ಕ್ರೀಡೆ

ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸನ್‌ರೈಸರ್ಸ್‌ ಹೈದರಾಬಾದ್ ಸವಾಲು

ದುಬೈ: ಸತತ ಎರಡು ಸೋಲಿನಿಂದ ಕಂಗೆಟ್ಟಿರುವ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶುಕ್ರವಾರ ನಡೆಯಲಿರುವ ಐಪಿಎಲ್-13ರ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಸೋಲು-ಗೆಲುವಿನಲ್ಲಿ ಸಮಾನದುಃಖಿಗಳಾಗಿರುವ ಉಭಯ ತಂಡಗಳು ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿವೆ. ಐಪಿಎಲ್ ಇತಿಹಾಸದಲ್ಲಿ ಅಪರೂಪಕ್ಕೆಂಬಂತೆ ಕೊನೇ ಸ್ಥಾನಕ್ಕೆ ಕುಸಿದಿರುವ ಎಂಎಸ್ ಧೋನಿ ಪಡೆ, ಈ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಕಾಣುವ ಹಂಬಲದಲ್ಲಿದೆ. ಈ ಪಂದ್ಯದಲ್ಲಿ ಸೋತ ತಂಡ ಕೊನೇ ಸ್ಥಾನ ಪಡೆಯಲಿದೆ.

ಉದ್ಘಾಟನಾ ಪಂದ್ಯದಲ್ಲಿ ಮಿಂಚಿದ ಬಳಿಕ ಗಾಯದ ಸಮಸ್ಯೆಯಿಂದ ಕಳೆದ 2 ಪಂದ್ಯಗಳಿಗೆ ಅಲಭ್ಯರಾಗಿದ್ದ ಅನುಭವಿ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಮತ್ತೊಂದೆಡೆ, ಆಲ್ರೌಂಡರ್ ಡ್ವೈನ್ ಬ್ರಾವೊ ಕೂಡ ಫಿಟ್ ಆಗಿದ್ದು, ಟೂರ್ನಿಯಲ್ಲಿ ಮೊದಲ ಬಾರಿ ಕಣಕ್ಕಿಳಿಯಲಿದ್ದಾರೆ. ಅನುಭವಿಗಳ ಆಗಮನದಿಂದಾಗಿ ಸಿಎಸ್‌ಕೆ ತಂಡದ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠಗೊಂಡಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲಿನ ರುಚಿಸಿ ತೋರಿಸಿ ಗೆಲುವಿನ ಖಾತೆ ತೆರೆದಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ಸಿಎಸ್‌ಕೆಗೆ ಹ್ಯಾಟ್ರಿಕ್ ಸೋಲಿನ ಭೀತಿ: ಮುಂಬೈ ಎದುರು ಮೊದಲ ಪಂದ್ಯದಲ್ಲಿ ಜಯ ದಾಖಲಿಸಿದ ಬಳಿಕ ಎಂಎಸ್ ಧೋನಿ ಸಾರಥ್ಯದ ಸಿಎಸ್‌ಕೆ ತಂಡ, ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೋತು ಅಂಕಪಟ್ಟಿಯಲ್ಲಿ ಕಡೇ ಸ್ಥಾನದಲ್ಲಿದೆ. ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿರುವ ಧೋನಿ ಬಳಗ ಪುಟಿದೇಳುವ ವಿಶ್ವಾಸದಲ್ಲಿದೆ. ಅಗ್ರಕ್ರಮಾಂಕದಲ್ಲಿ ಮುರಳಿ ವಿಜಯ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾಧವ್ ಸಂಪೂರ್ಣ ವಿಲರಾಗಿದ್ದು, ಸಿಎಸ್‌ಕೆ ಬದಲಾವಣೆಯ ನಿರೀಕ್ಷೆಯಲ್ಲಿದೆ.

ಆತ್ಮವಿಶ್ವಾಸದಲ್ಲಿ ಸನ್‌ರೈಸರ್ಸ್‌: ಜಾನಿ ಬೇರ್‌ಸ್ಟೋ, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್‌ರಂಥ ಅನುಭವಿ ಪಡೆ ಹೊಂದಿದ್ದರೂ ಬ್ಯಾಟಿಂಗ್ ವಿಭಾಗದಲ್ಲಿ ಇದುವರೆಗೂ ನಿರೀಕ್ಷಿತ ನಿರ್ವಹಣೆ ಬಂದಿಲ್ಲ. ರಶೀದ್ ಖಾನ್, ಟಿ.ನಟರಾಜನ್ ಬೌಲಿಂಗ್ ವಿಭಾಗದಲ್ಲಿ ಮಿಂಚುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಟೀಮ್ ನ್ಯೂಸ್:

ಚೆನ್ನೈ ಸೂಪರ್‌ಕಿಂಗ್ಸ್: ಅಂಬಟಿ ರಾಯುಡು, ಡ್ವೈನ್ ಬ್ರಾವೊ ಆಗಮನದಿಂದಾಗಿ ತಂಡದಲ್ಲಿ ಕನಿಷ್ಠ 2 ಬದಲಾವಣೆ ಪಕ್ಕಾ ಆಗಿದೆ. ರನ್ ಗಳಿಸಲು ಪರದಾಡುತ್ತಿರುವ ಮುರಳಿ ವಿಜಯ್, ರಾಯುಡುಗೆ ಸ್ಥಾನ ಬಿಟ್ಟುಕೊಡಬಹುದು. ಸ್ಯಾಮ್ ಕರ‌್ರನ್ ಸ್ಥಾನಕ್ಕೆ ಡ್ವೈನ್ ಬ್ರಾವೊ ಆಗಮಿಸಲಿದ್ದಾರೆ. ಒಂದು ವೇಳೆ ಮುರಳಿ ವಿಜಯ್‌ಗೆ ಮತ್ತೊಂದು ಅವಕಾಶ ನೀಡಿದರೆ, ಮಧ್ಯಮ ಕ್ರಮಾಂಕದಲ್ಲಿ ವಿಲರಾಗುತ್ತಿರುವ ಮಹಾರಾಷ್ಟ್ರ ಕ್ರಿಕೆಟಿಗರಾದ ಕೇದಾರ್ ಜಾಧವ್ ಅಥವಾ ಋತುರಾಜ್ ಗಾಯಕ್ವಾಡ್ ಇಬ್ಬರಲ್ಲಿ ಒಬ್ಬರನ್ನು ಹೊರಗಿಡಲಾಗುತ್ತದೆ.

ಸಂಭಾವ್ಯ ತಂಡ: ಮುರಳಿ ವಿಜಯ್/ಋತುರಾಜ್ ಗಾಯಕ್ವಾಡ್ ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ, ವಿಕೀ), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಸ್ಯಾಮ್ ಕರ‌್ರನ್/ಡ್ವೈನ್ ಬ್ರಾವೊ, ಪೀಯುಷ್ ಚಾವ್ಲಾ, ದೀಪಕ್ ಚಹರ್, ಜೋಶ್ ಹ್ಯಾಸಲ್‌ವುಡ್.

ಕಳೆದ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 44 ರನ್ ಸೋಲು.

ಸನ್‌ರೈಸರ್ಸ್‌ ಹೈದರಾಬಾದ್: ಸತತ 2 ಸೋಲಿನ ಬಳಿಕ ಗೆಲುವಿನ ಹಳಿ ಏರಿರುವ ಸನ್‌ರೈಸರ್ಸ್‌ ತಂಡಕ್ಕೆ ಮಧ್ಯಮ ಕ್ರಮಾಂಕದ್ದೇ ದೊಡ್ಡ ಚಿಂತೆ. ಬ್ಯಾಟಿಂಗ್ ವಿಭಾಗದಲ್ಲಿ ಸಾಧಾರಣ ನಿರ್ವಹಣೆ ಇದ್ದರೂ ಬೌಲರ್‌ಗಳೇ ತಂಡಕ್ಕೆ ಬಲ ತುಂಬಿದ್ದಾರೆ. ಡೆಲ್ಲಿ ವಿರುದ್ಧ ಆಡಿದ ತಂಡವನ್ನೇ ಸನ್‌ರೈಸರ್ಸ್‌ ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಅಭಿಷೇಕ್ ಶರ್ಮ, ಪ್ರಿಯಂ, ಗಾರ್ಗ್, ಅಬ್ದುಲ್ ಸಮದ್ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಹೆಚ್ಚುವರಿ ಬೌಲರ್‌ಗೆ ಒತ್ತು ನೀಡಿದರೆ ಪ್ರಿಯಂ ಗಾರ್ಗ್ ಬದಲಿಗೆ ಆಲ್ರೌಂಡರ್ ವಿಜಯ್ ಶಂಕರ್ ಕಣಕ್ಕಿಳಿಯಬಹುದು.

ಸಂಭಾವ್ಯ ತಂಡ: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೀ), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮ, ಪ್ರಿಯಂ ಗಾರ್ಗ್/ವಿಜಯ್ ಶಂಕರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಟಿ.ನಟರಾಜನ್, ಖಲೀಲ್ ಅಹಮದ್.

ಕಳೆದ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 15 ರನ್ ಜಯ.

ಪಂದ್ಯ ಆರಂಭ: ರಾತ್ರಿ: 7.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 12, ಸಿಎಸ್‌ಕೆ: 9, ಸನ್‌ರೈಸರ್ಸ್‌: 3.