ಜೊಹಾನ್ಸ್‌ಬರ್ಗ್: ಕರೊನಾ ವೈರಸ್ ಹಾವಳಿ ತಡೆಗಟ್ಟಲು ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಎಲ್ಲರೂ ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆಯುವಂತಾಯಿತು. ಇದರಿಂದ ಸಹಜವಾಗಿಯೇ ತಲೆಯಲ್ಲಿ ಹೊಸ ಹೊಸ ಯೋಚನೆಗಳು ಹುಟ್ಟಿಕೊಳ್ಳುತ್ತಿದ್ದವು. ಇದೇ ರೀತಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೂ ಒಂದು ಹೊಸ ಆಲೋಚನೆ ಹೊಳೆದಿದೆ. ಅದರಿಂದ ಹೊಸ ಮಾದರಿಯ ಕ್ರಿಕೆಟ್ ಪ್ರಕಾರವೊಂದು ಅವಿಷ್ಕಾರವಾಗಿದೆ. ಅದರ ಹೆಸರೇ ‘3ಟಿ ಕ್ರಿಕೆಟ್’! ಇದರಲ್ಲಿ ಒಂದೇ ಪಂದ್ಯದಲ್ಲಿ 3 ತಂಡಗಳು ಆಡಲಿವೆ ಎನ್ನುವುದು ವಿಶೇಷ!
ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ವಿವರಣೆಯ ಪ್ರಕಾರ, ‘3ಟಿ ಕ್ರಿಕೆಟ್’ ಪಂದ್ಯದಲ್ಲಿ ಪ್ರತಿ ತಂಡದಲ್ಲೂ ತಲಾ 8 ಆಟಗಾರರು ಇರುತ್ತಾರೆ. ಒಟ್ಟು 36 ಓವರ್‌ಗಳ ಪಂದ್ಯವನ್ನು ತಲಾ 18 ಓವರ್‌ಗಳಂತೆ 2 ಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಮೊದಲಾರ್ಧದಲ್ಲಿ ಪ್ರತಿ ತಂಡ ತಲಾ 6 ಓವರ್ ಬ್ಯಾಟಿಂಗ್ ಮಾಡಲಿದೆ. ಈ 6 ಓವರ್‌ಗಳಲ್ಲಿ ಭಿನ್ನ ತಂಡಗಳು ಬೌಲಿಂಗ್-ಫೀಲ್ಡಿಂಗ್ ಮಾಡಲಿವೆ. ಮೊದಲು ಯಾವ ತಂಡ ಬ್ಯಾಟಿಂಗ್ ಮಾಡಲಿದೆ ಎಂಬುದನ್ನು ಡ್ರಾ ಮೂಲಕ ನಿರ್ಧರಿಸಲಾಗುವುದು. ಅದಕ್ಕೆ ತಕ್ಕಂತೆ ಆವರ್ತನ ಪದ್ಧತಿಯಲ್ಲಿ ತಂಡಗಳು ಬೌಲಿಂಗ್-ಫೀಲ್ಡಿಂಗ್ ಮಾಡಲಿವೆ. ಬ್ಯಾಟಿಂಗ್-ಬೌಲಿಂಗ್ ಮಾಡದ ಅವಧಿಯಲ್ಲಿ ತಂಡ ಡಗ್‌ಔಟ್‌ನಲ್ಲಿ ವಿಶ್ರಾಂತಿ ಪಡೆಯಲಿದೆ.
ಪಂದ್ಯದ ದ್ವಿತೀಯಾರ್ಧದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡವನ್ನು, ಮೊದಲಾರ್ಧದಲ್ಲಿ ಗರಿಷ್ಠ ಸ್ಕೋರ್ ಮಾಡಿದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ತಂಡವೊಂದು 7 ವಿಕೆಟ್ ಕಳೆದುಕೊಂಡರೆ, ಕೊನೆಯ ಬ್ಯಾಟ್ಸ್‌ಮನ್ ಒಬ್ಬನೇ ಬ್ಯಾಟಿಂಗ್ ಮುಂದುವರಿಸಬಹುದಾಗಿರುತ್ತದೆ. ಆದರೆ ಆತ ಸಮಸಂಖ್ಯೆಯ ರನ್‌ಗಳನ್ನಷ್ಟೇ ಅಂದರೆ, 2 ರನ್, ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಮಾತ್ರ ಗಳಿಸಬಹುದು. ಅತಿ ಹೆಚ್ಚು ರನ್ ಗಳಿಸಿ ಗೆಲುವು ದಾಖಲಿಸುವ ತಂಡ ಸ್ವರ್ಣ ಪಡೆದರೆ, ಮತ್ತೆರಡು ತಂಡಗಳು ಬೆಳ್ಳಿ ಮತ್ತು ಕಂಚಿಗೆ ತೃಪ್ತಿಪಡಲಿವೆ.
ಇದನ್ನೂ ಓದಿ: VIDEO: ಗಾಳಿಯಲ್ಲಿ ಹಾರಿದ ಡೇವಿಡ್ ವಾರ್ನರ್..!
ದಕ್ಷಿಣ ಆಫ್ರಿಕಾದಲ್ಲಿ ಲಾಕ್‌ಡೌನ್ ತೆರವಾದ ನಂತರದಲ್ಲಿ ನಡೆಯಲಿರುವ ಈ ಮೊದಲ ಕ್ರಿಕೆಟ್ ಪಂದ್ಯದಲ್ಲಿ ಈಗಲ್ಸ್, ಕಿಂಗ್‌ಫಿಷರ್ಸ್ ಮತ್ತು ಕೈಟ್ಸ್ ತಂಡಗಳು ಜೂನ್ 27ರಂದು ಸೂಪರ್‌ಸ್ಪೋರ್ಟ್ ಪಾಕ್ ಮೈದಾನದಲ್ಲಿ ಕಣಕ್ಕಿಳಿಯಲಿವೆ. ಕ್ರಮವಾಗಿ ಎಬಿ ಡಿವಿಲಿಯರ್ಸ್, ಕಗಿಸೋ ರಬಾಡ ಮತ್ತು ಕ್ವಿಂಟನ್ ಡಿ ಕಾಕ್ ತಂಡಗಳನ್ನು ಮುನ್ನಡೆಸಲಿದ್ದಾರೆ. ಸಾಲಿಡಾರಿಟಿ ಕಪ್ ಎಂದು ಈ ಹೊಸ ಮಾದರಿಯ ಟೂರ್ನಿಗೆ ಹೆಸರಿಡಲಾಗಿದೆ. ದಕ್ಷಿಣ ಆಫ್ರಿಕಾದ ಪ್ರಮುಖ 24 ಆಟಗಾರರು ಈ ಏಕೈಕ ಪಂದ್ಯದಲ್ಲಿ ಆಡಲಿದ್ದಾರೆ.
ಇದನ್ನೂ ಓದಿ: ಭಾರತೀಯ ಟೆನಿಸ್ ದಿಗ್ಗಜನಿಗೆ 47ರ ಸಂಭ್ರಮ..
ಈ ಹೊಸ ಮಾದರಿಯ ಕ್ರಿಕೆಟ್‌ನಿಂದ ಹೆಚ್ಚಿನ ರೋಚಕತೆ ಬರಲಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ದೇಶಕ ಗ್ರೇಮ್ ಸ್ಮಿತ್ ಹೇಳಿದ್ದಾರೆ. ‘ವಿಶ್ವದ ಕೆಲವೇ ಕೆಲವು ಕ್ರೀಡೆಗಳಲ್ಲಿ ಒಂದಕ್ಕಿಂತ ಹೆಚ್ಚು ಎದುರಾಳಿಗಳ ವಿರುದ್ಧ ಆಡುವ ಅವಕಾಶವಿದೆ. ಕ್ರಿಕೆಟ್‌ನಲ್ಲಿ ಇದು ಹೊಸ ಬದಲಾವಣೆಯಾಗಲಿದೆ. ಈ ರೀತಿ ಹೊಸತನದಿಂದ ಮತ್ತೆ ಆಟಕ್ಕೆ ಮರಳುತ್ತಿರುವುದು ಕಾತರ ಹೆಚ್ಚಿಸಿದೆ’ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಮಾರ್ಚ್‌ನಲ್ಲಿ ಭಾರತ ಪ್ರವಾಸ ಮೊಟಕುಗೊಂಡು ತವರಿಗೆ ಮರಳಿದ ಬಳಿಕ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ತರಬೇತಿಯಲ್ಲಿ ಪಾಲ್ಗೊಂಡಿಲ್ಲ. ಇದೀಗ ಈ ಪಂದ್ಯದ ಮೂಲಕ ಆಟಗಾರರಿಗೆ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ ಆಡುವ ಅವಕಾಶ ಲಭಿಸಲಿದೆ.
3ಟಿ ಕ್ರಿಕೆಟ್ ಪಂದ್ಯದಲ್ಲಿ ಆಡಲಿರುವ 3 ತಂಡಗಳು ಹೀಗಿವೆ: ಕಿಂಗ್‌ಫಿಷರ್ಸ್: ಕಗಿಸೊ ರಬಾಡ (ನಾಯಕ), ಫಾಫ್ ಡು ಪ್ಲೆಸಿಸ್, ಕ್ರಿಸ್ ಮಾರಿಸ್, ತಬರೇಜ್ ಶಮ್ಸಿ, ರೀಜಾ ಹೆಂಡ್ರಿಕ್ಸ್, ಜಾನೆಮನ್ ಮಲನ್, ಹೆನ್ರಿಚ್ ಕ್ಲಾಸೆನ್, ಗ್ಲೆಂಟರ್ ಸ್ಟರ‌್ಮನ್. ಕೈಟ್ಸ್: ಕ್ವಿಂಟನ್ ಡಿಕಾಕ್ (ನಾಯಕ), ಡೇವಿಡ್ ಮಿಲ್ಲರ್, ಟೆಂಬಾ ಬವುಮಾ, ಆನ್ರಿಚ್ ನೋರ್ಜೆ, ಡ್ವೇಯ್ನ ಪ್ರಿಟೋರಿಯಸ್, ಬ್ಯೂರನ್ ಹೆಂಡ್ರಿಕ್ಸ್, ಜೆಜೆ ಸ್ಮಟ್ಸ್, ಲುಥೋ ಸಿಪಮ್ಲ. ಈಗಲ್ಸ್: ಎಬಿ ಡಿವಿಲಿಯರ್ಸ್ (ನಾಯಕ), ಐಡೆನ್ ಮಾರ್ಕ್ರಮ್, ಲುಂಜಿ ಎನ್‌ಗಿಡಿ, ಆಂಡಿಲ್ ಪೆಹ್ಲುಕ್‌ವಾಯೊ, ರಾಸಿ ವಾನ್ ಡರ್ ಡುಸೆನ್, ಜೂನಿಯರ್ ಡಾಲಾ, ಕೈಲ್ ವೆರೆಯ್‌ನೆ, ಸಿಸಾಂಡ ಮಗಲ.