೆ ಆ ಬೌಲರ್ ತನ್ನ ವೇಗವನ್ನು ಖಂಡಿತವಾಗಿ ಹೆಚ್ಚಿಸಬೇಕಾಗುತ್ತದೆ. ನೀವು ಹೆಚ್ಚು ಸ್ಲೋ ಬಾಲ್ಗಳನ್ನು ಎಸೆದರೆ, ನಿಮ್ಮ ಸರಾಸರಿ ವೇಗ ಸಹಜವಾಗಿಯೇ ಕಡಿಮೆಯಾಗುತ್ತದೆ. ಹೀಗಾಗಿ, ನೀವು ಸ್ಲೋ ಬಾಲ್ಗಳ ಶೇಕಡಾವಾರು ಪ್ರಮಾಣವನ್ನು 35 ಪ್ರತಿಶತಕ್ಕೆ ತಂದರೆ ಅಥವಾ ಶೇ. 30 ರಿಂದ 35 ರಷ್ಟನ್ನು ಇಟ್ಟುಕೊಂಡು, ವೇಗದ ಎಸೆತಗಳನ್ನು ಹೆಚ್ಚಾಗಿ ಎಸೆದರೆ, ನಿಮ್ಮ ಸ್ಲೋ ಬಾಲ್ಗಳು ಕೂಡ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಇದರ ನಡುವೆ ನೀವು ಸೀಮ್ ಮತ್ತು ಸ್ವಿಂಗ್ ಸಹ ಎಸೆದರೆ, ನೀವು ಅತ್ಯುತ್ತಮ ಬ್ಯಾಟರ್‌ಗಳನ್ನು ಸಹ ಸುಲಭವಾಗಿ ಔಟ್ ಮಾಡಬಹುದು ಎಂದು ಪಠಾಣ್ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಅಂದಹಾಗೆ, ಈ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸತತ ನಾಲ್ಕನೇ ಬಾರಿಗೆ ಸೋಲಿಗೆ ಶರಣಾಗಿದೆ. ಐದು ಬಾರಿಯ ಚಾಂಪಿಯನ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ. ಮುಂದಿನ ಪಂದ್ಯದಲ್ಲಿ ಏಪ್ರಿಲ್ 20 ರಂದು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ, (ಏಜೆನ್ಸೀಸ್).