ಕ್ರೀಡೆ

ಪ್ಯಾರಿಸ್​ ಒಲಿಂಪಿಕ್ಸ್ ನಿರಾಸೆಯ ಬಳಿಕ ಮೊದಲ ಬಾರಿ ಕಣಕ್ಕಿಳಿಯಲು ಸಜ್ಜಾದ ಚಿರಾಗ್​-ಸಾತ್ವಿಕ್​!

ಶೆಂಜೆನ್​ (ಚೀನಾ): ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಪದಕ ಕೈತಪ್ಪಿದ ನಿರಾಸೆಯ ಬಳಿಕ ಬ್ಯಾಡ್ಮಿಂಟನ್​ ಕೋರ್ಟ್​ನಿಂದ ದೂರವೇ ಉಳಿದಿದ್ದ ಚಿರಾಗ್​ ಶೆಟ್ಟಿ ಮತ್ತು ಸಾತ್ವಿಕ್​ ಸಾಯಿರಾಜ್​ ಜೋಡಿ ಮಂಗಳವಾರದಿಂದ ನಡೆಯಲಿರುವ ಚೀನಾ ಮಾಸ್ಟರ್ಸ್​ ಸೂಪರ್​-750 ಟೂರ್ನಿಯಲ್ಲಿ ಕೊನೆಗೂ ಮರಳಿ ಕಣಕ್ಕಿಳಿಯಲು ಸಜ್ಜಾಗಿದೆ.

ಮಾಜಿ ವಿಶ್ವ ನಂ. 1 ಜೋಡಿ ಸುಮಾರು 4 ತಿಂಗಳ ಬಳಿಕ ಸ್ಪರ್ಧೆಗೆ ಮರಳುತ್ತಿದೆ. ಸಾತ್ವಿಕ್​ ಅವರ ಭುಜ ನೋವಿನ ಸಮಸ್ಯೆಯೂ ಅವರ ಪುನರಾಗಮನ ವಿಳಂಬಕ್ಕೆ ಪ್ರಮುಖ ಕಾರಣವಾಗಿತ್ತು. ಇದೀಗ ಸಾತ್ವಿಕ್​ ಫಿಟ್​ ಆಗಿದ್ದು, ಏಷ್ಯನ್​ ಗೇಮ್ಸ್​ ಸ್ವರ್ಣ ಪದಕ ವಿಜೇತ ಜೋಡಿ ಕೋಚ್​ ಇಲ್ಲದೆ ಮರಳಿ ಕಣಕ್ಕಿಳಿಯಲಿದೆ. ಅವರ ಹಿಂದಿನ ಕೋಚ್​ ಮಥಾಯಿಸ್​ ಬೋಯಿ ಒಲಿಂಪಿಕ್ಸ್​ ನಿರಾಸೆಯ ಬಳಿಕ ಆಗಸ್ಟ್​ನಲ್ಲೇ ಪದತ್ಯಾಗ ಮಾಡಿದ್ದರು. ಕಳೆದ ವರ್ಷ ಟೂರ್ನಿಯಲ್ಲಿ ರನ್ನರ್​ಅಪ್​ ಆಗಿದ್ದ ಸಾತ್ವಿಕ್​-ಚಿರಾಗ್​, ಈ ಬಾರಿ ಚೀನಾ ತೈಪೆಯ ಯಂಗ್​ ಪೊ&ಲೀ ಜೆ ಹುಯಿ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.

ಸಿಂಗಲ್ಸ್​ನಲ್ಲಿ ಪಿವಿ ಸಿಂಧು ಮತ್ತು ಲಕ್ಷ್ಯ ಸೇನ್​ ಕಣಕ್ಕಿಳಿಯುತ್ತಿರುವ ಪ್ರಮುಖ ಭಾರತೀಯರಾಗಿದ್ದು, ಇತ್ತೀಚೆಗಿನ ನಿರಾಸೆಯನ್ನು ಬದಿಗೊತ್ತಿ ಶ್ರೀ ಗೆಲುವಿನ ಲಯಕ್ಕೆ ಮರಳುವ ಹಂಬಲದಲ್ಲಿದ್ದಾರೆ.

23 ವರ್ಷದ ಲಕ್ಷ್ಯ ಸೇನ್​ 7ನೇ ಶ್ರೇಯಾಂಕಿತ ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಸಿಂಧು ಥಾಯ್ಲೆಂಡ್​ನ ಸುಪನಿದ ಕೇಟ್​ತೊಂಗ್​ ವಿರುದ್ಧ ಮೊದಲ ಪಂದ್ಯ ಆಡಲಿದ್ದಾರೆ. ಆಕರ್ಷಿ ಕಶ್ಯಪ್​ ಮತ್ತು ಮಾಳವಿಕಾ ಬಾನ್ಸೋಡ್​ ಮಹಿಳಾ ಸಿಂಗಲ್ಸ್​ ಕಣದಲ್ಲಿರುವ ಮತ್ತಿಬ್ಬರು ಭಾರತೀಯರಾಗಿದ್ದಾರೆ. ಮಹಿಳಾ ಡಬಲ್ಸ್​ನಲ್ಲಿ ತ್ರಿಸಾ ಜೋಲಿ&ಗಾಯತ್ರಿ ಗೋಪಿಚಂದ್​ ಜೋಡಿ ಮತ್ತು ಮಿಶ್ರ ಡಬಲ್ಸ್​ನಲ್ಲಿ ಸಿಕ್ಕಿರೆಡ್ಡಿ-ಸುಮೀತ್​ ರೆಡ್ಡಿ ದಂಪತಿ ಕಣಕ್ಕಿಳಿಯಲಿದೆ.