ಬೆಂಗಳೂರು: ಗ್ರಾಮ ಮಟ್ಟದಿಂದ ಒಲಿಂಪಿಕ್ಸೃ್ನಲ್ಲಿ ಭಾಗವಹಿಸುವ ಕ್ರೀಡಾ ಪ್ರತಿಭೆಗಳಿಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆಯಿಟ್ಟಿದೆ. ಮಕ್ಕಳಲ್ಲಿನ ಕ್ರೀಡಾ ಸಾಮರ್ಥ್ಯವನ್ನು ಗುರುತಿಸಿ ತರಬೇತಿ ನೀಡಲು ಪ್ರತಿ ಶಾಲೆಯಲ್ಲೂ ದೈಹಿಕ ಶಿಕ್ಷಣ ಶಿಕ್ಷಕರ ಅಗತ್ಯವಿದೆ. ಈ ಹುದ್ದೆಗಳ ನೇಮಕಾತಿಗೆ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಗಮನ ಹರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ 5ನೇ ಆವೃತ್ತಿಯ ಮಿನಿ ಕರ್ನಾಟಕ ಕ್ರೀಡಾಕೂಟದ ಆರಂಭ ೋಷಿಸಿ ಮಾತನಾಡಿದ ಅವರು, ಯುವ ಪ್ರತಿಭೆಗಳನ್ನು ಹೊರತರುವ ಉದ್ದೇಶದಿಂದ ಭಾರತ ಜೋಡೋ ಯುವ ಸಂಘಗಳನ್ನು ಪ್ರಾರಂಭಿಸಿದ್ದೇವೆ. 16ರಿಂದ 35 ವರ್ಷದ ಪ್ರತಿಭೆಗಳಿಗೆ ಇದು ಉತ್ತಮ ವೇದಿಕೆಯಾಗಿದ್ದು, ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಪ್ರತಿಯೊಬ್ಬರೂ ಗೆಲ್ಲಲೇಬೇಕೆಂಬ ಪಣ ತೊಟ್ಟಿರುತ್ತಾರೆ. ಆದರೆ, ಸೋತವರಿಗೂ ಮುಂದೆ ಗೆಲ್ಲುವ ಅವಕಾಶ ಇರಲಿದೆ. ಪ್ರತಿ ಮಗುವೂ ಚಾಂಪಿಯನ್ ಆಗಿದ್ದು, ಜೀವನದಲ್ಲಿ ಧೈರ್ಯ ಕಳೆದುಕೊಳ್ಳಬಾರದು. ಕನಸು ಕಾಣುವುದರ ಜತೆಗೆ ಅದನ್ನು ನನಸಾಗಿಸಲು ನಿರಂತರ ಪ್ರಯತ್ನ ಮುಖ್ಯ. ಗೆದ್ದಾಗ ಹೆಮ್ಮೆ ಪಡಬೇಡಿ. ಸೋತಾಗ ಧೈರ್ಯ ಕಳೆದುಕೊಳ್ಳಬೇಡಿ ಎಂದು ಕ್ರೀಡಾಪಟುಗಳಿಗೆ ಸಿಎಂ ಸಲಹೆ ನೀಡಿದರು. ಶಾಲಾ ಹಂತದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಒದಗಿಸಲು ಸರ್ಕಾರ ಬದ್ಧ. ದೊರೆತ ಅವಕಾಶದಲ್ಲಿ ರಾಜ್ಯಕ್ಕೆ ಗೌರವ ತರುವ ಸಾಧನೆ ಮಾಡಬೇಕು ಎಂದು ಅವರು ಹೇಳಿದರು.
ಬಾಲ್ಯದ ಮೆಲುಕು ಹಾಕಿದ ಸಿಎಂ
ಹೈಸ್ಕೂಲಿನ ದಿನಗಳನ್ನು ನೆನಪಿಸಿಕೊಂಡ ಸಿಎಂ, ಸತತ ಮೂರು ವರ್ಷ ಶಾಲಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದಕ್ಕೆ ಅಂದಿನ ರಾಜ್ಯಪಾಲರಿಂದ ಗೌರವ ಸ್ವೀಕರಿಸಿದ್ದೆ. ಜಾವೆಲಿನ್ ಥ್ರೋನಲ್ಲಿ ಶಾಲಾ ಮಟ್ಟದ ದಾಖಲೆ ಜತೆಗೆ ವಾಲಿಬಾಲ್, ಕ್ರಾಸ್ ಕಂಟ್ರಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದೆ ಎಂದರು. ಪಿಯುಸಿಯಲ್ಲಿಯೂ ಕ್ರೀಡಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದೆ ಎಂದ ಅವರು, ತಾವು ಅಭ್ಯಾಸ ನಡೆಸುತ್ತಿದ್ದ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಉದ್ಘಾಟನೆ ಮಾಡುತ್ತಿರುವುದಕ್ಕೆ ಹರ್ಷವ್ಯಕ್ತಪಡಿಸಿದರು.
ದಕ್ಷಿಣ ಭಾರತ ಒಲಿಂಪಿಕ್ಸ್ ಪ್ರಸ್ತಾಪ
ಸರ್ಕಾರಿ ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಶೇ.2 ಹಾಗೂ ಅರಣ್ಯ-ಪೊಲೀಸ್ ಇಲಾಖೆಯಲ್ಲಿ ಶೇ.3 ಮೀಸಲಾತಿ ನೀಡಿರುವ ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಕೆಒಎ ಅಧ್ಯಕ್ಷ ಡಾ. ಕೆ. ಗೋವಿಂದರಾಜ್, ಶಾಲಾ-ಕಾಲೇಜು ಹಂತದ ಕ್ರೀಡಾಪಟುಗಳಿಗೆ ಪರೀಕ್ಷೆಯಲ್ಲಿ 5 ಗ್ರೇಸ್ ಅಂಕ (ಹೆಚ್ಚುವರಿ) ನೀಡುವಂತೆಯೂ ಸಿಎಂಗೆ ಮನವಿ ಸಲ್ಲಿಸಿದರು. ಜತೆಗೆ ದಕ್ಷಿಣ ಭಾರತದ ಐದು ರಾಜ್ಯಗಳ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ದಕ್ಷಿಣ ಭಾರತ ಒಲಿಂಪಿಕ್ಸ್ ಆಯೋಜನೆಗೆ ಸರ್ಕಾರದ ಸಹಕಾರ ಕೋರಿದರು. ಪಿಯುಸಿ ಹಂತದಲ್ಲಿ ಕ್ರೀಡಾಕೂಟಗಳು ನಡೆಯದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಫಿಬಾ ಏಷ್ಯಾ ಅಧ್ಯಕ್ಷ ಗೋವಿಂದರಾಜ್, ಪದವಿ ಪೂರ್ವ ಹಂತದ ಕ್ರೀಡಾಕೂಟಗಳಿಗೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಅನುಮತಿ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಸ್ಥಳದಲ್ಲಿಯೇ ಸ್ಪಂದಿಸಿದ ಸಿಎಂ ಡಿಕೆಶಿ, ಈ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮವಹಿಸುವ ಭರವಸೆ ನೀಡಿದರು.
ಆರತ್ರಿಕಾ-ವರ್ಚಸ್ಗೆ ಮೊದಲ ಪದಕ
ಬೆಂಗಳೂರಿನ ಶೂಟರ್ಗಳಾದ ಆರತ್ರಿಕಾ ದಾಸ್, ವರ್ಚಸ್ ಎಸ್. ಕ್ರಮವಾಗಿ ಕೂಟದ ಬಾಲಕಿಯರ-ಬಾಲಕರ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಗೆದ್ದುಕೊಂಡರು. ಬಾಲಕಿಯರ ವೈಯಕ್ತಿಕ 10 ಮೀ. ಏರ್ ರೈಲ್ನಲ್ಲಿ ಆರತ್ರಿಕಾ 418.2 ಅಂಕದೊಂದಿಗೆ ಅಗ್ರಸ್ಥಾನ ಪಡೆದರೆ, ಹೆಮ್ಸುತಾ (417.7), ಹರಿಣಿ (417) ನಂತರದ 2 ಸ್ಥಾನ ಪಡೆದರು. ಬಾಲಕರ ವಿಭಾಗದಲ್ಲಿ ವರ್ಚಸ್ 416.5 ಅಂಕಕ್ಕೆ ಗುರಿಯಿಟ್ಟರೆ, ಆಯುಷ್ ಪರಿಕ್ಷೀತ್ ಚಿಪಲಕಟ್ಟಿ (415.4), ಲಕ್ಷ್ಯ ಸಿನ್ಹಾ (415.1) ಕ್ರಮವಾಗಿ ರಜತ, ಕಂಚು ಗೆದ್ದರು.