ಬಾಮ್‌ಬೊಲಿಮ್ (ಗೋವಾ): ನಾಯಕ ಸುನೀಲ್ ಛೇಟ್ರಿ (56ನೇ ನಿಮಿಷ) ದ್ವಿತೀಯಾರ್ಧದಲ್ಲಿ ಸಿಡಿಸಿದ ಪೆನಾಲ್ಟಿ ಗೋಲಿನ ನೆರವಿನಿಂದ ಬೆಂಗಳೂರು ಎಫ್ಸಿ ತಂಡ 7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಸಾಂಪ್ರದಾಯಿಕ ಎದುರಾಳಿ ಚೆನ್ನೈಯಿನ್ ಎಫ್ಸಿ ವಿರುದ್ಧ ಶುಕ್ರವಾರ ನಡೆದ ತನ್ನ 3ನೇ ಲೀಗ್ ಪಂದ್ಯದಲ್ಲಿ ಬಿಎ್ಸಿ ತಂಡ 1-0 ಗೋಲಿನಿಂದ ಜಯಿಸಿತು.
ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಎಫ್ಸಿ ಗೋವಾ ಮತ್ತು ಹೈದರಾಬಾದ್ ಎಫ್ಸಿ ವಿರುದ್ಧ ಡ್ರಾಕ್ಕೆ ತೃಪ್ತಿಪಟ್ಟಿದ್ದ ಬಿಎಫ್ಸಿ, ಜಿಎಂಸಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ಗೋಲು ರಹಿತ ಸಮಬಲ ಕಂಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ಸುನೀಲ್ ಛೇಟ್ರಿ ಬಾರಿಸಿದ ಗೋಲು ಪಂದ್ಯದ ಫಲಿತಾಂಶ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು. ಚೆನ್ನೈಯಿನ್ ತಂಡಕ್ಕೆ ಇದು ಹಾಲಿ ಋತುವಿನ ಮೊದಲ ಸೋಲಾಗಿದೆ.
ಕೋಚ್ ಕಾರ್ಲ್ಸ್ ಕ್ಯುವಾಡ್ರಟ್ 3 ಬದಲಾವಣೆಯೊಂದಿಗೆ ಬೆಂಗಳೂರು ಎಫ್ಸಿ ತಂಡವನ್ನು ಕಣಕ್ಕಿಳಿಸಿದರು. ಕ್ರಿಸ್ಟಿಯನ್ ಓಪ್‌ಸೆತ್, ಉದಾಂತ ಸಿಂಗ್ ಮತ್ತು ಫ್ರಾಂಕ್ ಗೊಂಜಲೆಜ್ ಬದಲಿಗೆ ಡೆಶೋರ್ನ್ ಬ್ರೌನ್, ಡಿಮಾಸ್ ಡೆಲ್‌ಗೆಡೊ ಮತ್ತು ರಾಹುಲ್ ಭೇಕೆ ಕಣಕ್ಕಿಳಿದರು.
ದೈಹಿಕ ಸಂಘರ್ಷದೊಂದಿಗೆ ಪಂದ್ಯ ಶುರುವಾಯಿತು. ಅನಿರುದ್ಧ ಥಾಪಾ ಅವರಿಗೆ ಢಿಕ್ಕಿ ಹೊಡೆದ ಆಶಿಕ್ ಕುರುನಿಯನ್ ಬಳಿಕ, ದೀಪಕ್ ತಂಗ್ರಿ ಜತಗೂ ಆಕ್ರಮಣಕಾರಿ ಟ್ಯಾಕಲ್ ಮಾಡಿ ಹಳದಿ ಕಾರ್ಡ್ ಪಡೆದರು. ಬಳಿಕ ಅನಿರುದ್ದ ಥಾಪಾ ಗಾಯದ ಸಮಸ್ಯೆ ಎದುರಿಸಿದ್ದರಿಂದ ಚೆನ್ನೈಯಿನ್ ಕೋಚ್ ಸಾಬಾ ಲಾಜ್ಲೋ, ಬದಲಿ ಆಟಗಾರರಾಗಿ ಎಸ್ವಿನ್ ವನ್ಸ್‌ಪೌಲ್ ಅವರನ್ನು ಕಣಕ್ಕಿಳಿಸಬೇಕಾಯಿತು.
ಥಾಪಾ ಮೈದಾನದಿಂದ ಹೊರನಡೆದ ಬಳಿಕ ಬಿಎಫ್ಸಿ ಪಂದ್ಯದಲ್ಲಿ ಮೇಲುಗೈ ಸಾಧಿಸಲಾರಂಭಿಸಿತು. ಅರ್ಧಗಂಟೆಯ ಬಳಿಕ ಬಿಎಫ್ಸಿಗೆ ಮೊದಲ ಗೋಲು ದಾಖಲಿಸುವ ಅವಕಾಶವೂ ಒಲಿದು ಬಂದಿತ್ತು. ಆದರೆ ರಾಹುಲ್ ಭೇಕೆ ಅದನ್ನು ಕೈಚೆಲ್ಲಿದರು.
ದ್ವಿತೀಯಾರ್ಧದ ಆಟವೂ ಫೌಲ್, ಫ್ರೀ ಕಿಕ್ ಮತ್ತು ಹಳದಿ ಕಾರ್ಡ್‌ನಿಂದಲೇ ಆರಂಭಗೊಂಡಿತು. ರಾಫೆಲ್ ಕ್ರಿವೆಲ್ಲಾರೊ, ಸುರೇಶ್ ವಂಗ್‌ಜಮ್, ರೀಗನ್ ಸಿಂಗ್ ಹಳದಿ ಕಾರ್ಡ್ ಪಡೆದರು. ಇದೇ ವೇಳೆ ಉಭಯ ತಂಡಗಳು ಫ್ರೀ ಕಿಕ್ ಅವಕಾಶಗಳನ್ನೂ ವ್ಯರ್ಥಗೊಳಿಸಿದವು.
54ನೇ ನಿಮಿಷದಲ್ಲಿ ಚೆನ್ನೈಯಿನ್ ತಂಡ ಮಾಡಿದ ಒಂದು ಫೌಲ್‌ನಿಂದಾಗಿ ಬಿಎ್ಸಿಗೆ ಅದೃಷ್ಟ ಒಲಿಯಿತು. ಸಿಲ್ವಾರನ್ನು ಬೀಳಿಸಿ ವನ್ಸ್‌ಪೌಲ್ ಮಾಡಿದ ಎಡವಟ್ಟಿನಿಂದ ರೆಫ್ರಿ ಬಿಎ್ಸಿ ಪೆನಾಲ್ಟಿ ಪಡೆಯಿತು. ಚೆನ್ನೈಯಿನ್ ಗೋಲ್ ಕೀಪರ್ ವಿ. ಕೈಥ್ ಸರಿಯಾಗಿಯೇ ಅಂದಾಜಿಸಿ ಡೈವ್ ಹೊಡೆದರೂ, ಛೇಟ್ರಿ ಪರಿಪೂರ್ಣವಾಗಿ ಗೋಲು ಬಾರಿಸುವಲ್ಲಿ ಸಫಲರಾದರು.
60ನೇ ನಿಮಿಷದಲ್ಲಿ ಬಿಎಫ್ಸಿ ತಂಡಕ್ಕೆ ಮತ್ತೊಂದು ಗೋಲು ಬಾರಿಸುವ ಅವಕಾಶ ಸೃಷ್ಟಿಯಾಗಿತ್ತು. ಆದರೆ ಈ ಬಾರಿ ಗೋಲ್‌ಕೀಪರ್ ಕೈಥ್, ಚೆಂಡನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರು. ಪಂದ್ಯದ ಕೊನೆಯ ನಿಮಿಷಗಳಲ್ಲಿ ಚೆನ್ನೈಯಿನ್ ತಂಡ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿ ಸಮಬಲ ಸಾಧಿಸಲು ಪ್ರಯತ್ನಿಸಿತು. ಆದರೆ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸುವಲ್ಲಿ ಯಶಸ್ಸು ಕಾಣಲಿಲ್ಲ.
ಬೆಂಗಳೂರು ಎಫ್ಸಿ ಮುಂದಿನ ಪಂದ್ಯ: ಯಾವಾಗ: ಡಿಸೆಂಬರ್ 8, ಎದುರಾಳಿ: ನಾರ್ತ್‌ಈಸ್ಟ್ ಯುನೈಟೆಡ್ ಎಫ್ಸಿ, ಆರಂಭ: ರಾತ್ರಿ 7.30.