Cheteshwar Pujara: ಇತ್ತೀಚೆಗಷ್ಟೇ ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಹೆಸರುವಾಸಿಯಾಗಿರುವ ಚೇತೇಶ್ವರ್ ಪೂಜಾರ, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರು. ಪೂಜಾರ ನಿವೃತ್ತಿ ಘೋಷಿಸುತ್ತಿದ್ದಂತೆ ಅವರ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಜಾಲತಾಣಗಳಲ್ಲಿ, ನಿಮ್ಮ ಮುಂದಿನ ಹಾದಿ ಶುಭಕರವಾಗಿರಲಿ ಎಂದು ಆಶಿಸಿದರು. 2010ರಿಂದ 2023 ರವರೆಗೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಈ ಸೌರಾಷ್ಟ್ರ ಬ್ಯಾಟ್ಸ್‌ಮನ್, ತಮ್ಮ ವೃತ್ತಿಜೀವನದಲ್ಲಿ ಒಟ್ಟು 103 ಟೆಸ್ಟ್‌ಗಳನ್ನು ಆಡಿರುವುದು ಗಮನಾರ್ಹ.
ಒಟ್ಟು 16217 ಎಸೆತಗಳನ್ನು ಎದುರಿಸಿರುವ ಅವರು, 7195 ರನ್ ದಾಖಲಿಸಿದ್ದಾರೆ. ಇದರಲ್ಲಿ 19 ಶತಕ, ಮೂರು ದ್ವಿಶತಕ ಮತ್ತು 35 ಅರ್ಧಶತಕಗಳು ಸೇರಿವೆ. ತಮ್ಮ ವೃತ್ತಿಜೀವನದಲ್ಲಿ ಕೇವಲ ಐದು ಏಕದಿನ ಪಂದ್ಯಗಳನ್ನು ಆಡಿರುವ ಪೂಜಾರ, ಕೇವಲ 51 ರನ್‌ಗಳನ್ನು ಗಳಿಸಿದ್ದಾರೆ. ಈ ಮಧ್ಯೆ ಟೆಸ್ಟ್ ಕ್ರಿಕೆಟ್ನಲ್ಲಿ ಅದರಲ್ಲೂ ವಿದೇಶಿ ನೆಲದಲ್ಲಿ, ವಿಶೇಷವಾಗಿ ಸೆನಾ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಹಲವು ವಿಚಾರಗಳನ್ನು ಹಂಚಿಕೊಂಡ ಪೂಜಾರ, ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್, ಮೋರ್ನೆ ಮಾರ್ಕೆಲ್ ಅವರ ಬೌಲಿಂಗ್ನಲ್ಲಿ ರನ್ ಗಳಿಸುವುದು ಅಷ್ಟು ಸುಲಭವಿರಲಿಲ್ಲ. ಬಹಳ ಕಷ್ಟಕರವಾಗಿತ್ತು. ಅದೇ ರೀತಿ, ಇಂಗ್ಲೆಂಡ್ನ ಲೆಜೆಂಡ್ರಿ ಬೌಲರ್ ಜೇಮ್ಸ್ ಆ್ಯಂಡರ್ಸನ್ ಮತ್ತು ಆಸ್ಟ್ರೇಲಿಯಾದ ಟೆಸ್ಟ್ ಕ್ಯಾಪ್ಟನ್ ಪ್ಯಾಟ್ ಕಮ್ಮಿನ್ಸ್ ಅವರ ಬೌಲಿಂಗ್ ಎದುರಿಸುವುದು ಸವಾಲಾಗಿತ್ತು ಎಂದು ಹೇಳಿದ್ದಾರೆ,(ಏಜೆನ್ಸೀಸ್).