ಕ್ರೀಡೆ

ಶ್ಯಾಮ್​ನಿಖಿಲ್ ಭಾರತದ​ 85ನೇ ಗ್ರಾಂಡ್​ಮಾಸ್ಟರ್​; 12 ವರ್ಷಗಳ ಪರಿಶ್ರಮಕ್ಕೆ ಕೊನೆಗೂ ಲಭಿಸಿದ ಫಲ!

ದುಬೈ: ಅನುಭವಿ ಚೆಸ್​ ಆಟಗಾರ ಪಿ. ಶ್ಯಾಮ್​ನಿಖಿಲ್​ ಭಾರತದ 85ನೇ ಗ್ರಾಂಡ್​ಮಾಸ್ಟರ್​ ಎನಿಸಿದ್ದಾರೆ. ದುಬೈ ಪೊಲೀಸ್​ ಮಾಸ್ಟರ್ಸ್​ ಚೆಸ್​ ಟೂರ್ನಿಯಲ್ಲಿ 3ನೇ ಹಾಗೂ ಅಂತಿಮ ಜಿಎಂ ನಾರ್ಮ್​ ಪೂರೈಸುವ ಮೂಲಕ 31 ವರ್ಷದ ಶ್ಯಾಮ್​ನಿಖಿಲ್​ ಈ ಪಟ್ಟ ಒಲಿಸಿಕೊಂಡರು.

ತಮಿಳುನಾಡಿನ ಶ್ಯಾಮ್​ನಿಖಿಲ್​ 2012ರಲ್ಲಿ 19ನೇ ವಯಸ್ಸಿನಲ್ಲೇ ಗ್ರಾಂಡ್​ ಮಾಸ್ಟರ್​ ಪಟ್ಟಕ್ಕೇರುವ ಮೊದಲೆರಡು ಮಾನದಂಡಗಳನ್ನು ತಲುಪಿದ್ದರು. ಆದರೆ 3ನೇ ಮಾನದಂಡ ಪೂರೈಸಲು ಬರೋಬ್ಬರಿ 12 ವರ್ಷ ತೆಗೆದುಕೊಂಡರು. ಕೂಟದಲ್ಲಿ ಅವರು ಒಂದು ಗೆಲುವಿನೊಂದಿಗೆ 8 ಡ್ರಾ ಸಾಧಿಸಿ 2,500 ಇಎಲ್​ಒ ರೇಟಿಂಗ್​ ಪಾಯಿಂಟ್ಸ್​ ಗಳಿಸುವ ಮೂಲಕ ಗ್ರಾಂಡ್​ಮಾಸ್ಟರ್​ ಪಟ್ಟಕ್ಕೇರುವ 12 ವರ್ಷಗಳ ಕಾಯುವಿಕೆ ಕೊನೆಗೊಳಿಸಿದರು.