ಬೆಂಗಳೂರು: ಕಳೆದ ವರ್ಷಾಂತ್ಯದಲ್ಲಿ ಚೆಸ್ ವಿಶ್ವ ಚಾಂಪಿಯನ್ ಪಟ್ಟವೇರಿರುವ ಡಿ. ಗುಕೇಶ್ ಹಾಲಿ ವರ್ಷಾರಂಭದಲ್ಲಿ ಮೇಜರ್ ಧ್ಯಾನ್ಚಂದ್ ಖೇಲ್ರತ್ನ ಪ್ರಶಸ್ತಿಗೆ ಭಜನರಾಗಿದ್ದಾರೆ. ಇದೀಗ 2025ರ ಹೊಸ ಸವಾಲುಗಳತ್ತ ಗಮನಹರಿಸುತ್ತಿರುವುದಾಗಿ ಗುಕೇಶ್ ಹೇಳಿದ್ದಾರೆ.
ಉದ್ಯಾನನಗರಿಯಲ್ಲಿ ಭಾನುವಾರ ಖಾಸಗಿ ಕಂಪನಿಯೊಂದು ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಗುಕೇಶ್, "2025ರಲ್ಲೂ ಕಠಿಣ ಸವಾಲುಗಳು ನನ್ನ ಮುಂದಿವೆ. ಹಲವು ಹೊಸ ಮತ್ತು ಆಸಕ್ತಿದಾಯಕ ಟೂರ್ನಿಗಳು ಎದುರಾಗಲಿವೆ. ವಿಶ್ವ ಚಾಂಪಿಯನ್ಷಿಪ್ ಈಗ ಮುಗಿದ ಕಥೆ. ಅದರ ಬಗ್ಗೆ ಮತ್ತು ನಂತರ ಪ್ರಶಸ್ತಿ, ಸನ್ಮಾನಗಳ ಬಗ್ಗೆಯೂ ಖುಷಿ ಇದೆ. ಹೊಸ ಗುರಿ, ಹೊಸ ಟೂರ್ನಿಗಳ ಬಗ್ಗೆ ಯೋಚಿಸುತ್ತಿರುವೆ. ಎಂದಿನಂತೆ ನನ್ನ ಉತ್ತಮ ನಿರ್ವಹಣೆ ತೋರುವ ಮನೋಭಾವದೊಂದಿಗೆ ಆಡುವೆ. ಜತೆಗೆ ಸುಧಾರಣೆ ಕಾಣಲು ಪ್ರಯತ್ನಿಸುವೆ. ಸಾಧ್ಯವಾದಷ್ಟು ಟೂರ್ನಿಗಳನ್ನು ಗೆಲ್ಲಲು ಪ್ರಯತ್ನಿಸುವೆ' ಎಂದರು.
ಹಾಲಿ ವರ್ಷ ಜನವರಿ 17ರಿಂದ ನೆದರ್ಲೆಂಡ್ನಲ್ಲಿ ನಡೆಯಲಿರುವ ಟಾಟಾ ಸ್ಟೀಲ್ ಟೂರ್ನಿಯಲ್ಲಿ ಗುಕೇಶ್ ಮೊದಲ ಬಾರಿ ಕಣಕ್ಕಿಳಿಯಲಿದ್ದಾರೆ.