ಕ್ರೀಡೆ

ಭಾರತ ಹಾಕಿ ತಂಡಕ್ಕೆ ಇಂದು ಬ್ರಿಟನ್ ಸವಾಲು: ಟೋಕಿಯೊ ಗೇಮ್ಸ್ ನಾಕೌಟ್ ಎದುರಾಳಿಗಳ ಮರು ಮುಖಾಮುಖಿ

ಪ್ಯಾರಿಸ್: ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಗೆಲುವಿನಿಂದ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಹರ್ಮಾನ್‌ಪ್ರೀತ್ ಸಿಂಗ್ ಸಾರಥ್ಯದ ಭಾರತದ ಪುರುಷರ ತಂಡ ಪ್ಯಾರಿಸ್ ಒಲಿಂಪಿಕ್ಸ್‌ನ ಹಾಕಿ ಸ್ಪರ್ಧೆಯ ಕ್ವಾರ್ಟರ್‌ಫೈನಲ್‌ನಲ್ಲಿ ಬ್ರಿಟನ್ ಎದುರು ಭಾನುವಾರ ಕಣಕ್ಕಿಳಿಯಲಿದೆ. ಹಾಕಿಯಲ್ಲಿ ಭಾರತದ ಗತವೈಭವ ಮರಕಳಿಸುವ ಜತೆಗೆ ಸತತ ಎರಡನೇ ಪದಕದ ನಿರೀಕ್ಷೆ ಹರಡಿದೆ. ಉಭಯ ತಂಡಗಳ ಮುಖಾಮುಖಿ 2021ರ ಟೋಕಿಯೊ ಗೇಮ್ಸ್ ಎಂಟರ ಘಟ್ಟದ ಪುನರಾವರ್ತನೆ ಎನಿಸಿದೆ.

52 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಆಸೀಸ್ ತಂಡವನ್ನು ಮಣಿಸಿರುವ ಭಾರತ ತಂಡ ಬಿ ಗುಂಪಿನಲ್ಲಿ 2ನೇ ಸ್ಥಾನದೊಂದಿಗೆ ನಾಕೌಟ್‌ಗೇರಿದೆ. ಗುಂಪು ಹಂತದಲ್ಲಿ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಬೆಲ್ಜಿಯಂ ಎದುರು ಮಾತ್ರ ಸೋತಿರುವ ಹರ್ಮಾನ್‌ಪ್ರೀತ್ ಪಡೆ ಕೂಟದಲ್ಲಿ ಉತ್ತಮ ಲಯದಲ್ಲಿದೆ. ಬ್ರಿಟನ್ ತಂಡ ಎ ಗುಂಪಿನ ತನ್ನ ಅಂತಿಮ ಪಂದ್ಯದಲ್ಲಿ ಜರ್ಮನಿ ಎದುರು ಸೋಲು ಅನುಭವಿಸಿದ್ದು, ಆಡಿರುವ 5 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಇದುವರೆಗೆ ಒಲಿಂಪಿಕ್ಸ್ ಕೂಟದಲ್ಲಿ 8 ಚಿನ್ನ ಸಹಿತ 12 ಪದಕ ಜಯಿಸಿರುವ ಭಾರತ ಹಾಕಿ ತಂಡ 13ನೇ ಪದಕದ ಹಂಬಲದಲ್ಲಿದೆ. 2021ರ ಒಲಿಂಪಿಕ್ಸ್ ಕ್ವಾರ್ಟರ್‌ೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಎಲ್ಲ 8 ತಂಡಗಳೇ ಪ್ಯಾರಿಸ್‌ನಲ್ಲೂ ಸೆಮೀಸ್ ಸ್ಥಾನಕ್ಕೆ ಹೋರಾಡಲಿರುವುದು ಈ ಬಾರಿಯ ವಿಶೇಷವಾಗಿದೆ.

ನಾಯಕ ಹರ್ಮಾನ್‌ಪ್ರೀತ್ ಸಿಂಗ್ ಕೂಟದಲ್ಲಿ ಒಟ್ಟು ಆರು ಗೋಲು ಸಿಡಿಸಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ತನ್ನ ಕೊನೇ ಕೂಟದಲ್ಲಿಯೂ ಅದ್ಭುತ ಪ್ರದರ್ಶನ ಮುಂದುವರಿಸಿರುವ ಗೋಲು ಕೀಪರ್ ಪಿಆರ್ ಶ್ರೀಜೇಶ್ ಬ್ರಿಟನ್ ವಿರುದ್ಧ ಭಾರತದ ಪಾಲಿಗೆ ನಿರ್ಣಾಯಕ ಎನಿಸಲಿದ್ದಾರೆ. ಟೋಕಿಯೊ ಗೇಮ್ಸ್‌ನಲ್ಲಿ ಕಂಚು ಜಯಿಸಿರುವ ಭಾರತಕ್ಕೆ ಈ ಬಾರಿ ನೈಜ ಪರೀಕ್ಷೆ ಎದುರಾಗುವ ಸಾಧ್ಯತೆಗಳಿವೆ. ಪ್ರಸ್ತುತ ಎ್ಐಎಚ್ ರ‌್ಯಾಂಕಿಂಗ್‌ನಲ್ಲಿ ಬ್ರಿಟನ್ 2ನೇ ಸ್ಥಾನದಲ್ಲಿದ್ದು, ಭಾರತ 7ನೇ ಸ್ಥಾನದಲ್ಲಿದೆ.

ಅನುಭವಿ ಮನ್‌ಪ್ರೀತ್ ಸಿಂಗ್ ಮತ್ತು ಉಪನಾಯಕ ಹಾರ್ದಿಕ್ ಸಿಂಗ್ ನೇತೃತ್ವದ ಮಿಡ್‌ಫೀಲ್ಡ್ ಮತ್ತು ಫಾರ್ವರ್ಡ್‌ಲೈನ್ ನಡುವಿನ ಸಮನ್ವಯ ಜತೆಗೆ ಗುರ್ಜಂತ್ ಸಿಂಗ್ ಮತ್ತು ಸುಖ್‌ಜೀತ್ ಸಿಂಗ್ ಪ್ರದರ್ಶನ ಭಾರತದ ಪಾಲಿಗೆ ನಿರ್ಣಾಯಕ ಎನಿಸಿದೆ. ಜತೆಗೆ ಈ ಬಾರಿ ೈನಲ್‌ಗೇರುವ ಉತ್ತಮ ಅವಕಾಶ ಭಾರತಕ್ಕಿದೆ. ಹರ್ಮಾನ್‌ಪ್ರೀತ್ ಪಡೆ ಸೆಮೀಸ್‌ಗೇರಿದರೆ ಜರ್ಮನಿ ಅಥವಾ ಅರ್ಜೆಂಟೀನಾ ತಂಡ ಎದುರಾಗಲಿದೆ.

ಇತರ ಕ್ವಾರ್ಟರ್‌ಫೈನಲ್ಸ್

ಬೆಲ್ಜಿಯಂ-ಸ್ಪೇನ್

ಆರಂಭ: ಸಂಜೆ 4.00

ಆಸ್ಟ್ರೇಲಿಯಾ-ನೆದರ್ಲೆಂಡ್

ಆರಂಭ: ರಾತ್ರಿ 9.00

ಜರ್ಮನಿ-ಅರ್ಜೆಂಟೀನಾ

ಆರಂಭ: ರಾತ್ರಿ 11.30