ಕ್ರೀಡೆ

ಸೂರ್ಯ​ ಹಿಡಿದ ವಿವಾದಾತ್ಮಕ ಕ್ಯಾಚ್​ಗೆ ಸಂಬಂಧಿಸಿದ ಹೊಸ ವಿಡಿಯೋ ವೈರಲ್! ವಿರೋಧಿಗಳ ಬಾಯಿಗೆ ಬಿತ್ತು ಬೀಗ

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಟೀಮ್​ ಇಂಡಿಯಾದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್, ಬೌಂಡರಿ ಗೆರೆ ಬಳಿ ಅದ್ಭುತ ಕ್ಯಾಚ್ ಹಿಡಿದಿದ್ದು ಇನ್ನೂ ಹಸಿರಾಗೇ ಉಳಿದಿದೆ. ಈ ಕ್ಯಾಚ್​ನಿಂದಾಗಿ ಅಪಾಯಕಾರಿ ಬ್ಯಾಟರ್ ಡೇವಿಡ್ ಮಿಲ್ಲರ್ ಪೆವಿಲಿಯನ್ ಸೇರಿದರು. ಇದು ಆಗದೇ ಇದ್ದಿದ್ದರೆ ಅಂದಿನ ಫಲಿತಾಂಶವೇ ಬೇರೆಯಾಗುತ್ತಿತ್ತು. ಇಡೀ ಪಂದ್ಯಕ್ಕೆ ರೋಚಕ ತಿರುವು ಕೊಟ್ಟ ಕ್ಯಾಚ್​ ಇದು.

ಇನ್ನು ಇದೇ ಕ್ಯಾಚ್ ವಿಚಾರವಾಗಿ ಭಾರಿ ವಿವಾದವೇ ಸ್ಫೋಟಗೊಂಡಿತು. ಬೌಂಡರಿ ಲೈನ್​ ಅನ್ನು ಯಾದವ್​ ಸ್ಪರ್ಶಿಸಿದ್ದಾರೆ ಎಂಬ ಅಭಿಪ್ರಾಯಗಳು ಸಹ ವ್ಯಕ್ತವಾದವು. ಅಲ್ಲದೆ, ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಯಿತು. ಟೀಮ್​ ಇಂಡಿಯಾ ಮೋಸದಿಂದ ಗೆದ್ದಿದೆ ಎಂದು ಅಪಪ್ರಚಾರ ಸಹ ಮಾಡಲಾಯಿತು. ಆದರೆ, ಇದೆಲ್ಲ ಸುಳ್ಳು ಎಂದು ಭಾರತೀಯ ಕ್ರೀಡಾಭಿಮಾನಿಗಳು ವಾದಿಸುತ್ತಿದ್ದಾರೆ. ಅಲ್ಲದೆ, ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಸಹ ಹರಿಬಿಡುತ್ತಿದ್ದಾರೆ. ಫೈನಲ್ ಮುಗಿದ ಕೆಲ ದಿನಗಳ ನಂತರವೂ ಈ ಕ್ಯಾಚ್ ಬಗ್ಗೆ ಒಂದಿಲ್ಲೊಂದು ಸುದ್ದಿ ಬರುತ್ತಲೇ ಇದೆ. ಇದೀಗ ಜಾಲತಾಣದಲ್ಲಿ ಇದೇ ಕ್ಯಾಚ್​ಗೆ ಸಂಬಂಧಿಸಿದ ಹೊಸ ವಿಡಿಯೋವೊಂದು ವೈರಲ್ ಆಗಿದೆ. ಅದರೊಂದಿಗೆ ಈ ವಿವಾದಕ್ಕೆ ಫುಲ್ ಸ್ಟಾಪ್ ಹಾಕಿದಂತಾಗಿದೆ.

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬೌಂಡರಿ ಗೆರೆ ಬಳಿ ಸೂರ್ಯಕುಮಾರ್ ಯಾದವ್ ಹಿಡಿದ ಅಮೋಘ ಕ್ಯಾಚ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮ ಕ್ಯಾಚ್ ಎನಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಈ ಕ್ಯಾಚ್ ಜನಪ್ರಿಯವಾಗುತ್ತಿದ್ದಂತೆ, ಇದು ವಿವಾದಾತ್ಮಕವಾಯಿತು. ಕ್ಯಾಚ್ ತೆಗೆಯುವಾಗ ಸೂರ್ಯ ಕಾಲು ಬೌಂಡರಿ ಗೆರೆ ಮುಟ್ಟಿತು ಎಂದು ಕೆಲವರು ಕಮೆಂಟ್ ಮಾಡಿದರೆ, ಇನ್ನು ಕೆಲವರು ಇದು ಫೇರ್ ಕ್ಯಾಚ್ ಎಂದು ಸೂರ್ಯ ಅವರನ್ನು ಬೆಂಬಲಿಸಿದರು. ದಕ್ಷಿಣ ಆಫ್ರಿಕಾದ ದಿಗ್ಗಜ ಶಾನ್ ಪೊಲಾಕ್ ಕೂಡ ಕ್ಯಾಚ್ ಸರಿಯಾಗಿತ್ತು ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಈ ಕ್ಯಾಚ್‌ಗೆ ಸಂಬಂಧಿಸಿದ ಹೊಸ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಆ ವಿಡಿಯೋದಲ್ಲಿ ಸೂರ್ಯಕುಮಾರ್ ಸರಿಯಾಗಿ ಕ್ಯಾಚ್ ಹಿಡಿದಿರುವುದು ಸ್ಪಷ್ಟವಾಗಿದೆ. ಇದು ಕೊಂಚ ವೈರಲ್ ಆಗುತ್ತಿದ್ದಂತೆ ಈ ವಿವಾದಕ್ಕೆ ಫುಲ್ ಸ್ಟಾಪ್ ಬಿದ್ದಿದೆ. ಅಲ್ಲದೆ, ಅಪಪ್ರಚಾರ ಮಾಡುತ್ತಿರುವವರಿಗೆ ಈ ವಿಡಿಯೋ ಖಡಕ್​ ತಿರುಗೇಟು ನೀಡಿದಂತಿದೆ. ಇನ್ನಾದರೂ ಸುಳ್ಳು ಹೇಳುವವರು ಬಾಯಿ ಮುಚ್ಚುತ್ತಾರೆಯೇ? ಎಂದು ಭಾರತೀಯ ಅಭಿಮಾನಿಗಳು ಕೌಂಟರ್ ಕೊಡುತ್ತಿದ್ದಾರೆ.

ಇನ್ನೂ ಈ ಕ್ಯಾಚ್ ಬಗ್ಗೆ ಸೂರ್ಯಕುಮಾರ್​ ಕೂಡ ಪ್ರತಿಕ್ರಿಯಿಸಿದ್ದಾರೆ. ಇಂತಹ ಕ್ಯಾಚ್ ಹಿಡಿಯುವುದರ ಹಿಂದೆ ಸಾಕಷ್ಟು ಅಭ್ಯಾಸವಿದ್ದು, ಬೇರೆ ಬೇರೆ ಗ್ರೌಂಡ್​ಗಳಲ್ಲಿ ಕ್ಯಾಚ್ ಹಿಡಿಯುವ ಅಭ್ಯಾಸ ನಡೆಸಿದ್ದೇನೆ ಎಂದು ಸೂರ್ಯ ಹೇಳಿದರು. ಅಲ್ಲದೆ, ರೋಹಿತ್ ಶರ್ಮಾ ನನ್ನ ಬಳಿ ಇದ್ದಿದ್ದರೆ ಅವರಿಗೆ ಚೆಂಡನ್ನು ಎಸೆಯಲು ಬಯಸಿದ್ದೆ ಎಂದು ತಿಳಿಸಿದ್ದರು. (ಏಜೆನ್ಸೀಸ್​)