ಲಖನೌ: ಏಕದಿನ ವಿಶ್ವಕಪ್ನಲ್ಲಿ ಈಗಾಗಲೆ ದಿಟ್ಟ ಬ್ಯಾಟಿಂಗ್-ಬೌಲಿಂಗ್ ನಿರ್ವಹಣೆಗಳಿಂದ ಮಿಂಚಿರುವ ಅಫ್ಘಾನಿಸ್ತಾನ ತಂಡ ನೆದರ್ಲೆಂಡ್ ಎದುರಿನ ಪಂದ್ಯದಲ್ಲಿ ಚುರುಕಿನ ಫೀಲ್ಡಿಂಗ್ನಿಂದಲೂ ಗಮನಸೆಳೆದು ಗೆಲುವು ಒಲಿಸಿಕೊಂಡಿತು. ನೆದರ್ಲೆಂಡ್ ತಂಡದ ನಾಲ್ವರು ಬ್ಯಾಟರ್ಗಳನ್ನು ರನೌಟ್ ಬಲೆಗೆ ಬೀಳಿಸಿ ಕಡಿವಾಣ ಹಾಕಿದ ಆಫ್ಘನ್ ತಂಡ 7 ವಿಕೆಟ್ಗಳಿಂದ ಗೆಲುವು ಒಲಿಸಿಕೊಂಡಿತು. ಟೂರ್ನಿಯಲ್ಲಿ ಕಂಡ 4ನೇ ಜಯದೊಂದಿಗೆ ಹಶ್ಮತ್ ಉಲ್ಲಾ ಶಾಹಿದಿ ಬಳಗ ಸೆಮೀಸ್ ಆಸೆ ವೃದ್ಧಿಸಿಕೊಂಡಿದ್ದಲ್ಲದೆ, 2025ರ ಚಾಂಪಿಯನ್ಸ್ ಟ್ರೋಫಿಗೂ ಅರ್ಹತೆ ಖಚಿತಪಡಿಸಿಕೊಂಡಿತು.
ಏಕನಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ನೆದರ್ಲೆಂಡ್, 46.3 ಓವರ್ಗಳಲ್ಲಿ 179 ರನ್ಗಳಿಗೆ ಸರ್ವಪತನ ಕಂಡಿತು. ನಾಯಕ ಸ್ಕಾಟ್ ಎಡ್ವರ್ಡ್ಸ್ (0) ಎದುರಿಸಿದ ಮೊದಲ ಎಸೆತದಲ್ಲೇ ರನೌಟಾದರು. ಮ್ಯಾಕ್ಸ್ ಒಡೌಡ್ (42), ಕಾಲಿನ್ ಅಕೆರ್ಮನ್ (29), ಸೈಬ್ರಾಂಡ್ ಎಂಗೆಲ್ಬ್ರೆಕ್ಟ್ (58) ರನೌಟ್ ಆದ ಇತರರು. ವಿಕೆಟ್ ಕೀಪರ್ ಇಕ್ರಮ್ ಅಲಿಖಿಲ್ 3 ರನೌಟ್ಗಳಲ್ಲಿ ಬೇಲ್ಸ್ ಉರುಳಿಸಿದ್ದಲ್ಲದೆ, 2 ಕ್ಯಾಚ್ ಮತ್ತು 1 ಸ್ಟಂಪಿಂಗ್ನಲ್ಲೂ ಗಮನಸೆಳೆದರು. ಪ್ರತಿಯಾಗಿ ರಹಮತ್ ಷಾ (52) ಮತ್ತು ನಾಯಕ ಹಶ್ಮತ್ ಉಲ್ಲಾ ಶಾಹಿದಿ (56*) ಅರ್ಧಶತಕಗಳ ಬಲದಿಂದ ಆಫ್ಘನ್ 31.3 ಓವರ್ಗಳಲ್ಲೇ 3 ವಿಕೆಟ್ಗೆ 181 ರನ್ ಸೇರಿಸಿ ಜಯಿಸಿತು. ಈ ಮೂಲಕ ರನ್ರೇಟ್ನಲ್ಲೂ ಸುಧಾರಣೆ ಕಂಡಿತು. ಅಂಕಪಟ್ಟಿಯಲ್ಲಿ ಈಗ 5ನೇ ಸ್ಥಾನಕ್ಕೇರಿರುವ ಆಫ್ಘನ್, ಉಳಿದ 2 ಪಂದ್ಯ ಸೋತರೂ, ಅಗ್ರ 8ರೊಳಗೆ ಸ್ಥಾನ ಪಡೆಯಲಿದೆ. ಇದರಿಂದ ಚಾಂಪಿಯನ್ಸ್ ಟ್ರೋಫಿ ಅರ್ಹತೆಯ ಮಾನದಂಡ ತಲುಪಿದೆ.
ನೆದರ್ಲೆಂಡ್: 46.3 ಓವರ್ಗಳಲ್ಲಿ 179 (ಒಡೌಡ್ 42, ಅಕೆರ್ಮನ್ 29, ಎಂಗಲ್ಬ್ರೆಕ್ಟ್ 58, ಮರ್ವ್ 11, ಎಡ್ವರ್ಡ್ಸ್ 0, ಲೀಡೆ 3, ನಬಿ 28ಕ್ಕೆ 3, ನೂರ್ 31ಕ್ಕೆ 2, ಮುಜೀಬ್ 40ಕ್ಕೆ 1). ಅಫ್ಘಾನಿಸ್ತಾನ: 31.3 ಓವರ್ಗಳಲ್ಲಿ 181 (ಗುರ್ಬಜ್ 10, ಜದ್ರಾನ್ 20, ರಹಮತ್ 52, ಹಶ್ಮತ್ ಉಲ್ಲಾ 56*, ಒಮರ್ಜಾಯಿ 31*, ಬೀಕ್ 30ಕ್ಕೆ 1). ಪಂದ್ಯಶ್ರೇಷ್ಠ: ಮೊಹಮದ್ ನಬಿ.
ಹೆಚ್ಚಿನ ಆಫ್ಘನ್ ಸೆಮೀಸ್ ಆಸೆ
ಇದುವರೆಗೆ ಆಡಿದ 7 ಪಂದ್ಯಗಳಲ್ಲಿ 4ರಲ್ಲಿ ಗೆಲುವು ದಾಖಲಿಸುವುದರೊಂದಿಗೆ ಅಫ್ಘಾನಿಸ್ತಾನಕ್ಕೆ ಅಚ್ಚರಿಯ ರೀತಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಆಸೆಯೂ ಹೆಚ್ಚಿದೆ. ಆಫ್ಘನ್ ಇನ್ನುಳಿದ 2 ಪಂದ್ಯಗಳಲ್ಲಿ ಆಸ್ಟ್ರೆಲಿಯಾ (ನ.7) ಮತ್ತು ದಕ್ಷಿಣ ಆಫ್ರಿಕಾವನ್ನು (ನ.10) ಎದುರಿಸಲಿದೆ. ಇದೆರಡರಲ್ಲೂ ಅಥವಾ ಒಂದರಲ್ಲಿ ಗೆದ್ದರೂ ಆಫ್ಘನ್, ರನ್ರೇಟ್ ಲೆಕ್ಕಾಚಾರದಲ್ಲಿ ಸೆಮೀಸ್ಗೇರುವ ಅವಕಾಶವಿದೆ. ಈ ನಿಟ್ಟಿನಲ್ಲಿ ಕಿವೀಸ್, ಪಾಕ್ ಪಂದ್ಯಗಳ ಫಲಿತಾಂಶವೂ ನಿರ್ಣಾಯಕವೆನಿಸಲಿದೆ.