ಬೆಂಗಳೂರು: ಕರೊನಾ ಮಹಾಮಾರಿಯ ಹಾವಳಿ ಶುರುವಾದ ಬಳಿಕ ಇಡೀ ವಿಶ್ವದ ಜೀವನಶೈಲಿಯೇ ಬದಲಾಗುತ್ತಿದೆ. ಇದರಿಂದ ಕ್ರಿಕೆಟ್ ಸಹಿತ ಕ್ರೀಡೆಗಳೂ ಹೊರತಾಗಿಲ್ಲ. ಕ್ರಿಕೆಟ್ ಚಟುವಟಿಕೆ ಇನ್ನೂ ಸಂಪೂರ್ಣವಾಗಿ ಆರಂಭವಾಗದಿದ್ದರೂ, ಕರೊನಾ ಭೀತಿಯ ನಡುವೆ ಕ್ರಿಕೆಟ್ ಪುನರಾರಂಭಕ್ಕೆ ಕೆಲ ಅಗತ್ಯ ಬದಲಾವಣೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ. ಬೌಲರ್ಗಳು ಎಸೆತದಲ್ಲಿ ಸ್ವಿಂಗ್ ಸಾಧಿಸುವುದಕ್ಕಾಗಿ ಚೆಂಡನ್ನು ಪಾಲಿಶ್ ಮಾಡಲು ಎಂಜಲು ಹಚ್ಚುವುದನ್ನು ನಿಷೇಧಿಸಿರುವುದು ಇದರಲ್ಲಿ ಪ್ರಮುಖವಾಗಿದೆ. ಈ ಬದಲಾವಣೆಯ ಬಗ್ಗೆ ಮತ್ತು ಇದು ಕ್ರಿಕೆಟ್ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಲಿದೆ ಎಂಬ ಬಗ್ಗೆ ವಿವಿಧ ಹಾಲಿ-ಮಾಜಿ ಕ್ರಿಕೆಟಿಗರ ಅಭಿಪ್ರಾಯಗಳು ಇಲ್ಲಿವೆ.
ಬೌಲರ್ಗಳ ಕೌಶಲ ವೃದ್ಧಿ: ಚೆಂಡಿನ ಮೇಲೆ ಎಂಜಲು ಹಚ್ಚುವುದನ್ನು ನಿಷೇಧಿಸಿರುವುದರಿಂದ ಬೌಲರ್ಗಳ ಕೌಶಲ ಹೆಚ್ಚುತ್ತದೆ. ಪಿಚ್ನಿಂದ ಸಹಕಾರ ಪಡೆಯಲು ಬೇರೆ ರೀತಿಯ ಪ್ರಯತ್ನಗಳಿಗೆ ಮುಂದಾಗ ಬಹುದು. ಆಂಗಲ್ ಬದಲಾವಣೆ, ಸೀಮ್ ಬಳಕೆಯಂಥ ಇನ್ನಷ್ಟು ಪ್ರಯೋಗಗಳಿಗೆ ಮುಂದಾಗಿ ಕಠಿಣ ಪರಿಶ್ರಮ ಪಡಬಹುದು ಎಂದು ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್ ಹೇಳಿದ್ದಾರೆ.
ಚೆಂಡಿನ ಪಾಲಿಶ್ಗೆ ಎಂಜಲು ಹಚ್ಚುವುದನ್ನು ನಿಷೇಧಿಸಬೇಕೆಂದು ಶಿಫಾರಸು ಮಾಡಿದ್ದ ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥ ಅನಿಲ್ ಕುಂಬ್ಳೆ, ಇದೊಂದು ತಾತ್ಕಾಲಿಕ ಕ್ರಮ ಎಂದಿದ್ದಾರೆ. ಮುಂದಿನ ಕೆಲ ತಿಂಗಳು ಅಥವಾ ವರ್ಷದಲ್ಲಿ ಕರೊನಾ ನಿಯಂತ್ರಣಕ್ಕೆ ಬಂದ ನಂತರ ಹಿಂದಿನಂತೆಯೇ ಚೆಂಡಿಗೆ ಎಂಜಲು ಹಚ್ಚಬಹುದು ಎಂದಿದ್ದಾರೆ. ಎಂಜಲಿನ ಬದಲಿಗೆ ಮೇಣದಂಥ ಕೃತಕ ವಸ್ತುಗಳನ್ನು ಚೆಂಡಿಗೆ ಹಚ್ಚಲು ಅವಕಾಶ ನೀಡುವುದು ಕೂಡ ಸರಿಯಾಗುವುದಿಲ್ಲ. ಚೆಂಡು ವಿರೂಪ ಪ್ರಕರಣದಲ್ಲಿ ಆಸೀಸ್ ಕ್ರಿಕೆಟಿಗರಿಗೆ ಕಠಿಣ ಶಿಕ್ಷೆಯನ್ನೇ ನೀಡಿರುವಾಗ ಅದನ್ನು ಕಾನೂನುಬದ್ಧ ಗೊಳಿಸುವುದು ಸರಿಯಲ್ಲ ಎಂದು ಕುಂಬ್ಳೆ ಹೇಳಿದ್ದಾರೆ.
ಎಂಜಲು ಹಚ್ಚುವುದನ್ನು ನಿಷೇಧಿಸಿರುವುದರಿಂದ ಬೌಲರ್ಗಳ ಕೈ ಕಟ್ಟಿಹಾಕಿದಂತಾಗಿದೆ. ಹೀಗಾಗಿ ಟೆಸ್ಟ್ ಪಂದ್ಯಗಳಿಗೆ ಬೌಲರ್ ಸ್ನೇಹಿ ಪಿಚ್ಗಳನ್ನು ರೂಪಿಸುವ ಬಗ್ಗೆ ಐಸಿಸಿ ಒಲವು ತೋರಬೇಕಿದೆ. ಇದರಿಂದ ಬ್ಯಾಟ್ಸ್ಮನ್ಗಳ ಪ್ರಾಬಲ್ಯ ತಪ್ಪಿಸಿದಂತಾಗುತ್ತದೆ ಎಂದು ಭಾರತ ತಂಡದ ಮಾಜಿ ವೇಗಿ ಇರ್ಫಾನ್ ಪಠಾಣ್ ಹೇಳಿದ್ದಾರೆ.
ಎಂಜಲು ಅಥವಾ ಕೃತಕ ವಸ್ತುಗಳ ಬಳಕೆ ಇಲ್ಲದೆ ಚೆಂಡು ಸ್ವಿಂಗ್ ಮಾಡುವ ಉಪಾಯವೊಂದನ್ನು ಆಸೀಸ್ ಸ್ಪಿನ್ ದಿಗ್ಗಜ ಶೇನ್ ವಾರ್ನ್ ನೀಡಿದ್ದು, ಒಂದು ಬದಿಯಲ್ಲಿ ಭಾರವಾಗಿರುವ ಚೆಂಡು ಸಿದ್ಧಪಡಿಸಲು ಸಲಹೆ ನೀಡಿದ್ದಾರೆ. ಇದರಿಂದಲೂ ಚೆಂಡು ಸ್ವಿಂಗ್ ಪಡೆಯುತ್ತದೆ ಎಂದಿರುವ ವಾರ್ನ್, ಫ್ಲ್ಯಾಟ್ ಪಿಚ್ನಲ್ಲೂ ವೇಗಿಗಳಿಗೆ ಇದು ಸಹಕಾರಿಯಾಗಿರುತ್ತದೆ. ಚೆಂಡಿನೊಂದಿಗೆ ಯಾರೂ, ಏನನ್ನೂ ಮಾಡಬೇಕಾಗಿರುವುದಿಲ್ಲ. ಚೆಂಡು ವಿರೂಪದ ಭೀತಿಯೂ ಇರುವುದಿಲ್ಲ. ಚೆಂಡು-ಬ್ಯಾಟಿನ ನಡುವೆ ಉತ್ತಮ ಸ್ಪರ್ಧೆಯೂ ಇರುತ್ತದೆ ಎಂದಿದ್ದಾರೆ.
ಚೆಂಡಿಗೆ ಎಂಜಲು ಹಚ್ಚದಿರುವುದನ್ನು ಅಭ್ಯಾಸ ಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಚೆಂಡಿನ ಮೇಲೆ ಎಂಜಲು ಹಚ್ಚುವುದು ನನಗೆ ಸ್ವಾಭಾವಿಕ ಅಭ್ಯಾಸ. ಮರಳಿ ಕಣಕ್ಕಿಳಿದಾಗ ಅದನ್ನು ಬದಲಾಯಿಸಲು ಯತ್ನಿಸುತ್ತೇನೆ. ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಭಾರತ ತಂಡದ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಹೇಳಿದ್ದಾರೆ.
ಚೆಂಡಿಗೆ ಎಂಜಲು ಹಚ್ಚದಿರುವ ನಿಯಮವನ್ನು ಅಳವಡಿಸಿಕೊಳ್ಳುವುದು ಕಷ್ಟ. ಬೌಲರ್ಗಳು ವೃತ್ತಿಜೀವನದುದ್ದಕ್ಕೂ ಎಂಜಲು ತೆಗೆದು ಚೆಂಡಿಗೆ ಉಜ್ಜುವುದನ್ನೇ ಅಭ್ಯಾಸವಾಗಿಸಿಕೊಂಡಿರುವಾಗ ಅದನ್ನು ರಾತ್ರಿಬೆಳಗಾಗುವುದರೊಳಗೆ ಬದಲಾವಣೆ ಮಾಡಿಕೊಳ್ಳುವುದು ಕಷ್ಟ ಎಂದು ಆಸೀಸ್ ಪರ 76 ಟೆಸ್ಟ್, 221 ಏಕದಿನ ಪಂದ್ಯವಾಡಿರುವ ವೇಗಿ ಬ್ರೆಟ್ ಲೀ ಹೇಳಿದ್ದಾರೆ. ಆದರೆ ಹಾಲಿ ಪರಿಸ್ಥಿತಿಯಲ್ಲಿ ಇದೊಂದು ಉತ್ತಮ ಕ್ರಮವೇ ಆಗಿದೆ ಎಂದಿದ್ದಾರೆ.
ಚೆಂಡಿನ ಮೇಲೆ ಎಂಜಲು ಹಚ್ಚುವುದು ಅಪಾಯಕಾರಿ ಎಂಬುದನ್ನು ಒಪ್ಪಿಕೊಂಡಿರುವ ಆಸೀಸ್ ವೇಗಿ ಪ್ಯಾಟ್ ಕಮ್ಮಿನ್ಸ್, ಚೆಂಡನ್ನು ಪಾಲಿಶ್ ಮಾಡಲು ಪರ್ಯಾಯ ವ್ಯವಸ್ಥೆಯೂ ಅಗತ್ಯವಾಗಿದೆ ಎಂದಿದ್ದಾರೆ. ‘ಚೆಂಡಿಗೆ ಬೆವರು ಹಚ್ಚಲು ಅವಕಾಶ ನೀಡಲಾಗಿದೆ. ಜತೆಗೆ ಮೇಣ ಅಥವಾ ಇತರ ಕೃತಕ ವಸ್ತುಗಳನ್ನು ಬಳಸಲೂ ಅವಕಾಶ ನೀಡಬೇಕು. ಯಾಕೆಂದರೆ ಸ್ಪೆಲ್ ಆರಂಭಿಸುವಾಗಲೇ ಯಾರೂ ಬೆವರಿರುವುದಿಲ್ಲ’ ಎಂದು ಕಮ್ಮಿನ್ಸ್ ಹೇಳಿದ್ದಾರೆ.
ಚೆಂಡಿಗೆ ಎಂಜಲು ಹಚ್ಚುವುದನ್ನು ನಿಷೇಧಿಸಿರುವುದರಿಂದ ಈ ಹೊಸ ಸಹಜಸ್ಥಿತಿಗೆ ಹೊಂದಿಕೊಳ್ಳಬೇಕಿದೆ ಎಂದು ಭಾರತ ತಂಡದ ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮ ಹೇಳಿದ್ದಾರೆ. ‘ಎಂಜಲು ಹಚ್ಚದಿರುವುದರಿಂದಾಗಿ ಬೌಲರ್ಗಳು ಬಯಸಿದಂತೆ ಚೆಂಡು ಶೈನ್ ಮಾಡಲು ಸಾಧ್ಯವಾಗದು. ಆದರೆ ಬೇರೆ ಆಯ್ಕೆ ಇಲ್ಲ. ಈ ಹೊಸ ವಿಷಯಕ್ಕೆ ಹೊಂದಿಕೊಳ್ಳಲೇಬೇಕಿದೆ. ಇದನ್ನು ವಿರೋಧಿಸುವುದಕ್ಕಿಂತ ಹಾಲಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ’ ಎಂದಿದ್ದಾರೆ ಇಶಾಂತ್ ಶರ್ಮ.