ಬೆಂಗಳೂರು: ‘ಐಪಿಎಲ್ 2024ರ ಆರ್‌ಸಿಬಿ ಮತ್ತು ಸಿಎಸ್ಕೆ ನಡುವೆ ತಂಡಗಳ ಮಧ್ಯೆ ಭಾರೀ ಪೈಪೋಟಿ ನಡೆಯುತ್ತಿದೆ. ಈ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸುತ್ತಿದೆ. ಪ್ಲೇಆಫ್ ದೃಷ್ಟಿಯಿಂದ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಪಂದ್ಯದಲ್ಲಿ ಚೆನ್ನೈ ಗೆದ್ದರೆ ನೇರವಾಗಿ ಪ್ಲೇ ಆಫ್‌ಗೆ ಲಗ್ಗೆ ಇಡಲಿದೆ. ಮತ್ತೊಂದೆಡೆ, ಆರ್‌ಸಿಬಿಗೆ ಕೇವಲ ಪಂದ್ಯವನ್ನು ಗೆಲ್ಲುವುದು ಮುಖ್ಯವಲ್ಲ. ಆದಾಗ್ಯೂ, ಆರ್‌ಸಿಬಿ ಪ್ಲೇ ಆಫ್‌ಗೆ ಪ್ರವೇಶಿಸಬೇಕಾದರೆ ಅತ್ಯುತ್ತಮ ನೆಟ್ ರನ್ರೇಟ್ನಲ್ಲಿ ಪಂದ್ಯವನ್ನು ಗೆಲ್ಲಬೇಕಾಗಿದೆ.
2024ರ ಲೋಕಸಭೆ ಚುನಾವಣೆ ಬಳಿಕ ಪ್ರಚಾರದ ಒತ್ತಡದಿಂದ ರಿಲ್ಯಾಕ್ಸ್ ಮೂಡ್ಗೆ ಜಾರಿದ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಮುರುಗೇಶ್ ನಿರಾಣಿ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಆರ್‌ಸಿಬಿ- ಸಿಎಸ್ಕೆ ನಡುವಿನ ರೋಚಕ ಪಂದ್ಯ ವೀಕ್ಷಿಸಲು ಕ್ರೀಡಾಂಗಣದಲ್ಲಿ ಹಾಜರಿದ್ದರು.
ಪಂದ್ಯ ವೀಕ್ಷಿಸಲು ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್ ಅವರು ಆರ್‌ಸಿಬಿ ಜರ್ಸಿ ತೊಟ್ಟು ಚಿನ್ನಸ್ವಾಮಿ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ನಟ ಶಿವರಾಜ್ ಕುಮಾರ್ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಆರ್‌ಸಿಬಿ ಅಭಿಮಾನಿಗಳು ಮುಗಿಬಿದಿದ್ದಾರೆ. ಕಟ್ಟಾ ಕ್ರಿಕೆಟ್ ಅಭಿಮಾನಿಯಾಗಿರುವ ಸಿದ್ದರಾಮಯ್ಯ ಅವರು ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ನೋಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
12ನೇ ಓವರ್ನ ಮೊದಲ ಎಸೆತದಲ್ಲಿ ಸಿಂಗಲ್ ಕದಿಯುವ ಮೂಲಕ ಆರ್‌ಸಿಬಿ ನಾಯಕ ಫಾಫ್ ತಮ್ಮ ಅರ್ಧಶತಕ ಪೂರೈಸಿದರು. ಇದರೊಂದಿಗೆ ಆರ್ಸಿಬಿಯ ಶತಕ ಕೂಡ ಪೂರ್ಣಗೊಂಡಿತು.