ಕ್ರೀಡೆ

ಲಯ ಕಂಡ ಮಯಾಂಕ್, ಪಂತ್

ಹ್ಯಾಮಿಲ್ಟನ್: ಭಾನುವಾರ 29ನೇ ವರ್ಷಕ್ಕೆ ಕಾಲಿಟ್ಟ ಕನ್ನಡಿಗ ಮಯಾಂಕ್ ಅಗರ್ವಾಲ್ (81 ರನ್, 99 ಎಸೆತ, 10 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಮೂಲಕ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭರ್ಜರಿ ಸಿದ್ಧತೆ ನಡೆಸಿದರು. ಸೀಮಿತ ಓವರ್ ತಂಡದ ಆಡುವ ಬಳಗದಲ್ಲಿ ಸ್ಥಾನ ಕಳೆದುಕೊಂಡಿರುವ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ರಿಷಭ್ ಪಂತ್ (70 ರನ್, 65 ಎಸೆತ, 4 ಬೌಂಡರಿ, 4 ಸಿಕ್ಸರ್) ಕೂಡ ಬಿರುಸಿನ ಅರ್ಧಶತಕದೊಂದಿಗೆ ಗಮನ ಸೆಳೆದಿದ್ದು, ಟೆಸ್ಟ್ ಸರಣಿಯ ಕೀಪರ್ ಸ್ಥಾನದ ಸ್ಪರ್ಧೆಗೆ ಸಿದ್ಧರಾಗಿದ್ದಾರೆ. ಇವು ಡ್ರಾನಲ್ಲಿ ಮುಕ್ತಾಯಗೊಂಡ ಭಾರತ ಹಾಗೂ ಆತಿಥೇಯ ನ್ಯೂಜಿಲೆಂಡ್ ಇಲೆವೆನ್ ನಡುವಿನ ತ್ರಿದಿನ ಅಭ್ಯಾಸ ಪಂದ್ಯದ ಅಂತಿಮ ದಿನದಾಟದ ಪ್ರಮುಖಾಂಶಗಳು.

ವಿಕೆಟ್​ನಷ್ಟವಿಲ್ಲದೆ 59 ರನ್​ಗಳಿಂದ ಭಾನುವಾರ ದಿನದಾಟ ಆರಂಭಿಸಿದ ಪ್ರವಾಸಿ ಭಾರತ ತಂಡ 2ನೇ ಇನಿಂಗ್ಸ್​ನಲ್ಲಿ 4 ವಿಕೆಟ್​ಗೆ 252 ರನ್ ಪೇರಿಸಿ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಯಿತು. ಚಹಾ ವಿರಾಮದ ಕೆಲ ಹೊತ್ತಿನ ಬಳಿಕ ಪಂದ್ಯವನ್ನು ಡ್ರಾ ಘೋಷಿಸಲಾಯಿತು.

ಏಕದಿನ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿದ್ದ ಮಯಾಂಕ್ ಅಗರ್ವಾಲ್ ಆಕರ್ಷಕ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಮಯಾಂಕ್ ಅಗರ್ವಾಲ್ ಹಾಗೂ ಪಂತ್ ಜೋಡಿ 3ನೇ ವಿಕೆಟ್​ಗೆ 100 ರನ್ ಕಲೆಹಾಕಿತು. ಬಳಿಕ ಮಯಾಂಕ್ ಇನಿಂಗ್ಸ್​ಗೆ ಸ್ವಯಂ ನಿವೃತ್ತಿ ಘೋಷಿಸಿದರು. ಟೆಸ್ಟ್ ಸರಣಿಯಲ್ಲಿ ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ಹೊತ್ತಿರುವ ಮಯಾಂಕ್ ಕಡೆಗೂ ಲಯ ಕಂಡುಕೊಂಡರು. ವೃದ್ದಿಮಾನ್ ಸಾಹ (30 ರನ್, 38 ಎಸೆತ, 5 ಬೌಂಡರಿ) ಹಾಗೂ ಆರ್.ಅಶ್ವಿನ್ (16 ರನ್, 43 ಎಸೆತ, 2 ಬೌಂಡರಿ) ಜೋಡಿ ಮುರಿಯದ 5ನೇ ವಿಕೆಟ್​ಗೆ 36 ರನ್ ಕಲೆಹಾಕಿತು. ಭಾರತ ತಂಡ ಮೊದಲ ಇನಿಂಗ್ಸ್​ನಲ್ಲಿ 263 ರನ್ ಗಳಿಸಿದರೆ, ನ್ಯೂಜಿಲೆಂಡ್ ತಂಡವನ್ನು 235 ರನ್​ಗಳಿಗೆ ಕಟ್ಟಿಹಾಕಿ 28 ರನ್ ಮುನ್ನಡೆ ಸಾಧಿಸಿತ್ತು. ಮೊದಲ ಟೆಸ್ಟ್ ಪಂದ್ಯ ಶುಕ್ರವಾರದಿಂದ ವೆಲ್ಲಿಂಗ್ಟನ್​ನಲ್ಲಿ ನಡೆಯಲಿದೆ.

ಭಾರತ: 263 ಮತ್ತು 4 ವಿಕೆಟ್​ಗೆ 252 (ಮಯಾಂಕ್ ಅಗರ್ವಾಲ್ 81, ರಿಷಭ್ ಪಂತ್ 70, ಪೃಥ್ವಿ ಷಾ 39, ಡಾರ್ಲೆ ಮಿಚೆಲ್ 33ಕ್ಕೆ 3), ನ್ಯೂಜಿಲೆಂಡ್ ಇಲೆವೆನ್: 235.

ವೆಲ್ಲಿಂಗ್ಟನ್ ಪಿಚ್ ಕುತೂಹಲ

ಭಾರತ ತಂಡ 2014ರಲ್ಲಿ ಕೊನೆಯದಾಗಿ ನ್ಯೂಜಿಲೆಂಡ್​ನಲ್ಲಿ ಟೆಸ್ಟ್ ಸರಣಿ ಆಡಿದ ಬಳಿಕ ಅಲ್ಲಿನ ಪಿಚ್​ಗಳು ಸಾಕಷ್ಟು ಬದಲಾಗಿವೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ ಅಜೇಯ ಓಟ ಮುಂದುವರಿಸಲು ಭಾರತ ತಂಡ ಕಿವೀಸ್ ಪಿಚ್​ಗಳನ್ನು ಬೇಗನೆ ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಜಾಗತಿಕವಾಗಿ 2016ರ ಟೆಸ್ಟ್ ಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಗೆದ್ದ ಅಂಕಿ-ಅಂಶ ಹೆಚ್ಚಿದೆ. ಆದರೆ ಕಿವೀಸ್​ನಲ್ಲಿ ಮಾತ್ರ 2ನೇ ಸರದಿಯಲ್ಲಿ ಬ್ಯಾಟಿಂಗ್ ಮಾಡಿದ ತಂಡವೇ ಹೆಚ್ಚು ಗೆಲುವು ಕಂಡಿದೆ.

ಫಾರ್ಮ್​ಗೆ  ಮರಳಿದ ಮಯಾಂಕ್

ಮಯಾಂಕ್ ಈ ಪಂದ್ಯಕ್ಕೂ ಮುನ್ನ ಏಕದಿನ, ಪ್ರಥಮ ದರ್ಜೆ, ಹಾಗೂ ಲಿಸ್ಟ್ ಎ ವಿಭಾಗದಿಂದ ಕಳೆದ 11 ಇನಿಂಗ್ಸ್​ಗಳಲ್ಲಿ ಕನಿಷ್ಠ 40 ರನ್ ದಾಟಲು ವಿಫಲರಾಗಿದ್ದರು. ಮಯಾಂಕ್ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಹುಟ್ಟುಹಬ್ಬ ದಿನದಂದು ಲಯ ಕಂಡುಕೊಂಡರು. ಈ ಕುರಿತು ಪ್ರತಿಕ್ರಿಯಿಸಿರುವ ಮಯಾಂಕ್, ‘ಟೆಸ್ಟ್ ಪಂದ್ಯಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಲಯಕ್ಕೆ ಮರಳಿರುವುದು ಆತ್ಮವಿಶ್ವಾಸ ಮೂಡಿಸಿದೆ. ನಾನು ಎಲ್ಲಿ ತಪು್ಪ ಮಾಡುತ್ತಿರುವೆ ಎಂದು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರ ಜತೆ ಚರ್ಚೆ ನಡೆಸಿದೆ. ತಾಂತ್ರಿಕವಾಗಿ ಮಾಡುತ್ತಿರುವ ತಪು್ಪಗಳನ್ನು ತಿದ್ದಿಕೊಂಡೆ. ಮೊದಲ ಇನಿಂಗ್ಸ್​ನಲ್ಲಿ ಔಟಾದ ಬಳಿಕ ನೆಟ್ಸ್​ನಲ್ಲಿ ಸಾಕಷ್ಟು ಹೊತ್ತು ಅಭ್ಯಾಸ ನಡೆಸಿದೆ. ಇದೇ ಲಯ ಮುಂದುವರಿಸಿಕೊಂಡು ಹೋಗುವೆ’ ಎಂದು ತಿಳಿಸಿದ್ದಾರೆ.

ಮಯಾಂಕ್ 29ನೇ ಜನ್ಮದಿನ

ತ್ರಿದಿನ ಅಭ್ಯಾಸ ಪಂದ್ಯದ ಬಳಿಕ ಸಹ-ಆಟಗಾರರು ಮಯಾಂಕ್ ಅಗರ್ವಾಲ್ ಅವರ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದರು. ಕರ್ನಾಟಕ ಹಾಗೂ ಭಾರತ ತಂಡದ ಹಾಲಿ-ಮಾಜಿ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರಿದರು.