ಕ್ರೀಡೆ

ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ಈಗ ಸಾವಿರ ಸಿಕ್ಸರ್ ಸರದಾರ!

ಅಬುಧಾಬಿ: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಸಾವಿರ ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಈಗ ಕ್ರಿಸ್ ಗೇಲ್ ಅವರದಾಗಿದೆ.

ಈಗಾಗಲೆ ‘ಯುನಿವರ್ಸ್ ಬಾಸ್’ ಎಂಬ ಅನ್ವರ್ಥನಾಮದೊಂದಿಗೆ 41ನೇ ವಯಸ್ಸಿನಲ್ಲೂ ಟಿ20 ಕ್ರಿಕೆಟ್‌ನಲ್ಲಿ ವಿಜೃಂಭಿಸುತ್ತಿರುವ ಕ್ರಿಸ್ ಗೇಲ್, ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ 7ನೇ ಸಿಕ್ಸರ್ ಸಿಡಿಸುವ ಮೂಲಕ ಈ ಸಾಧನೆ ಮಾಡಿದರು. ಇನಿಂಗ್ಸ್​ನಲ್ಲಿ ಒಟ್ಟು 8 ಸಿಕ್ಸರ್​ ಸಿಡಿಸಿದ ಅವರೀಗ ಒಟ್ಟಾರೆ 1001 ಸಿಕ್ಸರ್​ಗಳ ಸರದಾರರಾಗಿದ್ದಾರೆ.

ಒಟ್ಟಾರೆ 410ನೇ ಟಿ20 ಪಂದ್ಯದಲ್ಲಿ ಗೇಲ್ ಈ ಸಾಧನೆ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 22 ಶತಕ ಮತ್ತು 85 ಅರ್ಧಶತಕಗಳ ಸಹಿತ 13 ಸಾವಿರಕ್ಕೂ ಅಧಿಕ ರನ್ ಬಾರಿಸಿದ ಸಾಧನೆ ಅವರದಾಗಿದೆ. ಟಿ20 ಕ್ರಿಕೆಟ್‌ನಲ್ಲಿ ಸಾವಿರಕ್ಕೂ ಅಧಿಕ ಬೌಂಡರಿಗಳನ್ನೂ ಸಿಡಿಸಿದ ಹೆಗ್ಗಳಿಕೆ ಅವರದಾಗಿದೆ. ಟಿ20 ಕ್ರಿಕೆಟ್‌ನಲ್ಲಿ 690 ಸಿಕ್ಸರ್ ಸಿಡಿಸಿರುವ ಕೈರಾನ್ ಪೊಲ್ಲಾರ್ಡ್ ಅನಂತರದ ಸ್ಥಾನದಲ್ಲಿದ್ದಾರೆ. ಗೇಲ್ ಅವರ ಸಾವಿರ ಸಿಕ್ಸರ್‌ಗಳ ಪೈಕಿ 105 ಸಿಕ್ಸರ್‌ಗಳು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಬಂದಿವೆ. ಐಪಿಎಲ್‌ನಲ್ಲೂ ಅವರು ಸರ್ವಾಧಿಕ 345 ಸಿಕ್ಸರ್ ಸಿಡಿಸಿದ್ದಾರೆ. ಉಳಿದೆಲ್ಲ ಸಿಕ್ಸರ್‌ಗಳನ್ನು ವಿಶ್ವದ ವಿವಿಧ ಟಿ20 ಲೀಗ್‌ಗಳಲ್ಲಿ ಅವರು ಸ್ಫೋಟಿಸಿದ್ದಾರೆ. ಇದಲ್ಲದೆ, ಗೇಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 98 ಮತ್ತು ಏಕದಿನ ಕ್ರಿಕೆಟ್‌ನಲ್ಲಿ 331 ಸಿಕ್ಸರ್ ಸಿಡಿಸಿದ್ದಾರೆ.