ಶಿವಮೊಗ್ಗ: ಕೆಎಸ್‌ಸಿಎ (ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್) ಮಾಜಿ ಅಧ್ಯಕ್ಷ ಶ್ರೀಕಂಠದತ್ತ ಒಡೆಯರ್ ಸ್ಮರಣಾರ್ಥ ಏರ್ಪಡಿಸಿರುವ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಪಂದ್ಯಾವಳಿಯು ಆಗಸ್ಟ್ 7ರಿಂದ 22ರವರೆಗೆ ನಡೆಯಲಿದೆ.
ಆ.7ರಂದು ಮೈಸೂರಿನಲ್ಲಿ ಮೊದಲ ಪಂದ್ಯಾವಳಿ ನಡೆಯಲಿದೆ. ಮೈಸೂರಿನಲ್ಲಿ 18 ಪಂದ್ಯಗಳನ್ನು ಆಯೋಜಿಸಲಾಗಿದೆ. ಫೈನಲ್ ಸೇರಿದಂತೆ 16 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಕೆಎಸ್‌ಸಿಎ ಜಂಟಿ ಕಾರ್ಯದರ್ಶಿ ಶವೀರ್ ತಾರಾಪೂರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಮತ್ತು ಮಂಗಳೂರು ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಅಂತರಾಷ್ಟ್ರೀಯ ಕ್ರಿಕೆಟಿಗರೊಂದಿಗೆ ಆಯಾ ವಲಯದ ಇಬ್ಬರು ಆಟಗಾರರೂ ತಂಡದಲ್ಲಿ ಅವಕಾಶ ಪಡೆಯಲಿದ್ದಾರೆ.
ದೇವದತ್ತ ಪಡಿಕ್ಕಲ್, ಶ್ರೇಯಸ್ ಗೋಪಾಲ್, ಕೆ.ಗೌತಮ್, ಮನೀಶ್ ಪಾಂಡೆ, ಜೆ ಸುಚಿತ್, ಕರಣ್ ನಾಯರ್, ಮಯಾಂಕ್ ಅಗರವಾಲ್, ಅಭಿನವ್ ಮನೋಹರ್, ಕೆ.ಸಿ. ಕಾರಿಯಪ್ಪ, ಪ್ರವೀಣ್ ದುಬೆ ಮತ್ತು ಅಭಿಮನ್ಯು ಮಿಥುನ್ ಈ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಮಹಾರಾಜ ಟ್ರೋಫಿಯನ್ನು ಶವೀರ್ ತಾರಾಪೂರ್, ಕೆಎಸ್‌ಸಿಎ ವಲಯ ಸಂಚಾಲಕರಾದ ಡಿ.ಎಸ್.ಅರುಣ್, ಮಂಜುನಾಥ ರಾಜು, ಕೆ.ಶಶಿಧರ ಅನಾವರಣಗೊಳಿಸಿದರು.