ಕ್ರೀಡೆ

ಬಾರ್ಡರ್-ಗಾವಸ್ಕರ್​ ಟ್ರೋಫಿಗೆ ಹೊಸ ಪಾತ್ರದಲ್ಲಿ ಎಂಟ್ರಿ ಕೊಡಲಿದ್ದಾರೆ ಚೇತೇಶ್ವರ ಪೂಜಾರ!

ನವದೆಹಲಿ: ಕಳೆದ ಎರಡು ಆಸ್ಟ್ರೆಲಿಯಾ ಪ್ರವಾಸದ ಟೆಸ್ಟ್​ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಭಾರತದ ಅನುಭವಿ ಬ್ಯಾಟರ್​ ಚೇತೇಶ್ವರ ಪೂಜಾರ ಈ ಬಾರಿ ಮತ್ತೆ ಬಾರ್ಡರ್​-ಗಾವಸ್ಕರ್​ ಟ್ರೋಫಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ! ಆದರೆ ಈ ಬಾರಿ ಅವರು ಆಟಗಾರರಾಗಿ ಅಲ್ಲ, ಬದಲಾಗಿ ವೀಕ್ಷಕ ವಿವರಣೆಕಾರರಾಗಿ ಬಾರ್ಡರ್-ಗಾವಸ್ಕರ್​ ಟ್ರೋಫಿಯಲ್ಲಿ ಭಾಗವಹಿಸಲಿದ್ದಾರೆ.

ಭಾರತ-ಆಸೀಸ್​ ನಡುವಿನ 5 ಪಂದ್ಯಗಳ ಟೆಸ್ಟ್​ ಸರಣಿಗೆ ಸ್ಟಾರ್​ ಸ್ಪೋರ್ಟ್ಸ್​ ವಾಹಿನಿಯ ಹಿಂದಿ ಕಾಮೆಂಟರಿ ಪ್ಯಾನೆಲ್​ನಲ್ಲಿ ಪೂಜಾರ ಕೂಡ ಸ್ಥಾನ ಪಡೆದಿದ್ದಾರೆ. ಭಾರತ ಪರ 100ಕ್ಕೂ ಅಧಿಕ ಟೆಸ್ಟ್​ ಆಡಿರುವ 36 ವರ್ಷದ ಪೂಜಾರ 19 ಶತಕಗಳ ಸಹಿತ 7 ಸಾವಿರಕ್ಕೂ ಅಧಿಕ ರನ್​ ಗಳಿಸಿದ್ದಾರೆ. ಆದರೆ 2023ರ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್​ ಬಳಿಕ ಅವರು ಭಾರತ ಪರ ಯಾವುದೇ ಪಂದ್ಯ ಆಡಿಲ್ಲ.