ಸಿಡ್ನಿ: ರೋಹಿತ್ ಶರ್ಮ ಗೈರಿನಿಂದಾಗಿ ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯಲ್ಲಿ ಭಾರತ ತಂಡ ಹೊಸ ಆರಂಭಿಕರನ್ನು ಕಣಕ್ಕಿಳಿಸಬೇಕಾದ ಸವಾಲು ಎದುರಿಸುತ್ತಿದೆ. ಅನುಭವಿ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರಿಗೆ ಆರಂಭಿಕ ಜತೆಗಾರರಾಗಲು ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತು ಪಂಜಾಬ್‌ನ ಯುವ ಬ್ಯಾಟ್ಸ್‌ಮನ್ ಶುಭಮಾನ್ ಗಿಲ್ ನಡುವೆ ಪೈಪೋಟಿ ಏರ್ಪಟ್ಟಿದೆ.
ಕಳೆದ ಐಪಿಎಲ್ ಟೂರ್ನಿಯಲ್ಲಿ ಮಯಾಂಕ್ ಮತ್ತು ಗಿಲ್ ಇಬ್ಬರೂ ಉತ್ತಮ ನಿರ್ವಹಣೆ ತೋರಿದ್ದರು. ಹೀಗಾಗಿ ಇವರಿಬ್ಬರಲ್ಲಿ ಯಾರನ್ನು ಆಡಿಸುವುದು ಎಂಬ ಬಗ್ಗೆ ಕೋಚ್ ರವಿಶಾಸಿ ಮತ್ತು ನಾಯಕ ವಿರಾಟ್ ಕೊಹ್ಲಿ ಸಹಿತ ಟೀಮ್ ಮ್ಯಾನೇಜ್‌ಮೆಂಟ್‌ನಲ್ಲಿ ಗೊಂದಲ ಏರ್ಪಟ್ಟಿದೆ.
ಐಪಿಎಲ್‌ನಲ್ಲಿ ಗಾಯದಿಂದಾಗಿ 3 ಪಂದ್ಯ ತಪ್ಪಿಸಿಕೊಂಡಿದ್ದ 29 ವರ್ಷದ ಮಯಾಂಕ್, ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ 11 ಪಂದ್ಯಗಳಲ್ಲಿ 1 ಶತಕ ಮತ್ತು 2 ಅರ್ಧಶತಕಗಳ ಸಹಿತ 38.54ರ ಸರಾಸರಿಯಲ್ಲಿ 424 ರನ್ ಬಾರಿಸಿದ್ದರು. ಮತ್ತೊಂದೆಡೆ ಕೋಲ್ಕತ ನೈಟ್‌ರೈಡರ್ಸ್ ಪರ ಆಡಿದ್ದ 21 ವರ್ಷದ ಶುಭಮಾನ್ ಗಿಲ್, 14 ಪಂದ್ಯಗಳಲ್ಲಿ 3 ಅರ್ಧಶತಕಗಳ ಸಹಿತ 33.84ರ ಸರಾಸರಿಯಲ್ಲಿ 440 ರನ್ ಗಳಿಸಿದ್ದರು. ಆದರೆ ಗಿಲ್‌ಗೆ (117.96) ಹೋಲಿಸಿದರೆ, ಮಯಾಂಕ್ (156.45) ಉತ್ತಮ ಸ್ಟ್ರೈಕ್‌ರೇಟ್ ಹೊಂದಿದ್ದರು.
ಮಯಾಂಕ್ ಮತ್ತು ಗಿಲ್ ಈ ಹಿಂದೆ ಭಾರತ ತಂಡದ ಪರ ಕ್ರಮವಾಗಿ 3 ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದು, ಆಗಿನ ಅವಕಾಶದಲ್ಲಿ ಉತ್ತಮ ನಿರ್ವಹಣೆ ತೋರಲು ವಿಲರಾಗಿದ್ದರು. ವರ್ಷಾರಂಭದ ನ್ಯೂಜಿಲೆಂಡ್ ಪ್ರವಾಸದ ಏಕದಿನ ಸರಣಿಯಲ್ಲಿ ಆಡಿದ್ದ ಮಯಾಂಕ್, ಗರಿಷ್ಠ 32 ರನ್ ಸಹಿತ ಒಟ್ಟು 36 ರನ್ ಗಳಿಸಿದ್ದರು. ಗಿಲ್ ಕೂಡ 2019ರ ನ್ಯೂಜಿಲೆಂಡ್ ಪ್ರವಾಸದಲ್ಲೇ ಏಕದಿನ ಪಂದ್ಯವಾಡಿದ್ದು, ಗರಿಷ್ಠ 9 ರನ್ ಸಹಿತ 16 ರನ್ ಮಾತ್ರ ಗಳಿಸಿದ್ದರು. ಆದರೆ ಇದೆಲ್ಲ ತುಂಬ ಹಿಂದಿನ ಪಂದ್ಯವಾಗಿರುವುದರಿಂದ ಈಗ ಪರಿಗಣನೆಗೆ ಬಾರದು. ಸದ್ಯ ಇಬ್ಬರೂ ಉತ್ತಮ ಲಯದಲ್ಲಿದ್ದು, ಯಾರಿಗೆ ಶುಕ್ರವಾರ ಆಡುವ ಅದೃಷ್ಟ ಒಲಿಯಲಿದೆ ಎಂದು ಕಾದುನೋಡಬೇಕಿದೆ.
9 ಆಟಗಾರರ ಸ್ಥಾನ ಭದ್ರ
ಮೊದಲ ಏಕದಿನ ಪಂದ್ಯಕ್ಕೆ 9 ಆಟಗಾರರಿಗೆ ಸ್ಥಾನ ನಿಶ್ಚಿತವೆನಿಸಿದೆ. ಅವರೆಂದರೆ ಶಿಖರ್ ಧವನ್, ನಾಯಕ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮದ್ ಶಮಿ. ಉಳಿದಂತೆ 2 ಸ್ಥಾನಗಳಿಗೆ ಮಾತ್ರ ಆಯ್ಕೆ ಗೊಂದಲಗಳಿವೆ. ಓರ್ವ ಆರಂಭಿಕನ ಸ್ಥಾನ ಜತೆಗೆ 3ನೇ ವೇಗಿ ಯಾರೆಂಬ ಕುತೂಹಲವಿದೆ. ಸದ್ಯಕ್ಕೆ ನವದೀಪ್ ಸೈನಿ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಇನ್ನು ಕಾರ್ಯದೊತ್ತಡ ತಗ್ಗಿಸಲು ಆವರ್ತನ ಪದ್ಧತಿಯನ್ವಯ ಬುಮ್ರಾ-ಶಮಿ ಅವರಿಬ್ಬರಲ್ಲಿ ಒಬ್ಬರನ್ನಷ್ಟೇ ಆಡಿಸಲು ಮುಂದಾದರೆ, ಮತ್ತೋರ್ವ ವೇಗಿ ಶಾರ್ದೂಲ್ ಠಾಕೂರ್‌ಗೂ ಅವಕಾಶ ಒಲಿಯಬಹುದು.
ಏಕದಿನಕ್ಕೆ ಕೊನೇ ಆದ್ಯತೆ!
ನವೆಂಬರ್ 27ರಂದು ಏಕದಿನ ಸರಣಿಯ ಮೂಲಕ ಪ್ರವಾಸದಲ್ಲಿ ಭಾರತ ತಂಡದ ಅಭಿಯಾನ ಆರಂಭವಾಗುತ್ತಿದ್ದರೂ, ಟೆಸ್ಟ್ ಮತ್ತು ಟಿ20 ಸರಣಿಗಿಂತ ಇದಕ್ಕೆ ಕೊನೇ ಆದ್ಯತೆಯಾಗಿದೆ. ಯಾಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ಗೇರುವ ದೃಷ್ಟಿಯಿಂದ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದರೆ, ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ತಂಡ ರೂಪಿಸುವ ದೃಷ್ಟಿಯಿಂದ ಚುಟುಕು ಕ್ರಿಕೆಟ್ ಪ್ರಕಾರದ ಕಾಂಬಿನೇಷನ್ ರೂಪಿಸುವ ಚಿಂತನೆ ಇದೆ. ಆದರೆ ಏಕದಿನ ವಿಶ್ವಕಪ್‌ಗೆ ಇನ್ನೂ 3 ವರ್ಷಗಳ ಕಾಲಾವಕಾಶ ಇದೆ. ಹೀಗಾಗಿ ಏಕದಿನ ತಂಡದ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎನ್ನಲಾಗುತ್ತಿದೆ.