ಕ್ರೀಡೆ

ಅಯ್ಯೋ... ಕೊನೇ ಓವರ್​ನಲ್ಲಿ ಧೋನಿ ಔಟ್ ಆದ ಬೆನ್ನಲ್ಲೇ ಲೇಡಿ ಅಭಿಮಾನಿ ಕೊಟ್ಟ ಪ್ರತಿಕ್ರಿಯೆ ವೈರಲ್​! Chennai Super Kings

Chennai Super Kings : ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಗಳ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಐಪಿಎಲ್‌ನಲ್ಲಿ ಚೆನ್ನೈ ಆಡುವ ಪ್ರತಿ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ಸ್ಟೇಡಿಯಂಗೆ ಬರುತ್ತಾರೆ. ಮಹಿ ಬ್ಯಾಟ್‌ ಹಿಡಿದು ಮೈದಾನಕ್ಕೆ ಕಾಲಿಟ್ಟರೆ ಸಾಕು ಅಭಿಮಾನಿಗಳು ಧೋನಿ.. ಧೋನಿ.. ಎಂದು ಘೋಷಣೆ ಕೂಗುತ್ತಾರೆ.

ಧೋನಿ ಅವರು ಬ್ಯಾಟಿಂಗ್ ಮಾಡುವವರೆಗೂ ಇಡೀ ಮೈದಾನ ಧೋನಿಯ ಹೆಸರಿನಿಂದಲೇ ತುಂಬಿರುತ್ತದೆ. ಅವರೇನಾದರೂ ಔಟಾದರೆ, ಇಡೀ ಕ್ರೀಡಾಂಗಣ ಒಂದು ಕ್ಷಣ ಮೌನಕ್ಕೆ ಜಾರುತ್ತದೆ.

ಭಾನುವಾರ (ಮಾರ್ಚ್​ 30) ಗುವಾಹಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ 11ನೇ ಐಪಿಎಲ್​ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಧೋನಿ ಏಳನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಧೋನಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿ 11 ಎಸೆತಗಳಲ್ಲಿ 16 ರನ್ ಗಳಿಸಿ, ಔಟಾದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ ನಿತೀಶ್ ರಾಣಾ (81 ರನ್​, 36 ಎಸೆತ, 10 ಬೌಂಡರಿ, 5 ಸಿಕ್ಸರ್) ಅವರ ಅದ್ಭುತ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸುವ ಮೂಲಕ ಸಿಎಸ್​ಕೆ ಒಳ್ಳೆಯ ಟಾರ್ಗೆಟ್​ ನೀಡಿತು. ಚೆನ್ನೈ ಬೌಲರ್‌ಗಳಲ್ಲಿ ಖಲೀಲ್ ಅಹ್ಮದ್, ನೂರ್ ಅಹ್ಮದ್ ಮತ್ತು ಮಹೇಶ್ ಪತಿರಾಣ ತಲಾ ಎರಡು ವಿಕೆಟ್ ಪಡೆದರು. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.

ಇದಾದ ಬಳಿಕ ಗುರಿ ಬೆನ್ನತ್ತಿದ ಸಿಎಸ್​ಕೆ, ರುತುರಾಜ್ ಗಾಯಕ್ವಾಡ್ (63 ರನ್​ 44 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ರವೀಂದ್ರ ಜಡೇಜಾ (ಔಟಾಗದೆ 32 ರನ್​, 22 ಎಸೆತ, 2 ಬೌಂಡರಿ, 1 ಸಿಕ್ಸರ್) ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ, ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 176 ರನ್‌ಗಳಿಗೆ ಸೀಮಿತವಾಯಿತು. ಈ ಮೂಲಕ ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ಚೆನ್ನೈ ಎರಡನೇ ಸೋಲು ಅನುಭವಿಸಿತು.

ಕೊನೆಯ ಓವರ್‌ನಲ್ಲಿ ಧೋನಿ ಔಟ್​ ಕೊನೆಯ ಓವರ್‌ನಲ್ಲಿ ಚೆನ್ನೈ ಗೆಲ್ಲಲು 20 ರನ್‌ಗಳು ಬೇಕಾಗಿದ್ದವು. ಧೋನಿ ಸ್ಟ್ರೈಕ್‌ನಲ್ಲಿದ್ದರೆ ಸಿಎಸ್‌ಕೆ ಗೆಲ್ಲುತ್ತದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಈ ಓವರ್ ಅನ್ನು ಆರ್‌ಆರ್ ಬೌಲರ್ ಸಂದೀಪ್ ಶರ್ಮಾ ಎಸೆದರು. ಅವರು ಮೊದಲ ಎಸೆತವನ್ನು ವೈಡ್ ಮಾಡಿದರು. ಬಳಿಕ 6 ಎಸೆತಗಳಲ್ಲಿ 19 ರನ್‌ಗಳು ಬೇಕಾಯಿತು. ಮೊದಲ ಎಸೆತದಲ್ಲೇ ಧೋನಿ ಬೃಹತ್ ಶಾಟ್ ಹೊಡೆದರು. ಆದರೆ, ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹೆಟ್ಮೆಯರ್ ಓಡಿ ಬಂದು ಉತ್ತಮವಾಗಿ ಕ್ಯಾಚ್ ಪಡೆದರು. ಧೋನಿ ಔಟ್ ಆದ ನಂತರ ಮೈದಾನ ಒಂದು ಕ್ಷಣ ಸ್ತಬ್ಧವಾಯಿತು. ಇದೇ ಸಂದರ್ಭದಲ್ಲಿ ಸಿಎಸ್‌ಕೆ ಮಹಿಳಾ ಅಭಿಮಾನಿಯೊಬ್ಬರ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಪ್ರತಿಕ್ರಿಯೆ ಮೀಮ್ಸ್​ ರೂಪ ಪಡೆದುಕೊಂಡಿದ್ದು, ನೆಟ್ಟಿಗರು ಅನೇಕ ತಮಾಷೆಯ ಮೀಮ್‌ಗಳನ್ನು ರಚಿಸುತ್ತಿದ್ದಾರೆ. (ಏಜೆನ್ಸೀಸ್​)