ಕ್ರೀಡೆ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತಕ್ಕೆ 11 ಸಾವು: ಆರ್​ಸಿಬಿ ವಿರುದ್ಧ ಆಕ್ರೋಶ, 20 ಕೋಟಿ ರೂ.ಗೆ ಆಗ್ರಹ! RCB

RCB : ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ಐಪಿಎಲ್ ಟ್ರೋಫಿ​ ವಿಜಯೋತ್ಸವ ದುರಂತದಲ್ಲಿ ಕೊನೆಗೊಂಡಿತು. 18 ವರ್ಷದ ಬಳಿಕ ಟ್ರೋಫಿ ಗೆದ್ದ ಖುಷಿ, ಕೇವಲ ಒಂದೇ ದಿನದಲ್ಲಿ ಮಾಯವಾಯಿತು. ಸಂಭ್ರಮದ ಮನೆಯಂತಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೂತಕದ ಛಾಯೆ ಆವರಿಸಿತು.

ಮಂಗಳವಾರ (ಜೂನ್​ 03) ಫೈನಲ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡವನ್ನು ಮಣಿಸಿ, ಬುಧವಾರ (ಜೂನ್​ 04) ಅಹಮದಾಬಾದ್‌ನಿಂದ ತಮ್ಮ ತವರು ಮೈದಾನಕ್ಕೆ ಆರ್​ಸಿಬಿ ತಂಡ ಹಿಂತಿರುಗಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಯಲಿದೆ ಎಂಬ ಸುದ್ದಿ ಕೇಳಿ ಲಕ್ಷಾಂತರ ಅಭಿಮಾನಿಗಳು ಸ್ಟೇಡಿಯಂಗೆ ಜಮಾಯಿಸಿದರು. ಇತ್ತ ಸರ್ಕಾರದಿಂದ ವಿಧಾನಸೌಧದ ಮೆಟ್ಟಿಲುಗಳಲ್ಲಿ ಆರ್​ಸಿಬಿ ತಂಡ ಸನ್ಮಾನ ಸ್ವೀಕರಿಸಿದರೆ, ಅತ್ತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಘೋರ ದುರಂತ ಸಂಭವಿಸಿತು.

ಒಂದೇ ಕಡೆ ಲಕ್ಷಾಂತರ ಮಂದಿ ಜಮಾಯಿಸಿದ್ದರು. ಅಲ್ಲದೆ, ಯಾವುದೇ ಪೂರ್ವ ಸಿದ್ಧತೆ ಇರಲಿಲ್ಲ. ಸ್ಥಳದಲ್ಲಿ ಮೆಡಿಕಲ್​ ವ್ಯವಸ್ಥೆಯು ಇರಲಿಲ್ಲ. ಸುಮಾರು 2 ಲಕ್ಷ ಅಭಿಮಾನಿಗಳು ಜಮಾಯಿಸಿದ್ದರು ಎನ್ನಲಾಗಿದೆ. ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಲ್ಲದೆ, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಐಪಿಎಲ್​ ಇತಿಹಾಸದಲ್ಲೇ ಇದೊಂದು ಕರಾಳ ಘಟನೆಯಾಗಿದೆ. ಐಪಿಎಲ್​ಗೆ ಇದೊಂದು ಕಪ್ಪು ಚುಕ್ಕಿ ಎಂದರೆ ತಪ್ಪಾಗಲಾರದು. ಈ ಘಟನೆಯ ಬಗ್ಗೆ ಕೇಳಿ ಸಚಿನ್​, ಅನೀಲ್​ ಕುಂಬ್ಳೆ ಸೇರಿದಂತೆ ಅನೇಕ ದಿಗ್ಗಜರು ಕೂಡ ದುಃಖ ವ್ಯಕ್ತಪಡಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಹ ಸಂತಾಪ ವ್ಯಕ್ತಪಡಿಸಿದೆ. ಅಲ್ಲದೆ, ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಸಹ ಘೋಷಿಸಿದೆ. ಅದೇ ರೀತಿ, ಸಿಎಂ ಸಿದ್ದರಾಮಯ್ಯ, ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಇನ್ನು ಕಾಲ್ತುಳಿತ ಘಟನೆಗೆ ಆರ್‌ಸಿಬಿ ಆಡಳಿತ ಮಂಡಳಿ ಕೂಡ ವಿಷಾದ ವ್ಯಕ್ತಪಡಿಸಿದೆ. ಆದರೆ, ಯಾವುದೇ ಪರಿಹಾರ ಘೋಷಿಸಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆರ್‌ಸಿಬಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಆರ್ಥಿಕ ಪರಿಹಾರ ನೀಡುವ ಮೂಲಕ ಕಷ್ಪಕಾಲದಲ್ಲಿ ಬೆಂಬಲವಾಗಿ ನಿಲ್ಲುವಂತೆ ಒತ್ತಾಯಿಸಿದ್ದಾರೆ.

2025ರ ಐಪಿಎಲ್ ಪ್ರಶಸ್ತಿ ಗೆದ್ದ ಆರ್‌ಸಿಬಿಗೆ ಬಿಸಿಸಿಐ 20 ಕೋಟಿ ರೂ. ಬಹುಮಾನದ ಹಣವನ್ನು ನೀಡಿರುವುದು ತಿಳಿದುಬಂದಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಸಂತ್ರಸ್ತರ ಕುಟುಂಬಗಳಿಗೆ ಸಂಪೂರ್ಣ ಬಹುಮಾನದ ಹಣವನ್ನು ನೀಡಬೇಕೆಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಕಳೆದುಹೋದ ಜೀವಗಳನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ, ಕನಿಷ್ಠ ಆರ್ಥಿಕ ಸಹಾಯವನ್ನಾದರೂ ನೀಡಿ ಎನ್ನುತ್ತಿದ್ದಾರೆ.

ಅನೇಕರ ಆಗ್ರಹದಂತೆ ಆರ್‌ಸಿಬಿ ಆಡಳಿತ ಮಂಡಳಿ ಮೃತರ ಕುಟುಂಬಗಳಿಗೆ ಬೆಂಬಲ ನೀಡುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಈ ಘಟನೆಗೆ ಮಾಜಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಕೂಡ ಪ್ರತಿಕ್ರಿಯಿಸಿ, ವಿಷಾದ ವ್ಯಕ್ತಪಡಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ದುರಂತ ಕಾಲ್ತುಳಿತಕ್ಕೆ ಭಾರತದ ದಂತಕಥೆ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಕೂಡ ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದದ್ದು ಅತ್ಯಂತ ದುರಂತ. ಬಾಧಿತ ಪ್ರತಿಯೊಂದು ಕುಟುಂಬಕ್ಕೂ ನನ್ನ ಹೃದಯ ಮಿಡಿಯುತ್ತದೆ. ಎಲ್ಲರಿಗೂ ಶಾಂತಿ ಮತ್ತು ಶಕ್ತಿಯನ್ನು ಹಾರೈಸುತ್ತೇನೆ ಎಂದು ಎಕ್ಸ್​ನಲ್ಲಿ ಬರೆದಿದ್ದಾರೆ.

ಭಾರತದ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ, ಕಾಲ್ತುಳಿತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಇದು ಕ್ರಿಕೆಟ್‌ಗೆ ದುಃಖದ ದಿನ! ಇಂದು ಆರ್‌ಸಿಬಿ ವಿಜಯವನ್ನು ಆಚರಿಸುವಾಗ ಜೀವ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಹೃದಯ ಮಿಡಿಯುತ್ತದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ ಎಂದು ಎಕ್ಸ್​ನಲ್ಲಿ ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್​)