ಕ್ರೀಡೆ

Injury ಮುಚ್ಚಿಡಲು Injection​ ತೆಗೆದುಕೊಳ್ಳುವ ಆಟಗಾರರು! ರಹಸ್ಯ ಕ್ಯಾಮರಾದಲ್ಲಿ ಸೆರೆಯಾಯ್ತು ಚೇತನ್​ ಶರ್ಮ ಮಾತು

ನವದೆಹಲಿ: ಖಾಸಗಿ ವಾಹಿನಿ ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತೀಯ ಕ್ರಿಕೆಟ್​ ಆಯ್ಕೆ ಸಮಿತಿಯ ಮುಖ್ಯ ಆಯ್ಕೆಗಾರ ಚೇತನ್​ ಶರ್ಮ ಅನೇಕ ಸಂಗತಿಗಳನ್ನು ಹೊರಹಾಕಿದ್ದಾರೆ. ಗಾಯಗಳನ್ನು ಮುಚ್ಚಿಡಲು ಆಟಗಾರರು ಇಂಜೆಕ್ಷನ್​ ತೆಗೆದುಕೊಳ್ಳುವ ಆಘಾತಕಾರಿ ಸಂಗತಿ ಹಾಗೂ ಸೌರವ್​ ಗಂಗೂಲಿ ವರ್ಸಸ್​ ವಿರಾಟ್​ ಕೊಹ್ಲಿ ವಿವಾದದಲ್ಲಿ ನಿಜವಾಗಿ ನಡೆದಿದ್ದೇನು ಎಂಬ ಬಗ್ಗೆ ಚೇತನ್​ ಶರ್ಮ ಮಾತನಾಡಿದ್ದಾರೆ ಎನ್ನಲಾಗಿದೆ.

ವಿರಾಟ್​ ಕೊಹ್ಲಿ ನಾಯಕತ್ವವನ್ನು ತೊರೆದ ಸಂದರ್ಭದಲ್ಲಿ ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ವಿರುದ್ಧ ಸುಳ್ಳು ಹೇಳಿದ ಆರೋಪ ಮಾಡಿದ್ದರು. ಈ ಬಗ್ಗೆಯೂ ಕುಟುಕು ಕಾರ್ಯಾಚರಣೆಯಲ್ಲಿ ಚೇತನ್​ ಶರ್ಮ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. 2021ರಲ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್​ಗೆ ಮುನ್ನವೇ ಕೊಹ್ಲಿ ಟೂರ್ನಿಯ ಬಳಿಕ ಟಿ20 ನಾಯಕತ್ವ ತೊರೆಯುವುದಾಗಿ ಘೋಷಿಸಿದ್ದರು. ಆ ಸಂದರ್ಭದಲ್ಲಿ "ನಾಯಕತ್ವ ತೊರೆಯಬೇಡಿ, ಇನ್ನೊಮ್ಮೆ ಯೋಚಿಸಿ' ಎಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್​ ಗಂಗೂಲಿ ಕೊಹ್ಲಿಗೆ ಸೂಚಿಸಿದ್ದರು ಎಂದು ಚೇತನ್​ ಶರ್ಮ ಬಹಿರಂಗ ಪಡಿಸಿದ್ದಾರೆ.

ಟೀಮ್​ ಇಂಡಿಯಾದ ಏಕದಿನ ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸುವ ನಿರ್ಧಾರವನ್ನು ಮುಖ್ಯ ಆಯ್ಕೆಗಾರನಾಗಿ ನಾನು ತೆಗೆದುಕೊಂಡಿದ್ದೇನೆ. ಟೆಸ್ಟ್​ ಮತ್ತು ಏಕದಿನ ತಂಡಗಳಿಗೆ ಪ್ರತ್ಯೇಕ ನಾಯಕರನ್ನು ನೇಮಿಸಬೇಕು ಎಂಬ ಉದ್ದೇಶವೇ ಕಾರಣ. ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲು ಗಂಗೂಲಿ ಕಾರಣರಲ್ಲ, ಅವರು ಯಾವತ್ತೂ ಅದನ್ನು ಬಯಸಿರಲಿಲ್ಲ ಎಂದು ಚೇತನ್​ ಸ್ಪಷ್ಟಪಡಿಸಿದ್ದಾರೆ.

ಟೀಮ್​ ಇಂಡಿಯಾದ ಅನೇಕ ಆಟಗಾರರು ಗಾಯಗಳನ್ನು ಮುಚ್ಚಿಡಲು ಚುಚ್ಚುಮದ್ದು ತೆಗೆದುಕೊಳ್ಳುತ್ತಾರೆ. ಗಾಯದ ಕಾರಣಕ್ಕೆ ತಂಡದಲ್ಲಿ ಸ್ಥಾನ ತಪ್ಪಿಹೋದರೆ, ಮತ್ತೆ ಮರಳುವುದು ಕಷ್ಟ ಎಂಬ ಕಾರಣಕ್ಕೆ ಆಟಗಾರರು ಪೂರ್ಣ ಫಿಟ್​ನೆಸ್​ ಇಲ್ಲದಿದ್ದರೂ ನೋವು ನಿವಾರಕ ಇಂಜೆಕ್ಷನ್​ಗಳನ್ನು ತೆಗೆದುಕೊಂಡು ತಂಡದಲ್ಲಿ ಆಡುತ್ತಾರೆ ಎಂದು ಚೇತನ್​ ಶರ್ಮ ಹೇಳಿದ್ದಾರೆ.

ಕುಟುಕು ಕಾರ್ಯಾಚರಣೆಯಲ್ಲಿ ಹಲವು ಸ್ಫೋಟಕ ವಿಚಾರಗಳನ್ನು ಬಹಿರಂಗ ಪಡಿಸಿರುವ ಚೇತನ್​ ಶರ್ಮ, ಬಾಂಗ್ಲಾ ದೇಶ ವಿರುದ್ಧ ಇಶಾನ್​ ಕಿಶನ್​ ಬಾರಿಸಿದ ಭರ್ಜರಿ ದ್ವಿಶತಕದ ಕಾರಣದಿಂದ ಏಕದಿನ ತಂಡದಲ್ಲಿ ಶಿಖರ್​ ಧವನ್​ ಮತ್ತು ಸಂಜು ಸ್ಯಾಮ್ಸನ್​ ಸ್ಥಾನ ಕಳೆದುಕೊಂಡಿದ್ದಾರೆ. ಕೆ.ಎಲ್​. ರಾಹುಲ್​ ಮೇಲೆ ಕೂಡ ಒತ್ತಡ ಹೆಚ್ಚಿದೆ. ಇದೇ ಕಾರಣಕ್ಕೆ ಯಾವುದೇ ಆಟಗಾರರು ಫಿಟ್​ನೆಸ್​ ಕಾರಣಕ್ಕೆ ತಂಡದಿಂದ ಹೊರಗುಳಿಯಲು ಬಯಸುವುದಿಲ್ಲ ಎಂದಿದ್ದಾರೆ.

ಆಸ್ಟ್ರೆಲಿಯಾದಲ್ಲಿ ನಡೆದ ಟಿ20 ವಿಶ್ವಕಪ್​ ಸಂದರ್ಭದಲ್ಲಿ ವೇಗಿ ಜಸ್​ಪ್ರೀತ್​ ಬುಮ್ರಾ ಫಿಟ್​ನೆಸ್​ ಹೊಂದಿರಲಿಲ್ಲ. ಆದರೂ, ಒತ್ತಡಕ್ಕೆ ಸಿಲುಕಿ ಅವರನ್ನು ತಂಡಕ್ಕೆ ಆಯ್ಕೆ ಮಾಡಬೇಕಾಯಿತು. ಆದರೆ, ಒಂದು ಪಂದ್ಯ ಆಡಿದ ಬಳಿಕ ಅವರು ಗಾಯ ಉಲ್ಬಣಗೊಂಡು ತಂಡದಿಂದ ಹೊರಬಿದ್ದರು. ವಿಶ್ವಕಪ್​ಗೆ ಬುಮ್ರಾ ಫಿಟ್​ನೆಸ್​ ಹೊಂದಿಲ್ಲದಿದ್ದರೂ ಆಯ್ಕೆ ಮಾಡಬೇಕಾಯಿತು. ಇತ್ತೀಚಿನ ಶ್ರೀಲಂಕಾ ವಿರುದ್ಧದ ಸರಣಿಗೂ ಆರಂಭದಲ್ಲಿ ಬುಮ್ರಾ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ, ಗಾಯ ಪೂರ್ಣ ಗುಣವಾದ ಕಾರಣ ಹೊರಗುಳಿದರು. ಈ ರೀತಿ ಸ್ಟಾರ್​ ಆಟಗಾರರು ಫಿಟ್​ನೆಸ್​ ಹೊಂದಿಲ್ಲದಿದ್ದರೂ ತಂಡದಲ್ಲಿರುತ್ತಾರೆ. ಬಿಸಿಸಿಐ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆಯ್ಕೆಗಾರರಿಗೆ ಈ ಮಾಹಿತಿ ಇದ್ದರೂ ಅವರು ಅಸಹಾಯಕರು ಎಂದು ಚೇತನ್​ ಶರ್ಮ ಹೇಳಿದ್ದಾಗಿ ಖಾಸಗಿ ವಾಹಿನಿ ವರದಿ ಮಾಡಿದೆ.