ಅಹಮದಾಬಾದ್: ಉಪನಾಯಕಿ ಸ್ಮತಿ ಮಂದನಾ (100 ರನ್, 122 ಎಸೆತ,10 ಬೌಂಡರಿ) ಆಕರ್ಷಕ ಶತಕದ ನೆರವಿನಿಂದ ಭಾರತ ತಂಡ ಮಹಿಳೆಯರ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ನೂತನ ಟಿ20 ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ಎದುರು 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಹರ್ಮಾನ್‌ಪ್ರೀತ್ ಕೌರ್ ಪಡೆ 2-1ರಿಂದ ವಶಪಡಿಸಿಕೊಂಡಿದೆ. ಈ ಮೂಲಕ ಕಿವೀಸ್ ಎದುರು ಟಿ20 ವಿಶ್ವಕಪ್‌ನಲ್ಲಿ ಎದುರಾಗಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಭಾರತದ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿ 88 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು.
ಆಗ ಬ್ರೂಕ್ ಹ್ಯಾಲಿಡೇ (86 ರನ್, 96 ಎಸೆತ, 9 ಬೌಂಡರಿ, 3 ಸಿಕ್ಸರ್) ಆಸರೆಯಲ್ಲಿ 49.5 ಓವರ್‌ಗಳಲ್ಲಿ 232 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಭಾರತ ಆರಂಭಿಕ ಆಟಗಾರ್ತಿ ಶೆಾಲಿ ವರ್ಮ (12) ವಿಕೆಟ್ ಬೇಗನೆ ಕಳೆದುಕೊಂಡಿತು. ಆಗ ಸ್ಮತಿ ಮಂದನಾ ಹಾಗೂ ಯಸ್ತಿಕಾ ಭಾಟಿಯಾ (35) ಚೇಸಿಂಗ್‌ಗೆ ಬಲ ತುಂಬಿದರು. ನಂತರ ಸ್ಮತಿ ಜತೆಯಾದ ನಾಯಕಿ ಹರ್ಮಾನ್‌ಪ್ರೀತ್ ಕೌರ್ (59 ರನ್, 63 ಎಸೆತ, 6 ಬೌಂಡರಿ) ಜತೆಯಾಟದ ನೆರವಿನಿಂದ 44.2 ಓವರ್‌ಗಳಲ್ಲಿ 4 ವಿಕೆಟ್‌ಗೆ 236 ರನ್‌ಗಳಿಸಿದ ಭಾರತ ಜಯದ ಸಂಭ್ರಮ ಕಂಡಿತು.
ನ್ಯೂಜಿಲೆಂಡ್: 49.5 ಓವರ್‌ಗಳಲ್ಲಿ 232 (ಸುಜಿ ಬೇಟ್ಸ್ 4, ಪ್ಲಿಮ್ಮರ್ 39, ಲೌರೆನ್ 1, ಡಿವೈನ್ 9, ಹ್ಯಾಲಿ ಡೇ 86, ಗ್ರೀನ್ 15, ಇಸಾಬೆಲ್ಲಾ 25, ರೋವ್ 11, ತಹುಹು 24*, ಕಾರ್ಸನ್ 2, ದೀಪ್ತಿ ಶರ್ಮ 39ಕ್ಕೆ 3, ಪ್ರಿಯಾ 41ಕ್ಕೆ 2).
ಭಾರತ: 44.2 ಓವರ್‌ಗಳಲ್ಲಿ 4 ವಿಕೆಟ್‌ಗೆ 236 (ಸ್ಮತಿ 100, ಶೆಾಲಿ 12, ಯಸ್ತಿಕಾ 35, ಹರ್ಮಾನ್‌ಪ್ರೀತ್ 59*, ಜೆಮೀಮಾ 22, ರೋವ್ 47ಕ್ಕೆ 2).
8. ಸ್ಮತಿ ಮಂದನಾ (8) ಭಾರತ ಪರ ಗರಿಷ್ಠ ಏಕದಿನ ಶತಕ ಬಾರಿಸಿದ ಮಹಿಳಾ ಬ್ಯಾಟರ್ ಎನಿಸಿದರು. ಮಿಥಾಲಿ ರಾಜ್ (7) ಹಿಂದಿನ ಗರಿಷ್ಠ ಸಾಧಕಿ.