ಕ್ರೀಡೆ

ಬಯೋ ಬಬಲ್ ನಿರ್ಮಾಣಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಮಾಡುತ್ತಿರುವ ಖರ್ಚು ಎಷ್ಟು.?

ಮೆಲ್ಬೋರ್ನ್: ಕರೊನಾ ವೈರಸ್ ಭೀತಿಯಿಂದಾಗಿ ಕಳೆದ 6 ತಿಂಗಳಿಂದ ನಿಂತ ನೀರಾಗಿದ್ದ ಕ್ರಿಕೆಟ್ ಚಟುವಟಿಕೆ ಇದೀಗ ಹಂತ ಹಂತವಾಗಿ ಪುನರಾರಂಭಗೊಳ್ಳುತ್ತಿದೆ. ಇಂಗ್ಲೆಂಡ್‌ನಲ್ಲಿ ಈಗಾಗಲೇ ಮೂರು ಸರಣಿಗಳು ಮುಕ್ತಾಯಗೊಂಡಿದ್ದು, ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆರಂಭಗೊಳ್ಳಲಿದೆ. ಲಾಕ್‌ಡೌನ್‌ನಿಂದಾಗಿ ಕ್ರಿಕೆಟ್ ಆಸ್ಟ್ರೇಲಿಯಾಗೆ (ಸಿಎ) ಸಾಕಷ್ಟು ನಷ್ಟವುಂಟಾಗಿತ್ತು. ಇದೀಗ ಆರ್ಥಿಕವಾಗಿ ಚೇತರಿಕೆ ಕಾಣಲು ಪರದಾಡುತ್ತಿರುವ ಸಿಎ, ಬಯೋ ಬಬಲ್ ನಿರ್ಮಿಸಿಕೊಂಡು ಬಿಗ್‌ಬಾಷ್ ಲೀಗ್ ಹಾಗೂ ಭಾರತ ವಿರುದ್ಧದ ಸರಣಿ ಆಯೋಜಿಸಲು ಸಜ್ಜಾಗಿದೆ. ಈ ಎರಡೂ ಟೂರ್ನಿಗಳಿಗಾಗಿ ಬಯೊ ಬಬಲ್ ನಿರ್ಮಾಣಕ್ಕಾಗಿ 30 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ (160 ಕೋಟಿ ರೂ) ವ್ಯಯಿಸಲಿದೆ.

ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ 13ನೇ ಐಪಿಎಲ್‌ಗೆ ವೇದಿಕೆ ಸಜ್ಜುಗೊಂಡಿದೆ. ಇದೀಗ ಭಾರತೀಯ ಕ್ರಿಕೆಟಿಗರು ಸಂಪೂರ್ಣ ಕ್ರಿಕೆಟ್‌ನತ್ತ ಗಮನಹರಿಸಿದ್ದಾರೆ. ಇದಾದ ಬಳಿಕ ಭಾರತ ತಂಡ ಯುಎಇನಿಂದ ನೇರವಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಈಗಾಗಲೇ ಟಿ20 ವಿಶ್ವಕಪ್ ಮುಂದೂಡಿಕೆಯಿಂದಾಗಿ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಭಾರತ ವಿರುದ್ಧದ ಸರಣಿಯಿಂದ ಹೆಚ್ಚಿನ ಆದಾಯದ ನಿರೀಕ್ಷೆ ಹೊಂದಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಬಿಗ್ ಬಾಷ್ ಲೀಗ್‌ಅನ್ನು ಸೂಕ್ತವಾಗಿ ಆಯೋಜಿಸದಿದ್ದರೆ, ನೇರ ಪ್ರಸಾರದ ಹಕ್ಕಿನಿಂದ ಹಿಂದೆ ಸರಿಯುವುದಾಗಿ ಚಾನೆಲ್-7 ಈಗಾಗಲೇ ಬೆದರಿಕೆ ಹಾಕಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಬಯೊ ಬಬಲ್ ನಿರ್ಮಾಣದತ್ತ ಹೆಚ್ಚಿನ ಆಸಕ್ತಿ ತೋರಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ 4 ಟೆಸ್ಟ್, 3 ಏಕದಿನ ಪಂದ್ಯಗಳನ್ನಾಡಲಿದೆ. ಡಿಸೆಂಬರ್ 3 ರಿಂದ ಫೆಬ್ರವರಿ 6 ರವರೆಗೆ ಬಿಗ್‌ಬಾಷ್ ಲೀಗ್ ನಡೆಯಲಿದೆ.