ಕ್ರೀಡೆ

ಆಗಸ್ಟ್ 16ಕ್ಕೆ ಜಾವೆಲಿನ್​ ಎಸೆತದಲ್ಲಿ ಭಾರತ-ಪಾಕ್​ ಕಾದಾಟ; ನೀರಜ್​ ಚೋಪ್ರಾ-ಅರ್ಷದ್​ ನದೀಂ ಮುಖಾಮುಖಿಗೆ ಸಜ್ಜು

ಸಿಲೇಸಿಯಾ (ಪೋಲೆಂಡ್​): ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನದ ಜಾವೆಲಿನ್​ ಥ್ರೋ ತಾರೆಯರಾದ ಅವಳಿ ಒಲಿಂಪಿಕ್ಸ್​ ಪದಕ ವಿಜೇತ ನೀರಜ್​ ಚೋಪ್ರಾ ಮತ್ತು ಹಾಲಿ ಒಲಿಂಪಿಕ್ಸ್​ ಚಾಂಪಿಯನ್​ ಅರ್ಷದ್​ ನದೀಂ ಪ್ಯಾರಿಸ್​ ಒಲಿಂಪಿಕ್ಸ್​ ಬಳಿಕ ಮೊದಲ ಬಾರಿ ಮುಖಾಮುಖಿಗೆ ಸಜ್ಜಾಗಿದ್ದಾರೆ. ಆಗಸ್ಟ್​ 16ರಂದು ಪೋಲೆಂಡ್​ನ ಸಿಲೇಸಿಯಾದಲ್ಲಿ ನಡೆಯಲಿರುವ ಡೈಮಂಡ್​ ಲೀಗ್​ನಲ್ಲಿ ಇವರಿಬ್ಬರೂ ಕಣಕ್ಕಿಳಿಯಲಿದ್ದಾರೆ.

ಸರಿಸುಮಾರು ಒಂದು ವರ್ಷದ ಬಳಿಕ ನೀರಜ್​-ನದೀಂ ಮುಖಾಮುಖಿ ಆಗಲಿದ್ದಾರೆ. ಕಳೆದ ವರ್ಷ ಆಗಸ್ಟ್​ 8ರಂದು ಇಬ್ಬರೂ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸ್ಪಧಿರ್ಸಿದಾಗ ನೀರಜ್​ ರಜತ ಪದಕಕ್ಕೆ ತೃಪ್ತಿಪಟ್ಟಿದ್ದರೆ, ಅರ್ಷದ್​ ನದೀಂ ಒಲಿಂಪಿಕ್ಸ್​ ದಾಖಲೆಯ 92.97 ಮೀ. ಎಸೆತದೊಂದಿಗೆ ಸ್ವರ್ಣ ಪದಕ ಗೆದ್ದಿದ್ದರು. ಅದಕ್ಕೆ ಮುನ್ನ 2021ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ನೀರಜ್​ ಚಿನ್ನ ಗೆದ್ದಿದ್ದರೆ, ನದೀಂ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

ಸಿಲೇಸಿಯಾ ಡೈಮಂಡ್​ ಲೀಗ್​ ಬಳಿಕ ನೀರಜ್​-ನದೀಂ, ಸೆಪ್ಟೆಂಬರ್​ನಲ್ಲಿ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ ಮತ್ತೊಮ್ಮೆ ಮುಖಾಮುಖಿ ಆಗಲಿದ್ದಾರೆ. ಅದರಲ್ಲಿ ನೀರಜ್​ ಹಾಲಿ ಚಾಂಪಿಯನ್​ ಆಗಿ ಕಣಕ್ಕಿಳಿಯಲಿದ್ದಾರೆ.

ಇತ್ತೀಚೆಗೆ 90 ಮೀ. ಗಡಿಯನ್ನೂ ದಾಟಿರುವ 27 ವರ್ಷದ ನೀರಜ್​ ಪ್ರಸಕ್ತ ಭರ್ಜರಿ ಫಾರ್ಮ್​ನಲ್ಲಿದ್ದರೆ, ಪ್ಯಾರಿಸ್​ ಒಲಿಂಪಿಕ್ಸ್​ ಬಳಿಕ ಹೆಚ್ಚಿನ ಕೂಟಗಳಲ್ಲಿ ಸ್ಪಧಿರ್ಸದ 28 ವರ್ಷದ ನದೀಂ ಫಾರ್ಮ್​ ನಿಗೂಢವಾಗಿದೆ. ಹೀಗಾಗಿ ಪೋಲೆಂಡ್​ ಕೂಟದ ಫಲಿತಾಂಶ ಕುತೂಹಲ ಕೆರಳಿಸಿದೆ. ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಚಿನ್ನ ಕಸಿದಿದ್ದ ನದೀಂ ವಿರುದ್ಧ ಸೇಡು ತೀರಿಸಿಕೊಳ್ಳಲು ನೀರಜ್​ಗೆ ಇದು ಉತ್ತಮ ಅವಕಾಶವೂ ಆಗಿದೆ.

ಕೊನೆಯದಾಗಿ ಜುಲೈ 5ರಂದು ಬೆಂಗಳೂರಿನ ನೀರಜ್​ ಚೋಪ್ರಾ ಕ್ಲಾಸಿಕ್​ನಲ್ಲಿ ಸ್ಪಧಿರ್ಸಿದ್ದ ಭಾರತದ ಚಿನ್ನದ ಹುಡುಗ ಪ್ರಸಕ್ತ ಜರ್ಮನಿಯ ದಿಗ್ಗಜ ಜಾನ್​ ಜೆಲೆಜ್ನಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ನದೀಂ ಹಾಲಿ ವರ್ಷ ಒಂದೇ ಕೂಟದಲ್ಲಿ ಸ್ಪಧಿರ್ಸಿದ್ದು, ಅದು ಏಷ್ಯನ್​ ಚಾಂಪಿಯನ್​ಷಿಪ್​ ಆಗಿದೆ. ಇದರಲ್ಲಿ ನದೀಂ ಗರಿಷ್ಠ 86.40 ಮೀ. ಎಸೆದಿದ್ದರು.